ಹುಬ್ಬಳ್ಳಿ: ಇನ್ನೇನು ಕೆಲವೇ ದಿನಗಳಲ್ಲಿ ಮಹಾನಗರದಲ್ಲಿ ವಿನಾಯಕನ ವಿರಾಟ ರೂಪ ದರ್ಶನವಾಗಲಿದೆ. ವಿವಿಧ ಆಕಾರ, ರೂಪದಲ್ಲಿ ಗಣಪತಿ ಪ್ರತಿಷ್ಠಾಪನೆಯಾಗಲಿದ್ದಾನೆ. ಆಕರ್ಷಕ ಮಂಟಪ, ವಿಗ್ರಹಗಳು ಕಣ್ಮನ ಸೆಳೆಯಲಿವೆ.
ನಗರದಲ್ಲಿ ಬೃಹತ್ ಗಾತ್ರದ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡುವುದು, 11 ದಿನಗಳ ಕಾಲ ಉತ್ಸವವನ್ನು ಅದ್ದೂರಿಯಾಗಿ ಆಚರಿಸುವುದು ವಾಡಿಕೆ. ವೈವಿಧ್ಯಮಯ ಗಣೇಶ ವಿಗ್ರಹಗಳು ಭಕ್ತರನ್ನು ಸೆಳೆಯಲಿವೆ. ಈ ವಿಗ್ರಹಗಳು ನಾನಾ ವಸ್ತುಗಳಿಂದ ಮಾಡಿದ ಹಾಗೂ ಹಲವು ರೂಪದಲ್ಲಿ ಇರುವುದು ವಿಶೇಷ.
ಮಣ್ಣಿನಿಂದ ತಯಾರಿಸಿದ ಗಣೇಶ ಮೂರ್ತಿ ಒಂದೆಡೆಯಾದರೆ, ಪರಿಸರಕ್ಕೆ ಇನ್ನಷ್ಟು ಹತ್ತಿರವಾದ ಹಲವು ಬಗೆಯ ಮೂರ್ತಿಗಳು ಪ್ರತಿ ವರ್ಷ ಆಕರ್ಷಣೆಯ ಕೇಂದ್ರಬಿಂದುವಾಗುತ್ತವೆ. ಇದರೊಟ್ಟಿಗೆ ಪರಿಸರ ಕಾಳಜಿಯನ್ನೂ ಮೆರೆಯಲಾಗುತ್ತದೆ.
ಗಣಪತಿ ಮೂರ್ತಿಗಳು ಪರಿಸರ ಸ್ನೇಹಿಯಾಗಿರಬೇಕು ಎಂಬುದಕ್ಕೆ ಅನೇಕ ಸಾರ್ವಜನಿಕ ಗಣೇಶೋತ್ಸವ ಸಮಿತಿಯವರು ಓಗೊಡುತ್ತಾರೆ. ಕಳೆದ ವರ್ಷ ಹಳೇಹುಬ್ಬಳ್ಳಿ ಅಯೋಧ್ಯಾನಗರದಲ್ಲಿ ವೀರ ಕಕ್ಕಯ್ಯ ಗಜಾನನೋತ್ಸವ ಸಮಿತಿಯವರು ಪ್ರತಿಷ್ಠಾಪಿಸಿದ್ದ ನವಧಾನ್ಯದಲ್ಲಿ ಮಾಡಿದ್ದ ಸಾರ್ವಜನಿಕ ಗಣೇಶ ವಿಗ್ರಹ ಗಮನ ಸೆಳೆದಿತ್ತು. ಹಲವು ಪ್ರಶಸ್ತಿಗಳನ್ನು ಸಹ ಪಡೆದಿತ್ತು.
ಮೂರ್ತಿ ಕಲಾವಿದರಿಗೆ ಮೊದಲೇ ತಿಳಿಸಿ ಹೀಗೇ ಇರಬೇಕೆಂದು ಬೇಡಿಕೆ ಸಲ್ಲಿಸಿದರೆ ಸಿದ್ಧಪಡಿಸುತ್ತಾರೆ ಎನ್ನುತ್ತಾರೆ ಗಣೇಶೋತ್ಸವ ಸಮಿತಿಯವರು. ಇದನ್ನು ಹೆಚ್ಚಿನ ಸಮಿತಿಯವರು ಅಳವಡಿಸಿಕೊಂಡರೆ ಉತ್ಸವ ಪರಿಸರ ಸ್ನೇಹಿಯಾಗಲಿದೆ.
