ಜಿಲ್ಲೆ

ಗಜೇಂದ್ರಗಡ ತಹಸೀಲ್ದಾರ್ ಕಚೇರಿ ಕಾಂಪೌಂಡ್ ಬಳಿಯೇ ಗೂಡಂಗಡಿ!

ಗಜೇಂದ್ರಗಡ: ಜಿಲ್ಲೆಯ ಪ್ರಮುಖ ವಾಣಿಜ್ಯ ಕೇಂದ್ರವಾಗಿರುವ ಪಟ್ಟಣದಲ್ಲಿ ಸುಗಮ ಸಂಚಾರ, ವಾಹನ ಪಾರ್ಕಿಂಗ್‌ಗೆ ಹೆಣಗಾಡುವ ಸ್ಥಿತಿಯಿದೆ. ಪುರಸಭೆ, ಸಂಚಾರ ಪೊಲೀಸರ ವೈಫಲ್ಯದಿಂದ ಸವಾರರು ಎಲ್ಲೆಂದರಲ್ಲಿ ವಾಹನಗಳನ್ನು ನಿಲುಗಡೆ ಮಾಡುತ್ತಿದ್ದಾರೆ. ನಿಗದಿತ ಪಾರ್ಕಿಂಗ್ ಜಾಗಗಳನ್ನು ಅತಿಕ್ರಮಿಸಿ ಗೂಡಂಗಡಿಗಳನ್ನು ಆರಂಭಿಸಿರುವುದು ಸಮಸ್ಯೆಯನ್ನು ಮತ್ತಷ್ಟು ಬಿಗಡಾಯಿಸಿದೆ.

ಪಟ್ಟಣದಲ್ಲಿ ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಏರಿಕೆಯಾಗುತ್ತಲಿದೆ. ದ್ವಿಚಕ್ರ ಹಾಗೂ ನಾಲ್ಕು ಚಕ್ರಗಳ ಮತ್ತು ಭಾರಿ ವಾಹನಗಳ ನಿಲುಗಡೆಗೆ ಸರಿಯಾದ ಪಾರ್ಕಿಂಗ್ ವ್ಯವಸ್ಥೆ ಎಂಬುದೇ ಇಲ್ಲ. ಇದರಿಂದ ವಾಹನಗಳನ್ನು ನಿಲ್ಲಿಸಲು ಸವಾರರು ಪ್ರಯಾಸ ಪಡುವಂತಾಗಿದೆ. ವಾಹನ ಸವಾರರು ಅನಿವಾರ್ಯವಾಗಿ ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸುತ್ತಿರುವುದರಿಂದ ಸಾರ್ವಜನಿಕರು ಮತ್ತಷ್ಟು ಸಂಕಷ್ಟ ಅನುಭವಿಸುವಂತಾಗಿದೆ.

ರಸ್ತೆಯಲ್ಲಿ ವಾಹನ ನಿಲುಗಡೆ: ಪಟ್ಟಣದ ಕಾಲಕಾಲೇಶ್ವರ ವೃತ್ತ, ದುರ್ಗಾ ವೃತ್ತ, ಜೋಡು ರಸ್ತೆಯಲ್ಲಿ ಸರಿಯಾದ ಪಾರ್ಕಿಂಗ್ ವ್ಯವಸ್ಥೆ ಇಲ್ಲ. ಸಣ್ಣ, ದೊಡ್ಡ ವಾಹನಗಳನ್ನು ರಸ್ತೆಯಲ್ಲಿಯೇ ಪಾರ್ಕಿಂಗ್ ಮಾಡುವುದರಿಂದ ಟ್ರಾಫಿಕ್ ಜಾಮ್ ಆಗುತ್ತಿದೆ. ಇದರಿಂದ ಪಾದಚಾರಿಗಳ ಓಡಾಟಕ್ಕೂ ತೊಂದರೆಯಾಗುತ್ತಿದೆ. ಕುಷ್ಟ್ಟಗಿ ರಸ್ತೆ ಹಾಗೂ ರೋಣದ ರಸ್ತೆಯಲ್ಲಿ ಬೈಕ್ ಸವಾರರು ಹಾಗೂ ಟಂಟಂ ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸುತ್ತಾರೆ. ಈ ಮಾರ್ಗದಲ್ಲಿ ದೊಡ್ಡ ವಾಹನಗಳಿಗೆ ತೊಂದರೆಯಾಗುತ್ತಿದೆ.

