ಜಿಲ್ಲೆ

ನಿತ್ಯ ವ್ಯಾಯಾಮ, ಮಿತ ಆಹಾರ ಸೇವನೆ ಇರಲಿ

ಗಜೇಂದ್ರಗಡ: ನಿತ್ಯ ವ್ಯಾಯಾಮ, ಮಿತ ಆಹಾರ ಸೇವನೆಯೊಂದಿಗೆ ಪ್ರತಿಯೊಬ್ಬರೂ ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಗದಗ ಮಾನಸಿಕ ರೋಗ ತಜ್ಞ ಡಾ. ಜಿತೇಂದ್ರ ಮುಗಳಿ ಹೇಳಿದರು.

ಪಟ್ಟಣದ ಮೈಸೂರು ಮಠದಲ್ಲಿ ಶ್ರೀ ಅಕ್ಕಮಹಾದೇವಿ ಸ್ವಸಹಾಯ ಸಂಘ ಹಾಗೂ ಬಣಜಿಗ ಸಮಾಜದ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ಶ್ರೀ ಅಕ್ಕಮಹಾದೇವಿ ಸ್ವಸಹಾಯ ಸಂಘದ ಪ್ರಥಮ ವಾರ್ಷಿಕೋತ್ಸವ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ಉಚಿತ ಎಲುಬು ಕೀಲು ಆರೋಗ್ಯ ತಪಾಸಣೆ ಶಿಬಿರ, ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಎಲ್ಲ ವಯೋಮಾನದವರಿಗೂ ಆರೋಗ್ಯ ಸಮಸ್ಯೆಗಳು ಕಾಡುತ್ತಿವೆ. ಹಿಂದಿನ ಕಾಲದಲ್ಲಿ ರಾಸಾಯನಿಕ ರಹಿತ ಆಹಾರ ಸೇವನೆ ವ್ಯವಸ್ಥೆ ಇತ್ತು. ಇತ್ತೀಚೆಗೆ ಯಾಂತ್ರಿಕ ಕೆಲಸಗಳು ಹೆಚ್ಚಾಗುತ್ತಿದ್ದಂತೆ ರೋಗಗಳೂ ಹೆಚ್ಚುತ್ತಿವೆ. ಆರೋಗ್ಯ ರಕ್ಷಣೆಗೆ ಹೆಚ್ಚು ಒತ್ತು ನೀಡಬೇಕು ಎಂದರು.

ಬಣಜಿಗ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಉಮೇಶ ಮೆಣಸಗಿ ಮಾತನಾಡಿ, ನಾವು ಆರೋಗ್ಯ ಲೆಕ್ಕಿಸದೇ ದುಡಿಯುತ್ತೇವೆ. ಆದರೆ, ಆರೋಗ್ಯ ಸಮಸ್ಯೆ ಎದುರಾದಾಗ ದುಡಿದ ಹಣವನ್ನೆಲ್ಲ ಖರ್ಚು ಮಾಡುತ್ತೇವೆ. ಇದರ ಬದಲು ಪೌಷ್ಟಿಕ ಆಹಾರ ಸೇವಿಸಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.

ಕೀರ್ತಿ ಕೊಟಗಿ ಅವರನ್ನು ಸನ್ಮಾನಿಸಲಾಯಿತು. ಎಲುಬು ಕೀಲು ತಜ್ಞ ಮಹಾಂತೇಶ ಹಳೇಮನಿ, ಸ್ತ್ರೀರೋಗ ತಜ್ಞೆ ಡಾ. ಸುಧಾ ಹೂಲಿ, ಡಾ. ಆರ್.ಎಸ್. ಜೀರೆ ಭಾಗವಹಿಸಿದ್ದರು. ನೂರಾರು ಜನರು ಆರೋಗ್ಯ ತಪಾಸಣೆ ಮಾಡಿಸಿಕೊಂಡು ಉಚಿತ ಔಷಧ ಪಡೆದರು. ಸುವರ್ಣಾ ನಂದಿಹಾಳ, ಗೀತಾ ವಾಲಿ, ಸುಕನ್ಯಾ ಹೊಗರಿ, ಭುವನೇಶ್ವರಿ ಕತ್ತಿಶೆಟ್ಟರ, ದಾನಮ್ಮ ಪಟ್ಟೇದ, ರಾಜೇಶ್ವರಿ ಅಂಗಡಿ, ಗಂಗಮ್ಮ ಜೋಳದ, ಗಿರಿಜಾ ಬಳಿಗೇರ, ಪೂರ್ಣಿಮಾ ಅಂಗಡಿ, ಬಸವರಾಜ ಕೊಟಗಿ, ವೀರೇಶ ನಿಡಶೇಶಿ, ಮಂಜುನಾಥ ಅಂಗಡಿ, ಬಸವರಾಜ ಶೀಲವಂತರ, ಬಾಬು ಕೋಟಿ, ಅಮರಪ್ಪ ಯಲಬುಣಚಿ, ಈರಣ್ಣ ಅಂಗಡಿ, ದೊಡ್ಡಬಸವರಾಜ ಅಂಗಡಿ, ಮಹಾಂತೇಶ ಮಳಗಿ, ಮುತ್ತಣ್ಣ ಚಟ್ಟೇರ, ಪ್ರಕಾಶ ಬಳಿಗೇರ ಇದ್ದರು.