ಪ್ರಮುಖವಾಗಿ ಮುತ್ತು, ಹವಳ, ಕೇವಲ ಕಾಗದದಿಂದ ತಯಾರಿಸಿ ಅದರ ಮೇಲೆ ಮಣ್ಣಿನ ಲೇಪನ ಮಾಡಿ ಮೂರ್ತಿ ತಯಾರಿಸುವುದು ಒಂದು ವಿಧ. ಇದಲ್ಲದೇ ಇನ್ನೂ ಕೆಲವು ಕಲಾವಿದರು ಸಿರಿಧಾನ್ಯಗಳನ್ನು ಬಳಸಿ ಮೂರ್ತಿ ಮಾಡುತ್ತಾರೆ. ಇಂತಹ ಮೂರ್ತಿಗಳು ನೋಡುವುದಕ್ಕೆ ಮಾತ್ರವಲ್ಲ, ಜನರಲ್ಲಿ ಭಕ್ತಿ ಹೆಚ್ಚಿಸುತ್ತವೆ. ಕೆಲವು ಕಲಾವಿದರು ಕಳೆದ ವರ್ಷ ನಾಣ್ಯಗಳಿಂದ ಗಣೇಶ ಮೂರ್ತಿ ತಯಾರಿಸಿದ್ದರು. ಇದು ಕೂಡ ಭಕ್ತರನ್ನು ಸೆಳೆದಿತ್ತು.
ಹುಬ್ಬಳ್ಳಿಯ ಸರಾಫ್ ಗಟ್ಟಿ, ಶೀಲವಂತರ ಓಣಿ ಸೇರಿ ಕೆಲವು ಸಮಿತಿಯವರು ಬೆಳ್ಳಿ ಗಣೇಶನನ್ನು ಪ್ರತಿಷ್ಠಾಪನೆ ಮಾಡುತ್ತಾರೆ. ಇದರ ಜತೆಗೆ ಸಾಂಪ್ರದಾಯಿಕವಾಗಿ ಮಣ್ಣಿನ ಚಿಕ್ಕ ಮೂರ್ತಿ ಇಟ್ಟು ನಿತ್ಯ ಪೂಜೆ ಮಾಡುತ್ತಾರೆ. ಇಲ್ಲಿ ಮಂಟಪದ ಅಲಂಕಾರ ಅದ್ದೂರಿಯಾಗಿರುತ್ತದೆ. 10, 15 ನಿಮಿಷದ ಪೌರಾಣಿಕ ಹಿನ್ನೆಲೆಯ ಪ್ರದರ್ಶನಗಳನ್ನು ಸಹ ಏರ್ಪಡಿಸುವುದರಿಂದ ಉತ್ಸವ ಕಳೆಗಟ್ಟುತ್ತದೆ. ಇಲ್ಲಿನ ಸಾರ್ವಜನಿಕ ಗಣೇಶೋತ್ಸವ ಪರಿಸರ ಕಾಳಜಿ ಹೊಂದಿರುತ್ತದೆ.
ಪ್ರತಿ ವರ್ಷ ಹುಬ್ಬಳ್ಳಿ ನಗರದಲ್ಲಿ 500ಕ್ಕೂ ಹೆಚ್ಚು ಸಾರ್ವಜನಿಕ ಗಣೇಶೋತ್ಸವ ಸಮಿತಿಯವರು ಬೃಹತ್ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡುತ್ತಾರೆ. ಇದರಲ್ಲಿ ಬೆರಳಣಿಕೆಯಷ್ಟು ಸಮಿತಿಯವರು ಪರಿಸರ ಸ್ನೇಹಿ ಮೂರ್ತಿಗಳನ್ನು ಪ್ರತಿಷ್ಠಾಪಿಸುತ್ತಾರೆ. ಮಣ್ಣಿನ ಅಥವಾ ಬೆಳ್ಳಿ, ನಾಣ್ಯಗಳು, ಕಾಗದ, ಧಾನ್ಯಗಳು, ಮುತ್ತು, ಹವಳಗಳು ಹೀಗೆ ತರಹೇವಾರಿ ಪುನರ್ ಬಳಕೆ ಮಾಡಬಹುದಾದ ವಸ್ತುಗಳನ್ನು ಬಳಸಿ ಮಾಡಿದ ಗಣಪತಿ ಮೂರ್ತಿ ಇದ್ದರೆ ಉತ್ತಮ ಎಂಬ ಅಭಿಪ್ರಾಯ ಪರಿಸರ ಪ್ರೇಮಿಗಳದ್ದು.
