ವಿಜಯವಾಣಿ ಸುದ್ದಿಜಾಲ ಧಾರವಾಡ
`ಗಳಗನಾಥರು ಮತ್ತು ಅವರ ಕಾದಂಬರಿಗಳು' ಕೃತಿಯು ಗಳಗನಾಥರ ಬರಹವನ್ನು ಅಮೂಲಾಗ್ರವಾಗಿ ಚರ್ಚಿಸುವುದಾಗಿದೆ. ಈ ಪುಸ್ತಕ ಭಾಷಾ ಸಂಪತ್ತನ್ನು ಒಳಗೊಂಡಿದ್ದು, ಅವರ ವ್ಯಕ್ತಿತ್ವವನ್ನು ತೋರ್ಪಡಿಸುತ್ತದೆ ಎಂದು ಸಾಹಿತಿ ರಾಘವೇಂದ್ರ ಪಾಟೀಲ ಹೇಳಿದರು.
ನಗರದ ರಂಗಾಯಣದ ಸುವರ್ಣ ಸಾಂಸ್ಕೃತಿಕ ಸಮುಚ್ಛಯದಲ್ಲಿ ಮನೋಹರ ಗ್ರಂಥ ಮಾಲಾ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಡಾ. ಕೃಷ್ಣಮೂರ್ತಿ ಕಿತ್ತೂರ ಅವರು ಸಂಶೋಽಸಿ ಬರೆದ `ಗಳಗನಾಥರು ಮತ್ತು ಅವರ ಕಾದಂಬರಿಗಳು' ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಹೊಸಗನ್ನಡ ಭಾಷೆ- ಸಾಹಿತ್ಯಕ್ಕೆೆ ಭದ್ರ ಬುನಾದಿ ಹಾಕಿದ ಪುಣ್ಯ ಪುರುಷರಲ್ಲಿ ಗಳಗನಾಥರೂ ಒಬ್ಬರು. 70ರ ದಶಕದಲ್ಲಿ ಕಾದಂಬರಿಗಳು ಜಾಗತಿಕ ಮಟ್ಟದಲ್ಲಿ ಖ್ಯಾತಿ ಹೊಂದಿದವು. ಆಧುನಿಕ ಕಲಾತ್ಮಕ ಕೃತಿಗಳನ್ನು ತುಲನೆ ಮಾಡುವ ಕಾರ್ಯವನ್ನು ಡಾ. ಕೃಷ್ಣಮೂರ್ತಿ ಕಿತ್ತೂರ ಮಾಡಿದ್ದಾರೆ ಎಂದರು.
ಹರ್ಷ ಡಂಬಳ ಮಾತನಾಡಿ, ಈ ಗ್ರಂಥವು ಒಂದೂ ಅನವಶ್ಯಕ ಪದವನ್ನು ಹೊಂದಿಲ್ಲ. ಭಾಷೆಗಳ ಹಾವಳಿಯಿಂದ ಕನ್ನಡ ಭಾಷೆ ಕ್ಷೀಣಿಸುವುದನ್ನು ಕೃತಿ ತೋರಿಸುತ್ತದೆ ಎಂದರು.
ಬಿ.ವಿ. ಕುಲಕರ್ಣಿ, ಆನಂದತೀರ್ಥ ಕಿತ್ತೂರ, ವೆಂಕಟೇಶ ಗಳಗನಾಥ, ಗಳಗನಾಥ ಮತ್ತು ನಾ.ಶ್ರೀ. ರಾಜಪುರೋಹಿತ ಪ್ರತಿಷ್ಠಾನದ ಅಧ್ಯಕ್ಷ ದುಷ್ಯಂತ ನಾಡಗೌಡ, ಮನೋಹರ ಗ್ರಂಥ ಮಾಲಾದ ರಮಾಕಾಂತ ಜೋಶಿ, ಸಮೀರ ಜೋಶಿ, ಶ್ರೀನಿವಾಸ ವಾಡಪ್ಪಿ, ಇತರರಿದ್ದರು.