ಜಿಲ್ಲೆ

ಮೈಸೂರಿನ ಶ್ರೀ ಅವಧೂತ ದತ್ತಪೀಠದಲ್ಲಿ ಸಹಸ್ರಚಂದ್ರ ದರ್ಶನ ಶಾಂತಿ ಮಹೋತ್ಸವಕ್ಕೆ ಸಂಭ್ರಮದ ತೆರೆ

Mysuru

ಮೈಸೂರು: ನಗರದ ಶ್ರೀ ಅವಧೂತ ದತ್ತಪೀಠದಲ್ಲಿ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರ ಎಂಬತ್ತನೇ ವರ್ಷದ ಜನ್ಮದಿನೋತ್ಸವ ಪ್ರಹಮ್ಮಿಕೊಂಡಿದ್ದ ಸಹಸ್ರಚಂದ್ರ ದರ್ಶನ ಶಾಂತಿ ಮಹೋತ್ಸವಕ್ಕೆ ಭಾನುವಾರ ವೈಭವಯುತ ತೆರೆ ಬಿತ್ತು.

ಫೆ.1ರಿಂದ ವಿವಿಧ ಹೋಮಗಳು, ದೇವತಾ ಪೂಜಾ ಕಾರ್ಯಗಳು ನೆರವೇರಿದವು. ಇಂದು ಸಹಸ್ರಚಂದ್ರ ದರ್ಶನ ಶಾಂತಿ ಮಹೋತ್ಸವ, ಮಾಘ ಪೂರ್ಣಿಮೆ, ಪವಮಾನ ಹೋಮ, ದತ್ತ ಹೋಮ ನಡೆಯಿತು. ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರಿಗೆ ಭಕ್ತರು ವಿವಿಧ ರೀತಿಯಲ್ಲಿ ಭಕ್ತಿ ಸಮರ್ಪಣೆ ಮಾಡಿದರು. ಜಪಾನಿ ಭಕ್ತರು ಅವರ ಭಾಷೆಯಲ್ಲಿಯೇ ಶ್ರೀಗಳ ಸಾಧನೆಗಳನ್ನು ತಿಳಿಸಿ ಭಕ್ತಿ ಸಮರ್ಪಿಸಿದರು.

ಮಲೇಷಿಯಾದ ಜ್ಞಾನ ಬೋಧ ಸಭಾದ ಸುಂದರಿ, ಜ್ಞಾನಸುಂದರಿ ಮತ್ತು ಸದಸ್ಯರು ಕೇಕ್ ಸಿದ್ಧಪಡಿಸಿದ್ದರು. ಯುನೈಟೆಡ್ ಅರಬ್ ಎಮಿರೇಟ್ಸ್‌ನ ದತ್ತ ಯೋಗ ಕೇಂದ್ರದವರು ಶ್ರೀಗಳ ಚಿತ್ರ ಇರುವ ಕ್ರಿಸ್ಟಲ್ ಪ್ಲೇಟ್‌ಅನ್ನು ಕೊಡುಗೆ ನೀಡಿದರು. ಭಕ್ತಿ ಸಮರ್ಪಣೆ ನಂತರ ಸ್ವಾಮೀಜಿಯವರ ಪಲ್ಲಕ್ಕಿ ಉತ್ಸವ ಪ್ರಾರಂಭವಾಯಿತು. ಆ ನಂತರ ಶ್ರೀಗಳು ಗುರು ನಿಲಯ ಪ್ರವೇಶ ಮಾಡಿದರು.

ಶ್ರೀಗಳ ತುಲಾಭಾರದ ನಂತರ ಸಂಜೆ ಸಪ್ತರ್ಷಿ ಸರೋವರದಲ್ಲಿ ವೈಭವಯುತ ತೆಪ್ಪೋತ್ಸವ ನಡೆಯಿತು. ಬೆಂಗಳೂರಿನಿಂದ ಆಗಮಿಸಿದ್ದ ವೈದ್ಯರ ತಂಡ ಆಶ್ರಮದ ಆಸ್ಪತ್ರೆಯಲ್ಲಿ ಶ್ರವಣ ತಪಾಸಣೆ ಉಚಿತ ಶಿಬಿರ ನಡೆಸಿ ಶ್ರವಣದೋಷ ಇರುವವರಿಗೆ ಶ್ರವಣ ಯಂತ್ರಗಳನ್ನು ವಿತರಿಸಿದರು.