ವರ್ಷದಿಂದ ವರ್ಷಕ್ಕೆ ಇಂತಹ ಸಮಿತಿಗಳ ಸಂಖ್ಯೆ ಹೆಚ್ಚಾದರೆ ಅದರಿಂದ ಪರಿಸರಕ್ಕೆ ದೊಡ್ಡ ಕೊಡುಗೆ ನಾವು ಕೊಡಬಹುದು. ಸರ್ವವ್ಯಾಪಿಯಾದ ಭಗವಂತ ನಿಸರ್ಗದ ಚರಾಚರಗಳಲ್ಲಿ ಕಾಣಿಸಿಕೊಳ್ಳುತ್ತಾನೆ. ಇದೇ ರೀತಿ ಕಲಾವಿದರ ಕೈಯಲ್ಲಿ ಯಾವುದೇ ವಸ್ತು ಸಿಕ್ಕರೂ ಅದಕ್ಕೆ ಗಣೇಶನ ರೂಪ ನೀಡಿ ಭಕ್ತಿ, ಭಾವ ಮೂಡಿಸುತ್ತಾರೆ. ಕೆಲವರು ಟೆಂಗಿನಕಾಯಿಯಲ್ಲಿ ಗಣೇಶನನ್ನು ಮೂಡಿಸುತ್ತಾರೆ. ಹಾಗಾಗಿ, ಸಮಿತಿಯವರು ಇಂತಹ ಕಲಾವಿದರನ್ನು ಬಳಸಿಕೊಂಡು ಪರಿಸರ ಕಾಳಜಿ ಮೆರೆಯಬೇಕೆಂಬುದು ಜನರ ಆಶಯ.
ಕಳೆದ ವರ್ಷ ಸಮಿತಿಯವರು ಹೇಳಿದ್ದರಿಂದ ಮಣ್ಣಿನಿಂದ ಮೂರ್ತಿ ತಯಾರಿಸಿ ಅದಕ್ಕೆ ಸಿರಿಧಾನ್ಯಗಳನ್ನು ಅಂಟಿಸಿ ಆಕರ್ಷಕ ವಿಗ್ರಹ ಮಾಡಿದ್ದೆ. ಕಲಾಕೃತಿಗಾಗಿ ಸುಮಾರು 50 ಕೆಜಿ ನವಣೆ, ಸಜ್ಜೆ, ರಾಗಿ, ಜೋಳ, ಸಾವೆ ಮತ್ತು ಬೇಳೆ ಕಾಳುಗಳನ್ನು ಬಳಸಲಾಗಿತ್ತು. - ಶಿವಲಿಂಗಪ್ಪ ಬಡಿಗೇರ, ಕಲಾವಿದರು, ಹುಬ್ಬಳ್ಳಿ ಟೆಂಗಿನಕಾಯಿಯಲ್ಲಿ ಗಣೇಶ ಸೇರಿ ಹಲವು ವಿಧದ ದೇವರುಗಳ ಮೂರ್ತಿ ತಯಾರಿಸುತ್ತೇವೆ. ಅಲ್ಲದೇ ರೈತರು ಬೆಳೆಯುವ ಕೃಷಿ ಉತ್ಪನ್ನಗಳಿಂದಲೂ ಅತ್ಯುತ್ತಮ ಪರಿಸರ ಪ್ರಿಯ ಗಣಪನನ್ನು ಮಾಡಬಹುದು. ಸಮಿತಿಯವರು ಮೊದಲೇ ಹೇಳಿದರೆ ಹೆಚ್ಚು ಅನುಕೂಲವಾಗುತ್ತದೆ. - ಜಗದೀಶ ಭಾವಿಕಟ್ಟಿ, ಕಲಾವಿದರು, ಧಾರವಾಡ