ಶ್ರೀರಂಗಪಟ್ಟಣ: ತಾಲೂಕಿನ ಕಾವೇರಿ ನದಿಯ ನಡುಗಡ್ಡೆ ಗೌತಮ ಕ್ಷೇತ್ರದ ಗಜಾನನ ಸ್ವಾಮೀಜಿ ಹಾಗೂ ಅವರ ಪರಿವಾರವನ್ನು ಅಗ್ನಿಶಾಮಕ ದಳ ಸಿಬ್ಬಂದಿ ಕೊನೆಗೂ ಸುರಕ್ಷಿತವಾಗಿ ಸ್ಥಳಾಂತರಿಸಿದರು.
ತಾಲೂಕಿನ ದೊಡ್ಡೇಗೌಡನಕೊಪ್ಪಲು ಗ್ರಾಮ ಹೊರವಲಯದ ಕಾವೇರಿ ನದಿಯ ನಡುಗಡ್ಡೆಯಲ್ಲಿ ಸಿಲುಕಿದ್ದ ಸ್ವಾಮೀಜಿ ಮತ್ತು ಅವರ ತಾಯಿ ಮಾತಾಜಿ ಕೋಕಿಲಾಬಾಯಿ ಹಾಗೂ ಸೇವಕಿ ರತ್ನಮ್ಮ ಅವರನ್ನು ಸ್ಥಳಾಂತರಿಸಲು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಹರೀಶ್ ನೇತೃತ್ವದಲ್ಲಿ ಒಟ್ಟು ಮೂವರು ಅಧಿಕಾರಿಗಳು ಗುರುವಾರ ತೆರಳಿದ್ದರು. ನದಿಯಲ್ಲಿ ನೀರು ಅಧಿಕವಾಗಿದ್ದ ಹಿನ್ನೆಲೆಯಲ್ಲಿ ದೋಣಿ ದಾಟಿಸಲು ಸಮಸ್ಯೆ ಎದುರಾಗಿ ರಕ್ಷಣಾ ಕಾರ್ಯ ಅರ್ಧಕ್ಕೆ ನಿಂತಿತ್ತು. ಅಲ್ಲದೆ ಸಮಯ ಮೀರಿ ಕತ್ತಲೆ ಆವರಿಸಿದ ಪರಿಣಾಮ ಎಲ್ಲರೂ ಮಠದಲ್ಲೇ ಉಳಿದುಕೊಂಡಿದ್ದರು.
ಬಳಿಕ ಸ್ಥಳಕ್ಕೆ ಕೆ.ಆರ್.ಸಾಗರದ ಮದ್ರಾಸ್ ಇಂಜಿನಿಯರಿಂಗ್ ಗ್ರೂಪ್ಸ್ (ಎಂಇಜಿ) ತಂಡದ ವಿಶೇಷ ದೋಣಿಗಳನ್ನು ತರಿಸಲಾಗಿತ್ತು. ಸ್ಥಳದಲ್ಲಿ ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ ಹಾಗೂ ತಾಪಂ ಇಒ ವೇಣು ನೇತೃತ್ವದಲ್ಲಿ ತಾಲೂಕು ಆಡಳಿತದ ಅಧಿಕಾರಿಗಳು ಮೊಕ್ಕಾಂ ಹೂಡಿದ್ದರು.
ನಡುಗಡ್ಡೆಯಲ್ಲಿ ಅಗ್ನಿಶಾಮಕ ದಳದ ಅಧಿಕಾರಿಗಳು ಸಿಲುಕಿದ್ದ ವಿಚಾರ ತಿಳಿದು ಸ್ಥಳಕ್ಕೆ ದೌಡಾಯಿಸಿ ಆಗಮಿಸಿದ ಅಗ್ನಿಶಾಮಕ ದಳದ ಮುಖ್ಯ ಅಧಿಕಾರಿ ಜಯರಾಮ್, ಪ್ರಾದೇಶಿಕ ಅಧಿಕಾರಿ ಚಂದನ್ ಹಾಗೂ ಮೈಸೂರು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಗುರುರಾಜ್, ಮಂಡ್ಯದ ಅಗ್ನಿಶಾಮಕ ರಮೇಶ್ ಸೇರಿದಂತೆ ಹಲವರು ಶುಕ್ರವಾರ ಮುಂಜಾನೆಯೇ ವಿಶೇಷ ಕಾರ್ಯಾಚರಣೆ ನಡೆಸಿ ಕೊನೆಗೂ ಗಜಾನನ ಸ್ವಾಮೀಜಿ, ಇಬ್ಬರು ಅನುಯಾಯಿಗಳು ಹಾಗೂ ಸಿಬ್ಬಂದಿಯನ್ನು ನಡುಗಡ್ಡೆಯಿಂದ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದರು.
ಸ್ವಾಮಿಜಿಗೆ ಕ್ಲಾಸ್: ಕಾವೇರಿ ಪ್ರವಾಹ ಉಂಟಾಗುವ ಮುನ್ನ ತಾಲೂಕು ಆಡಳಿತದ ನಿರ್ದೇಶನ ಹಾಗೂ ಸೂಚನೆ ಅನುಸರಿಸದೆ ಮೊಂಡಾಟ ಮೆರೆದ ಸ್ವಾಮೀಜಿ ಮೇಲೆ ಅಗ್ನಿಶಾಮಕದಳದ ಹಿರಿಯ ಅಧಿಕಾರಿಗಳು ಸಿಡಿಮಿಡಿಗೊಂಡರು.
ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿ-ಸಿಬ್ಬಂದಿಗೆ ಇಷ್ಟೊಂದು ಪ್ರಯಾಸ ನೀಡುವ ಬದಲು ಮೊದಲೇ ಸುರಕ್ಷತೆಗೆ ಆದ್ಯತೆ ನೀಡಿದ್ದಲ್ಲಿ ಈ ಪ್ರಮೇಯ ಎದುರಾಗುತ್ತಿರಲ್ಲಿಲ್ಲ. ಒಂದು ವೇಳೆ ಸ್ವಾಮೀಜಿ ಸೇರಿದಂತೆ ಅವರ ಅನುಯಾಯಿಗಳು ಅಥವಾ ಸಿಬ್ಬಂದಿ ಅನಾಹುತಕ್ಕೆ ಸಿಲುಕಿದ್ದರೆ ಯಾರು ಹೊಣೆ ಎಂದು ಪ್ರಶ್ನಿಸಿದರಲ್ಲದೆ, ಮುಂದೆ ಇಂತಹ ಸ್ಥಿತಿಗೆ ಅವಕಾಶ ಕೊಡದೆ ಸರ್ಕಾರದ ಆದೇಶ ಗೌರವಿಸುವಂತೆ ತಾಕೀತು ಮಾಡಿದರು.