ಮೂಡಿಗೆರೆ ತಾಲೂಕಿನ ಹೊಸಹಳ್ಳಿ ಗ್ರಾಮದ ಕಾಫಿ ತೋಟದಲ್ಲಿ ಕಾಡಾನೆಗಳ ಗುಂಪು. 
ಜಿಲ್ಲೆ

ಕಾನಹಳ್ಳಿಯಲ್ಲಿ ಬೀಡು ಬಿಟ್ಟ ಗಜಪಡೆ

ಎಸ್.ಎನ್.ರವೀಂದ್ರ

ಮೂಡಿಗೆರೆ: ಬೇಲೂರು ಭಾಗದಿಂದ ಸೋಮವಾರ 16 ಕಾಡಾನೆಗಳು ತಾಲೂಕಿಗೆ ಲಗ್ಗೆಯಿಟ್ಟಿದ್ದು ಗೋಣಿಬೀಡು ಸಮೀಪದ ಜಿ.ಹೊಸಹಳ್ಳಿ, ಚೀಕನಹಳ್ಳಿ, ಅರೇಹಳ್ಳಿ, ಮಲಸಾವರ, ಮಾಕೋನಹಳ್ಳಿ ಸುತ್ತಮುತ್ತಲ ಪ್ರದೇಶದಲ್ಲಿ ತಿರುಗಾಡಿ ಗುರುವಾರ ಕಾನಹಳ್ಳಿ ಅರಣ್ಯದಲ್ಲಿ ಬೀಡುಬಿಟ್ಟಿವೆ. ಆನೆಗಳ ಹಾವಳಿಯಿಂದ ಜನರ ರಸ್ತೆಯಲ್ಲಿ ಓಡಾದಂತಾಗಿದೆ.

