ಮೈಸೂರು: ಅಮಾವಾಸ್ಯೆ ಹಿನ್ನೆಲೆಯಲ್ಲಿ ದಸರಾ ಗಜಪಡೆಯ ತಾಲೀಮು ಸೋಮವಾರ ಒಂದು ದಿನ ಮಟ್ಟಿಗೆ ರದ್ದುಪಡಿಸಲಾಗಿತ್ತು. ಹೀಗಾಗಿ ಇವುಗಳಿಗೆ ದಿನವಿಡೀ ವಿಶ್ರಾಂತಿ ದೊರೆಯಿತು.
ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸುವ ಗಜಪಡೆಗೆ ಅಮಾವಾಸ್ಯೆ ದಿನದಂದು ವಿರಾಮ ನೀಡುವ ಪದ್ಧತಿಯನ್ನು ಮಾವುತ, ಕಾವಾಡಿಗಳು ಅನುಸರಿಸುತ್ತಾ ಬಂದಿದ್ದಾರೆ. ಅಂತೆಯೇ ಅಮಾವಾಸ್ಯೆಯ ದಿನವಾದ ಸೋಮವಾರ ತಾಲೀಮಿಗೆ ಆನೆಗಳನ್ನು ಕರೆದೊಯ್ಯಲಿಲ್ಲ.
ಎಲ್ಲ 9 ಆನೆಗಳಿಗೆ ಮಾವುತ, ಕಾವಾಡಿಗಳು ಆಹಾರ ಪೂರೈಸಿ, ದಿನಕ್ಕೂ 3-4 ಬಾರಿ ನೀರು ಕುಡಿಸಿದರು. ಗಜಗಳಿಗೆ ಜಳಕ ಮಾಡಿಸಿ, ಪೋಷಿಸಿದರು. ಮಾವುತ ಮತ್ತು ಕಾವಾಡಿಗಳು ಆನೆಗಳನ್ನು ದೇವರೆಂದು ಭಾವಿಸಿದ್ದು, ಅಮಾವಾಸ್ಯೆಯ ದಿನ ಆನೆಗಳನ್ನು ಸ್ನಾನ ಮಾಡಿಸಿ ಪೂಜೆ ಸಲ್ಲಿಸುವ ಪದ್ಧತಿ ರೂಢಿಯಲ್ಲಿ ಇದೆ. ಅಮಾವಾಸ್ಯೆ ದಿನ ಆನೆಗಳ ವರ್ತನೆಯಲ್ಲಿ ಬದಲಾಗಬಹುದು ಎಂಬ ಮುಂದಾಲೋಚನೆಯಿಂದ ಬಿಡಾರದಲ್ಲೇ ಕಟ್ಟಿಹಾಕಿ ಆರೈಕೆ ಮಾಡಿದರು.
ಯಾವುದೇ ಅಭ್ಯಾಸಕ್ಕೆ ಹೋಗದ ಆನೆಗಳು ಸಮಯಕ್ಕೆ ಸರಿಯಾಗಿ ಆಲದ ಸೊಪ್ಪು, ಹಸಿ ಹುಲ್ಲು, ಕುಸುರೆ, ಪೌಷ್ಠಿಕ ಆಹಾರ ಸೇವಿಸಿ, ನೀರು ಕುಡಿದು ಲವಲವಿಕೆಯಿಂದ ಸಂಭ್ರಮಿಸಿದವು.
ಅರಮನೆ ವೀಕ್ಷಣೆಗೆ ಬಂದಿದ್ದ ಪ್ರವಾಸಿಗರು ದೂರದಿಂದಲೇ ದಸರಾ ಗಜಪಡೆಯನ್ನು ಕಣ್ತುಂಬಿಕೊಂಡರು. ಆದರೆ, ಮಾವುತ, ಕಾವಾಡಿಗಳನ್ನು ಹೊರತುಪಡಿಸಿ ಬೇರೆ ಯಾರೂ ಆನೆಗಳ ಬಳಿ ಹೋಗದಂತೆ ಕಟ್ಟೆಚ್ಚರ ವಹಿಸಲಾಗಿತ್ತು.
ಮಂಗಳವಾರದಿಂದ ಎಂದಿನಂತೆ ಅರಮನೆಯಿಂದ ಜಂಬೂಸವಾರಿ ಮಾರ್ಗದಲ್ಲಿ ತಾಲೀಮು ನಡೆಸಲಿವೆ. ನಾಳೆ ಅಭಿಮನ್ಯು ಹೊರತುಪಡಿಸಿ ಧನಂಜಯ ಆನೆಗೆ ತೊಟ್ಟಿಲು ಕಟ್ಟಿ ಭಾರ ಹೊರಿಸುವ ತಾಲೀಮು ನಡೆಸಲಾಗುತ್ತದೆ.