ಜಿಲ್ಲೆ

ಭಾರತೀಯರಿಗೆ ಅಧ್ಯಾತ್ಮ, ಸಂಸ್ಕೃತಿ ಅರಿವು : ರವೀಶ ತಂತ್ರಿ ಕುಂಟಾರು ಅಭಿಮತ

ಮುಳ್ಳೇರಿಯ: ಭಾರತೀಯರಾದ ನಾವು ಅಧ್ಯಾತ್ಮ, ಸಂಸ್ಕೃತಿ, ಸಂಸ್ಕಾರ ಅರಿತಿರಬೇಕು. ಭಾರತದ ಸಂಸ್ಕೃತಿ ಅತ್ಯಂತ ಶ್ರೇಷ್ಠವಾಗಿದೆ. ನಮ್ಮ ಮಕ್ಕಳು ನಮ್ಮವರಾಗಿರಬೇಕೇ ಹೊರತು ವಿದೇಶಿ ಸಂಸ್ಕೃತಿಗೆ ದಾಸರಾಗಬಾರದು ಎಂದು ರವೀಶ ತಂತ್ರಿ ಕುಂಟಾರು ಹೇಳಿದರು.

ಮುಳ್ಳೇರಿಯ ವಿದ್ಯಾಶ್ರೀ ಶಿಕ್ಷಣ ಕೇಂದ್ರದಲ್ಲಿ ಸೋಮವಾರ 2025-26ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರವೇಶೋತ್ಸವದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಬೆಳಗ್ಗೆ ಗಣಪತಿ ಹೋಮ, ಕಟ್ಟಡ ಶಿಲಾನ್ಯಾಸ ಕಾರ್ಯಕ್ರಮ ನಡೆಯಿತು. ಶಾಲಾ ಸಮಿತಿ ಅಧ್ಯಕ್ಷ ಗಣೇಶ ವತ್ಸ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಶಿಕ್ಷಕ ವೇಣುಗೋಪಾಲನ್ ನಾಯರ್, ಬಾಲಸುಬ್ರಹ್ಮಣ್ಯ ಭಟ್ ಕೋಳಿಕ್ಕಜೆ, ರಂಗನಾಥ ಶೆಣೈ, ಶೈಕ್ಷಣಿಕ ವಿಭಾಗದ ಅಧ್ಯಕ್ಷ ಶ್ರೀಪತಿ ಕಡಂಬಳಿತ್ತಾಯ ಮುಂತಾದವರು ಉಪಸ್ಥಿತರಿದ್ದರು.

ವಿದ್ಯಾರ್ಥಿಗಳನ್ನು ಮೆರವಣಿಗೆಯಲ್ಲಿ ಕರೆತಂದು ಸ್ವಾಗತಿಸಲಾಯಿತು. ಕಳೆದ ಶೈಕ್ಷಣಿಕ ವರ್ಷದಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಎಲ್ಲ ವಿಷಯಗಳಲ್ಲೂ ಎ ಪ್ಲಸ್ ಗಳಿಸಿದ ವಿದ್ಯಾರ್ಥಿಗಳು, ಎಲ್.ಎಸ್.ಎಸ್-ಯು.ಎಸ್.ಎಸ್., ಸಂಸ್ಕೃತ ಸ್ಕಾಲರ್‌ಶಿಪ್ ವಿಜೇತ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಶಾಲೆಯ ಸಂಗೀತ ಶಿಕ್ಷಕ ಬಾಲಸುಬ್ರಹ್ಮಣ್ಯ ಭಟ್ ಕೋಳಿಕ್ಕಜೆ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕಿ ಶಾರದಾ ಸ್ವಾಗತಿಸಿದರು. ಶಿಕ್ಷಕಿ ನಮಿತಾ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಗಾನಲತಾ ಎನ್. ವಂದಿಸಿದರು. ವಿದ್ಯಾರ್ಥಿಗಳು, ಪಾಲಕರು, ಶಿಕ್ಷಕ ವೃಂದ, ಆಡಳಿತ ಸಮಿತಿ ಸದಸ್ಯರು ಉಪಸ್ಥಿತರಿದ್ದರು.