ಗೂಡಂಗಡಿಗಳ ಕಾರುಬಾರು: ಬಸ್ ನಿಲ್ದಾಣ ಎದುರು, ತಹಸೀಲ್ದಾರ್ ಕಚೇರಿ ಕಾಂಪೌಂಡ್ ಮುಂಭಾಗದಲ್ಲಿ ಗೂಡಂಗಡಿಗಳು ಎಲೆಎತ್ತಿವೆ. ಫುಟ್‌ಪಾತ್ ಅತಿಕ್ರಮಣ ಮಾಡಿ ರಸ್ತೆಯಲ್ಲಿಯೇ ವ್ಯಾಪಾರ ಮಾಡಲಾಗುತ್ತಿದೆ. ತಹಸೀಲ್ದಾರ್ ಕಚೇರಿ ಮುಂಭಾಗದಲ್ಲಿ ಕೆಲ ಹಣವಂತರು ಡಬ್ಬಾ ಅಂಗಡಿಗಳನ್ನಿಟ್ಟು ಅವುಗಳನ್ನು ಬಾಡಿಗೆ ನೀಡುತ್ತಿದ್ದಾರೆ. ಸರ್ಕಾರಿ ಜಾಗ ಅತಿಕ್ರಮಿಸಿ ಬಾಡಿಗೆ ಪಡೆಯುತ್ತಿದ್ದರೂ ಸಂಬಂಧಪಟ್ಟವರು ಸುಮ್ಮನೆ ಕುಳಿತಿದ್ದಾರೆ. ಹೀಗಾಗಿ ಅವರನ್ನು ತೆರವುಗೊಳಿಸಿ ಅಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕೆಂದು ಸಾರ್ವಜನಿಕರ ಆಗ್ರಹ.

ತಹಸೀಲ್ದಾರ್ ಕಚೇರಿಯ ಕಾಂಪೌಂಡ್‌ಗೆ ಹೊಂದಿಕೊಂಡು ಗೂಡಂಗಡಿಗಳಿವೆ. ಇವುಗಳನ್ನು ತೆರವುಗೊಳಿಸಿ ಎಂದು ಪುರಸಭೆ ಹಾಗೂ ಪೊಲೀಸ್ ಠಾಣೆಗೆ ಎರಡು ತಿಂಗಳ ಹಿಂದೆ ಪತ್ರ ಬರೆದಿದ್ದೆ. ಆದರೆ ಪುರಸಭೆ, ಪೋಲಿಸರಿಂದ ಸರಿಯಾಗಿ ಸ್ಪಂದನೆ ದೊರೆಯಲಿಲ್ಲ. ಗಜೇಂದ್ರಗಡದ ಅಭಿವೃದ್ಧಿ ದೃಷ್ಟಿಯಿಂದ ಈ ಪತ್ರ ಬರೆದಿದ್ದೆ. ಈ ಬಗ್ಗೆ ಪುರಸಭೆ ಮುಖ್ಯಾಧಿಕಾರಿ, ಪೋಲಿಸ್ ಇಲಾಖೆ ಹಾಗೂ ಸಾರ್ವಜನಿಕರೊಂದಿಗೆ ಸಭೆ ನಡೆಸಲಾಗುವುದು.-ಕಿರಣಕುಮಾರ ಕುಲಕರ್ಣಿ, ತಹಸೀಲ್ದಾರ್