ಜಿಲ್ಲೆ

ಗಜೇಂದ್ರಗಡ ತಾಲೂಕು ಕಸಾಪ ನಿಷ್ಕ್ರೀಯ

ರವಿ ಎಸ್. ಬಳೂಟಗಿ

ಗಜೇಂದ್ರಗಡ: ಕನ್ನಡ ಸಾಹಿತ್ಯ ಪರಿಷತ್ ಗಜೇಂದ್ರಗಡ ತಾಲೂಕು ಘಟಕದ ಅಧ್ಯಕ್ಷರ ಏಕಪಕ್ಷೀಯ ನಿರ್ಧಾರದಿಂದ ತಾಲೂಕು ಘಟಕ ಕಳೆದ ನಾಲ್ಕು ವರ್ಷಗಳಿಂದ ನಿಷ್ಕ್ರಿಯವಾಗಿದೆ. ಅದರ ಪುನಃಶ್ಚೇತನಗೊಳಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾಗಿದೆ ಎಂದು ಸದಸ್ಯರಾದ ಬಿ.ಎಸ್. ಶೀಲವಂತರ ಹೇಳಿದರು.

ಪಟ್ಟಣದ ಮೈಸೂರ ಮಠದಲ್ಲಿ ಗುರುವಾರ ಏರ್ಪಾಟಾಗಿದ್ದ ಸರ್ವ ಸದಸ್ಯರ ಸಭೆಯಲ್ಲಿ ಅವರು ಮಾತನಾಡಿ, ಕಸಾಪ ಗಜೇಂದ್ರಗಡ ತಾಲೂಕು ಘಟಕದ ಅಧ್ಯಕ್ಷರು ಏಕಪಕ್ಷೀವಾಗಿ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದಾರೆ. ಬಹಳಷ್ಟು ಜನರು ದತ್ತಿ ನಿಧಿಗಳನ್ನು ನೀಡಿದ್ದಾರೆ. ಅವುಗಳನ್ನು ಯಾವ ಸಂದರ್ಭದಲ್ಲಿ ಬಳಕೆ ಮಾಡಿಕೊಳ್ಳಲಾಗಿದೆ ಎಂದು ಲೆಕ್ಕಪತ್ರಗಳನ್ನು ನೀಡಿಲ್ಲ. ಕಳೆದ ನಾಲ್ಕು ವರ್ಷಗಳಲ್ಲಿ ಒಂದು ವರ್ಷವೂ ರಾಜ್ಯೋತ್ಸವ ಆಚರಿಸಿಲ್ಲ. ಈ ಸಭೆ ಯಾರ ವಿರುದ್ಧವೂ ಅಲ್ಲ. ಬದಲಾಗಿ ನಿಷ್ಕ್ರಿಯವಾಗಿರುವ ಘಟಕ ಪುನಃಶ್ಚೇತಗೊಳಿಸಲು ಚರ್ಚಿಸಲು ಕರೆಯಲಾಗಿದೆ ಎಂದರು.

ಸದಸ್ಯ ಬಸವರಾಜ ಕೋಟಗಿ ಮಾತನಾಡಿ, ಕಸಾಪ ರಾಜ್ಯ ಹಾಗೂ ಜಿಲ್ಲಾ ಘಟಕಗಳ ಅಧ್ಯಕ್ಷರನ್ನು ಆಜೀವ ಸದಸ್ಯರು ಮತದಾನ ಮಾಡುವ ಮೂಲಕ ಆಯ್ಕೆ ಮಾಡಲಾಗುತ್ತದೆ. ಆದರೆ, ತಾಲೂಕು ಘಟಕದ ಅಧ್ಯಕ್ಷರನ್ನು ರಾಜಕೀಯ ಪ್ರೇರಿತವಾಗಿ ಆಯ್ಕೆ ಮಾಡಲಾಗುತ್ತದೆ. ಇದು ಬದಲಾಗಬೇಕು. ಸಾಹಿತ್ಯ ಸಮ್ಮೇಳನವನ್ನು ಕೇವಲ ರಾಜಾಶ್ರಯದ ಮೂಲಕ ನಡೆಸಿಲ್ಲ. ಬದಲಾಗಿ ಸಾರ್ವಜನಿಕರಿಂದ ದೇಣಿಗೆ ಪಡೆದು ನಡೆಸಲಾಗಿದೆ. ಯಾವುದೇ ಸಂಘ, ಸಂಸ್ಥೆಯಲ್ಲಿರುವವರು ಪ್ರಶ್ನೆ ಮಾಡುವ ಪ್ರವೃತ್ತಿ ಹೆಚ್ಚಿದಂತೆಲ್ಲ ಸಂಘ, ಸಂಸ್ಥೆ ಸಕ್ರಿಯವಾಗಿ, ಕ್ರಿಯಾಶೀಲವಾಗಿ ಕೆಲಸ ಮಾಡುತ್ತದೆ ಎಂದು ತಿಳಿಸಿದರು.

ಐ.ಕೆ. ಬಾಗವಾನ ಮಾತನಾಡಿ, ಈ ಹಿಂದೆ ಅಧ್ಯಕ್ಷರಾಗಿದ್ದ ಐ.ಎ. ರೇವಡಿ ಅವರು ಉತ್ತಮ ಕೆಲಸ ಮಾಡಿದ್ದಾರೆ. ತಾಲೂಕು ಘಟಕದಿಂದ ಕನಿಷ್ಠ ತಿಂಗಳಿಗೊಂದು ಕಸಾಪ ಚಟುವಟಿಕೆ ನಡೆಯುವಂತಾಗಲಿ ಎಂದು ಆಶಿಸಿದರು. ಶರಣಪ್ಪ ಪಟ್ಟೇದ, ಹುಚ್ಚಪ್ಪ ಹಾವೇರಿ, ಚೈತ್ರಾ ವಿಶ್ವಬ್ರಾಹ್ಮಣ, ಎಂ.ಬಿ. ಸೋಂಪೂರ, ಬಸವರಾಜ ಅಂಗಡಿ, ಶಿವಾಜಿ ಹೊರಪೇಟಿ, ವಿಜಯಕುಮಾರ ನೂಲ್ವಿ, ಮಹಾಂತೇಶ ಮಳಗಿ, ಸುರೇಶ ಪತ್ತಾರ, ಎಂ.ಎ. ಮಾಳಗಾವಿ, ಗವಿಸಿದ್ದಪ್ಪ ಬೋಸಲೆೆ, ಯು.ಬಿ. ಹಿರೇಹಾಳ, ಆರ್.ಎಸ್. ಇಟಗಿ, ಗಣೇಶ ರಾಠೋಡ, ರವಿಚಂದ್ರ ಗಾರಗಿ, ಕೆ.ಎಸ್. ಸಾಲಿಮಠ, ದಾವಲಸಾಬ್‌ತಾಳಿಕೋಟಿ, ಭುವನೇಶ್ವರಿ ಕತ್ತಿಶೆಟ್ಟರ, ಲಲಿತಾ ವಿಶ್ವಬ್ರಾಹ್ಮಣ, ಇತರರು ಪಾಲ್ಗೊಂಡಿದ್ದರು.