ಜಿಲ್ಲೆ

ಪರಂಪರೆಗಿದೆ ಗ್ರಾಮೀಣ ಕಲೆಗಳ ತಳಹದಿ

ವಿರೂಪಾಕ್ಷಯ್ಯ ಗುದ್ನಯ್ಯನವರಮಠ

ಗಜೇಂದ್ರಗಡ: ಭಾರತೀಯ ಪರಂಪರೆ ನಮ್ಮ ಗ್ರಾಮೀಣ ಪ್ರದೇಶಗಳ ಕಲೆಗಳ ತಳಹದಿಯ ಮೇಲೆ ನಿಂತಿದೆ. ಇಂತಹ ಹಳೆಯ ಕಲೆಯಾದ ರಿವಾಯತ್ ಪದಗಳ ಸ್ಪರ್ಧೆ ಏರ್ಪಡಿಸಿರುವ ಬಾರಾಇಮಾಮ ಪೀರಾ ಯುವಕ ಸಂಘದ ಕಾರ್ಯ ಶ್ಲಾಘನೀಯ ಎಂದು ಪಂಚಮಸಾಲಿ ಯುವ ಘಟಕದ ತಾಲೂಕು ಅಧ್ಯಕ್ಷ ಮುತ್ತಣ್ಣ ಮ್ಯಾಗೇರಿ ಅಭಿಪ್ರಾಯಪಟ್ಟರು.
ಪಟ್ಟಣದ ಮೈಸೂರ ಮಠದ ಹತ್ತಿರ ಬಾರಾಇಮಾಮ ಪೀರಾ ಯುವಕ ಸಂಘದ ವತಿಯಿಂದ ಮೊಹರಂ ಹಬ್ಬದ ಅಂಗವಾಗಿ ಭಾನುವಾರ ಏರ್ಪಡಿಸಿದ್ದ ರಿವಾಯತ್ ಪದ ಹಾಡುವ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು. ರಿವಾಯತ್ ಪದಗಳು, ಜನಪದಗಳ ಕಲೆ ಕಣ್ಮರೆಯಾಗುತ್ತಿವೆ. ಇಂಥ ಕಲೆಗಳು ಕೆಲವೇ ಕೆಲ ಗ್ರಾಮಗಳಲ್ಲಿ ಉಳಿದಿದ್ದು, ಅದನ್ನು ಉಳಿಸಿ ಬೆಳೆಸುವ ಕಾರ್ಯವಾಗಬೇಕಿದೆ. ಗಜೇಂದ್ರಗಡ ಪಟ್ಟಣ ಭಾವೈಕ್ಯ ನಗರವಾಗಿದ್ದು, ಇಲ್ಲಿ 18 ಮಸೀದಿ, 18 ಭಾವಿಗಳಿವೆ. ಎಲ್ಲ ಸಮಜಾದವರು ಕೋಮು ಸೌಹಾರ್ದದಿಂದ ಜೀವನ ನಡೆಸುತ್ತಿದ್ದಾರೆ ಎಂದರು. ಸ್ಪರ್ಧೆಯಲ್ಲಿ ವಿವಿಧ ಜಿಲ್ಲೆಗಳ 22 ಕಲಾ ತಂಡಗಳು ಭಾಗವಹಿಸಿದ್ದವು. ಕೊಪ್ಪಳ ಜಿಲ್ಲೆಯ ಗಡಚಿಂತಿ ಗ್ರಾಮದ ಯಮನೂರೇಶ್ವರ ರಿವಾಯತ ಸಂಘ ಪ್ರಥಮ, ಶಾಂತಗೇರಿ ಗ್ರಾಮದ ಬೀರಲಿಂಗೇಶ್ವರ ರಿವಾಯತ್ ಸಂಘ ದ್ವಿತೀಯ, ದಿಂಡೂರ ಗ್ರಾಮದ ಶರಣಬಸವೇಶ್ವರ ರಿವಾಯತ್ ಸಂಘ ತೃತೀಯ ಬಹುಮಾನ ಪಡೆದವು.
ಅಮರಪ್ಪ ಬೂದಿಹಾಳ, ಶಾಂತಯ್ಯ ಶಾಂತಗೇರಿಮಠ, ರಜಾಕ್ ಡಾಲಾಯತ, ತುಳಸಪ್ಪ ಸುಳ್ಳದ, ಅರಿಹಂತ ಬಾಗಮಾರ, ಹಸನಸಾಬ್ ತಟಗಾರ, ನಿಂಗಪ್ಪ ಹೂಗಾರ, ವೀರೇಶ ಸಂಗಮದ, ಮುರ್ತುಜಾಸಾಬ್ ಮಳಗಾವಿ, ಬಸವರಾಜ ಹೂಗಾರ, ಗುಂಡಪ್ಪ ಪಲ್ಲೇದ, ಪ್ರಕಾಶ ಕಾರಡಗಿಮಠ, ಸುಲೇಮಾನ ಮೋಮಿನ ಇತರರು ಇದ್ದರು.