ಜಿಲ್ಲೆ

ಗಮಕ ಕಲೆ ಉಳಿವಿಗೆ ಅಧ್ಯಾಪಕರು ಹಾಗೂ ಗಾಯಕರು ಶ್ರಮಿಸಬೇಕು - ಎಂ.ಆರ್. ಸತ್ಯನಾರಾಯಣ

ಪಂಕಜ ಕೆ.ಎಂ.

ಬೆಂಗಳೂರು: ಹಳಗನ್ನಡ ಕಾವ್ಯ ಓದುವ, ಅದನ್ನು ಗಮಕವಾಗಿ ಸುಶ್ರಾವ್ಯವಾಗಿ ಹಾಡುವ ಮತ್ತು ವ್ಯಾಖ್ಯಾನ ನೀಡುವ ಪರಂಪರೆ ಆಧುನಿಕ ಯುಗದಲ್ಲಿ ಕಣ್ಮರೆಯಾಗುತ್ತಿದ್ದು, ಇದನ್ನು ಉಳಿಸಲು ಕನ್ನಡ ಅಧ್ಯಾಪಕರು ಹಾಗೂ ಗಾಯಕರು ಶ್ರಮಿಸಬೇಕಿದೆ ಎಂದು ಗಮಕ ವಿದ್ವಾಂಸ ಎಂ.ಆರ್. ಸತ್ಯನಾರಾಯಣ ಹೇಳಿದರು.

ಶ್ರೀ ವಿದ್ಯಾಗಣಪತಿ ಗಮಕ ಶಿಕ್ಷಣಾಲಯವು, ಶೇಷಾದ್ರಿಪುರಂ ಪ್ರೌಢಶಾಲೆಯ ಸಹಯೋಗದಲ್ಲಿ ಶಾಲಾ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ‘ಗಮಕ ಕಲಾ ಸಂಭ್ರಮ’ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಕನ್ನಡ ಕಾವ್ಯ ಓದುವ, ಗ್ರಹಿಸುವ ,ಅರ್ಥೈಸುವ ಮನಸ್ಥಿತಿ ಮರೆಯಾಗುತ್ತಿರುವ ಈ ಸಂದರ್ಭದಲ್ಲಿ ವಿದ್ಯಾಗಣಪತಿ ಶಿಕ್ಷಣಾಲಯವು ವಿದ್ಯಾರ್ಥಿಗಳಲ್ಲಿ ಹಳಗನ್ನಡ ಕಾವ್ಯಗಳ ಓದುವ ಹವ್ಯಾಸ ಬೆಳೆಸುತ್ತಿರುವುದು ಶ್ಲಾಘನೀಯ ಕಾರ್ಯ. ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆ ಇಂತಹ ಕಲೆಯ ಬೆಳವಣಿಗೆಯಲ್ಲಿ ಕೈಜೋಡಿಸಿ ಪ್ರೋತ್ಸಾಹಿಸುವುದು ಉತ್ತಮವಾಗಿದೆ ಎಂದು ಅಭಿನಂದಿಸಿದರು.

ಸಾಹಿತ್ಯ ಸಂಸ್ಕೃತಿ ಸಂಘಟನೆ: ಕನ್ನಡ ಸಾಹಿತ್ಯ ಸಂಸ್ಕೃತಿ ಸಂಘಟನೆ ಇಂದಿನ ತುರ್ತು ಆಗಬೇಕಿದೆ. ನಾಡುನುಡಿ ನೆಲಜಲದ ರಕ್ಷಣೆ ವಿಚಾರದಲ್ಲಿ ಮಕ್ಕಳು ಆಸಕ್ತಿ ಬೆಳೆಸಿಕೊಂಡು ಸನ್ಮಾರ್ಗದಲ್ಲಿ ನಡೆಯುವಂತಾಗಬೇಕು ಎಂದರು.

ಸಮಾಜ ಸೇವಕ ಕುದೂರು ದಯಾನಂದ ಅವರು ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ, ಮಕ್ಕಳಲ್ಲಿ ಸಂಸ್ಕಾರ ಇಲ್ಲವೆ ಸಂಸ್ಕೃತಿಯನ್ನು ಕಲಿಸಬೇಕು. ಇಂದಿನ ಯುವ ಪೀಳಿಗೆ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ದಾರಿ ತಪ್ಪುತ್ತಿರುವ ಮಕ್ಕಳನ್ನು ಗಮನಿಸಿ ಪೋಷಕರು, ಅಧ್ಯಾಪಕರು ಅವರನ್ನು ಸರಿದಾರಿಗೆ ತರುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕಿದೆ ಎಂದರು.

ಲೇಖಕಿ ಅಂಬುಜಾ ಪ್ರಕಾಶ್, ಶೇಷಾದ್ರಿಪುರಂ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಎಂ.ಕೆ.ಚವ್ಹಾಣ್, ಕವಿ - ಪ್ರಾಧ್ಯಾಪಕ ಡಾ.ರಾಮಲಿಂಗೇಶ್ವರ, ಸಾಹಿತಿ ಬಸವಲಿಂಗು, ಕನ್ನಡ ಸಹಪ್ರಾಧ್ಯಾಪಕ ವಿ.ಎಂ.ಮಂಜುನಾಥ್ ಇತರರು ಹಾಜರಿದ್ದರು.

ಗಮನ ವಾಚನದಲ್ಲಿ ವಿದ್ಯಾರ್ಥಿಗಳಾದ ಸುಮನ್ ಭರತ್ ಮತ್ತು ಹೆಚ್.ಆರ್. ಜೀವಿತ (ಪ್ರಥಮ), ಜಿ. ಯಶಸ್ವಿನಿ ಮತ್ತು ಎಚ್. ಎಂ. ಭಾವನ (ದ್ವಿತೀಯ), ಎ. ಸೋನಾಕ್ಷಿ ಮತ್ತು ಸಿ.ಬಿ. ಶ್ರೇಯ (ತೃತೀಯ) ಹಾಗೂ ಆರ್. ವಿನುತಾ, ತರುಣ್ ಕುಮಾರ್, ಕೆ.ಮಾನಸ (ಸಮಾಧಾನಕರ) ಬಹುಮಾನ ಪಡೆದರು.