ಕಾಡಾನೆಗಳ ಗುಂಪಿನಲ್ಲಿ ಎರಡು ಮರಿಯಾನೆ ಕೂಡ ಇವೆ. ಕಾಫಿ ತೋಟದಲ್ಲಿ ತಿರುಗಾಡುತ್ತ ಅಪಾರ ಪ್ರಮಾಣದಲ್ಲಿ ಕಾಫಿ ಗಿಡ, ಭತ್ತದ ಗದ್ದೆಯನ್ನು ಧ್ವಂಸಗೊಳಿಸುತ್ತಿವೆ. 5 ದಿನದಿಂದ ಕೃಷಿಕರು ತೋಟ, ಗದ್ದೆ ಕೆಲಸಕ್ಕೆ ತೆರಳಲು ಹಿಂಜರಿಯುತ್ತಿದ್ದಾರೆ. ವಿದ್ಯಾರ್ಥಿಗಳು, ಪಟ್ಟಣಕ್ಕೆ ತೆರಳುವವರು ಗ್ರಾಮೀಣ ಭಾಗದಿಂದ ಮುಖ್ಯ ರಸ್ತೆವರೆಗೆ ನಡೆದು ಬಸ್ ಹಿಡಿಯಬೇಕಾಗಿದೆ. ಅವರು ಕಾಡಾನೆಗಳ ಭಯದಲ್ಲೇ ಓಡಾಡುವಂತಾಗಿದೆ.ಎರಡು ವರ್ಷಗಳಿಂದ ಬೇಲೂರು ಹಾಗೂ ಸಕಲೇಶಪುರ ಭಾಗದಿಂದ ಆಗಾಗ ಕಾಡಾನೆಗಳ ಹಿಂಡು ಗೋಣಿಬೀಡು ಹೋಬಳಿ ಗ್ರಾಮಗಳಿಗೆ ಬರುತ್ತಿವೆ. ಹಳ್ಳಿಗಳಿಗೆ ಪ್ರತಿದಿನ ತೆರಳುವ ವ್ಯಾಪಾರಿಗಳು ಇತ್ತೀಚೆಗೆ ಕಾಡಾನೆ ಭಯದಿಂದ ಹಳ್ಳಿಗಳತ್ತ ಹೋಗುತ್ತಿಲ್ಲ. ವ್ಯಾಪಾರಿಗಳು ಗ್ರಾಮಕ್ಕೆ ಬಂದರೆ ತರಕಾರಿ, ಹಣ್ಣು, ದವಸ ಧಾನ್ಯಗಳನ್ನು ಜನ ಖರೀದಿಸುತ್ತಾರೆ. ವ್ಯಾಪಾರಿಗಳು ಹಳ್ಳಿಗಳಿಗೆ ಹೋಗದಿದ್ದರೆ ಗ್ರಾಮೀಣ ಜನರು ಗುರುವಾರ ಗೋಣಿಬೀಡಿನಲ್ಲಿ ನಡೆಯುವ ಸಂತೆ ಅಥವಾ ಮೂಡಿಗೆರೆಗೆ ಹೋಗಿ ಖರೀದಿಸಬೇಕು. ಕಾಡಾನೆಗಳು ಎಲ್ಲಿವೆ ಎಂದು ತಿಳಿಯಲು ಅರಣ್ಯ ಇಲಾಖೆ ಅಲ್ಲಲ್ಲಿ ಡಿಜಿಟಲ್ ಫಲಕ ಅಳವಡಿಸಿದೆ. ಅದನ್ನು ನೋಡಿ ಜನ ಭಯದಿಂದಲೇ ಮನೆಯತ್ತ ತೆರಳುತ್ತಿದ್ದಾರೆ.ಗೋಣಿಬೀಡು, ಜಿ.ಹೊಸಹಳ್ಳಿ, ಬೆಟ್ಟದಮನೆ, ಕಿರುಗುಂದ, ಕಜ್ಜೆಹಳ್ಳಿ, ಉಗ್ಗೆಹಳ್ಳಿ, ಹಳೇಮೂಡಿಗೆರೆ, ಹಳಸೆ, ಮಾಕೋನಹಳ್ಳಿ, ನಂದಿಪುರ ಮತ್ತಿತರ ಗ್ರಾಮಗಳಿಗೆ ಕಾಡಾನೆಗಳು ಸಕಲೇಶಪುರ ಮತ್ತು ಬೇಲೂರು ತಾಲೂಕಿನಿಂದ ಆಗಾಗ ಗುಂಪುಗೂಡಿ ಬರುತ್ತವೆ. ಕೆಲವೊಮ್ಮೆ ಒಂಟಿ ಸಲಗ ಜನರಿಗೆ ಇನ್ನಿಲ್ಲದ ತೊಂದರೆ ನೀಡುತ್ತಿದೆ. ಅರಣ್ಯ ಇಲಾಖೆಯಿಂದ ಕಾಡಾನೆ ನಿಯಂತ್ರಿಸಲು ಟಾಸ್ಕ್ ಫೋರ್ಸ್ ರಚಿಸಿದ್ದರೂ ಪ್ರಯೋಜನವಿಲ್ಲ. ಕಾಡಾನೆ ಗ್ರಾಮಕ್ಕೆ ಬಂದಾಗ ಅರಣ್ಯ ಇಲಾಖೆಯಿಂದ ಪಟಾಕಿ ಸಿಡಿಸಿ ಕಾಡಿಗೆ ಓಡಿಸಲಾಗುತ್ತಿದೆ. ಒಂದೆರಡು ದಿನದಲ್ಲಿ ಮತ್ತೆ ಅದೇ ಗ್ರಾಮದಲ್ಲಿ ಪ್ರತ್ಯಕ್ಷವಾಗುತ್ತದೆ. ಕಾಡಾನೆ ಹಾವಳಿಗೆ ಸರ್ಕಾರ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ವಕೀಲ ಕೆ.ಸಿ.ಚಂದ್ರಶೇಖರ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.