ಬ್ಯಾಡಗಿ: ಗಜೇಂದ್ರಗಡ-ಸೊರಬ ರಾಜ್ಯ ಹೆದ್ದಾರಿಯ ಅಗಸನಹಳ್ಳಿ-ಶಿಡೇನೂರ ಮಧ್ಯೆ ರಸ್ತೆ ನಿರ್ಮಿಸಲು 22 ಕೋಟಿ ರೂ. ವೆಚ್ಚದ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಕಾಮಗಾರಿಗೆ ಚಾಲನೆ ನೀಡಲಾಗುತ್ತದೆ ಎಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.
ಪಟ್ಟಣದ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ ಬಿಎ, ಬಿಕಾಂ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ, ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ, ಪಠ್ಯೇತರ ಚಟುವಟಿಕೆಗಳ ಸಮಾರೋಪ ಸಮಾರಂಭ, ಆರೋಗ್ಯ ಇಲಾಖೆ ಸಹಯೋಗದಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ ಹಾಗೂ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯಡಿ ಫಲಾನುಭವಿಗಳಿಗೆ ಪ್ರಶಸ್ತಿ ಪತ್ರ ವಿತರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
2016-17ರಲ್ಲಿ ಬ್ಯಾಡಗಿ ಮುಖ್ಯರಸ್ತೆಯನ್ನು ಎರಡು ಹಂತದಲ್ಲಿ ಸುಮಾರು 12 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ರಸ್ತೆ ವಿಸ್ತರಣೆ ತೀವ್ರ ಅಗತ್ಯವಾಗಿದೆ. ಪಟ್ಟಣದ ಮಧ್ಯಭಾಗದಲ್ಲಿ ರಸ್ತೆ ಕಾಮಗಾರಿ ಬಾಕಿ ಉಳಿದಿದ್ದು, ಬರುವ ದಿನಗಳಲ್ಲಿ ಕಾಮಗಾರಿ ಕಾರ್ಯಾರಂಭವಾಗಲಿದೆ. ಪಟ್ಟಣದ ಅಗಸನಹಳ್ಳಿ-ಶಿಡೇನೂರು ರಸ್ತೆಯಲ್ಲಿ ಸಿ.ಡಿ. ಹಾಗೂ ಎರಡೂ ಬದಿ ಕಾಲುವೆ, ರಸ್ತೆ ನಿರ್ಮಿಸಲು ಸೂಚಿಸಲಾಗಿದೆ. ಇದಕ್ಕಾಗಿ ಸರ್ಕಾರಿಂದ 22 ಕೋಟಿ ರೂ. ಮಂಜೂರಾಗಿದೆ ಎಂದರು.
ಬ್ಯಾಡಗಿ ಹಾಗೂ ಚಿಕ್ಕಬಾಸೂರಿನ ಸರ್ಕಾರಿ ಪದವಿ ಕಾಲೇಜ್ ಆರಂಭವಾಗಿ 17 ವರ್ಷ ಕಳೆದಿವೆ. ಸ್ವಂತ ಕಟ್ಟಡ, ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಅಭಿವೃದ್ಧಿಯಾಗಿವೆ. ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ ಎಂದರು.
ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯಡಿ ತರಬೇತಿ ಪಡೆದ ಫಲಾನುಭವಿಗಳಿಗೆ ಶಾಸಕರು ಪ್ರಮಾಣಪತ್ರ ವಿತರಿಸಿದರು. ಪ್ರಾಚಾರ್ಯ ಡಾ.ಮಲ್ಲಿಕಾರ್ಜುನ ಕಡ್ಡಿಪುಡಿ, ಚಂದ್ರಶೇಖರ ಸಿದ್ದಪ್ಪನವರ, ತಾಲೂಕು ಆರೋಗ್ಯಾಧಿಕಾರಿ ಡಾ. ಕಾಂತೇಶ ಭಜಂತ್ರಿ, ದಾನಪ್ಪ ಚೂರಿ, ರುದ್ರಪ್ಪ ಹೊಂಕಣದ, ಬೀರಪ್ಪ ಬಣಕಾರ, ಶಿವಾನಂದ ಹಡಪದ, ಕಲಾವಿದ ಕೆ.ಕೆ. ವಿರೂಪಾಕ್ಷಪ್ಪ, ದುಂಡೆಪ್ಪ ಕಾಯಕದ, ಎಚ್.ಜಿ. ಸಣ್ಣಗೌಡ್ರ, ಎಫ್.ಎಚ್. ಗಿಡ್ಡಣ್ಣನವರ, ಬಿ.ಎಸ್. ಚಿಕ್ಕಣ್ಣನವರ ಇದ್ದರು. ಸುಪ್ರೀತಾ ಹಿರೇಮಠ, ನಿಸರ್ಗ ಎಂ., ಪ್ರಿಯಾಂಕ ದೂಳಿಕೊಪ್ಪ ಕಾರ್ಯಕ್ರಮ ನಿರ್ವಹಿಸಿದರು.