ಜಿಲ್ಲೆ

ಹಿಂದು ಮಹಾಗಣಪತಿ ವಿಸರ್ಜನಾ ಮೆರವಣಿಗೆ ಅದ್ದೂರಿ

ರೇಷ್ಮೆ ನಗರ ಡೆಸ್ಕ್

ಮಾಗಡಿ: ಪಟ್ಟಣದ ಡಾ. ಶಿವಕುಮಾರಸ್ವಾಮೀಜಿ ಸರ್ಕಲ್‌ನಲ್ಲಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯಿಂದ ಪ್ರತಿಷ್ಠಾಪಿಸಿದ್ದ ಹಿಂದು ಮಹಾಗಣಪತಿ ವಿಸರ್ಜನಾ ಮೆರವಣಿಗೆ ಹಾಗೂ ಶೋಭಾಯಾತ್ರೆ ಮಹೋತ್ಸವ ಸಾಂಸ್ಕೃತಿಕ ಕಲಾ ತಂಡಗಳೊಂದಿಗೆ ಅತ್ಯಂತ ವಿಜೃಂಭಣೆಯಿಂದ ಭಾನುವಾರ ನಡೆಯಿತು.

ಕಳೆದ 4 ದಿನಗಳಿಂದ ವಿವಿಧ ಸಾಂಸ್ಕೃತಿಕ ಹಾಗೂ ಮನರಂಜನಾ ಕಲಾತಂಡಗಳ ನೃತ್ಯದೊಂದಿಗೆ ಧಾರ್ಮಿಕ ಪೂಜಾ ಕೈಂಕರ್ಯ ಹಮ್ಮಿಕೊಳ್ಳಲಾಗಿತ್ತು. ಭಾನುವಾರ ಮಧ್ಯಾಹ್ನ ಗಣಪತಿ ವಿಸರ್ಜನಾ ಮೆರವಣಿಗೆ ಹಾಗೂ ಶೋಭಾಯಾತ್ರೆ ಡೂಂ ಲೈಟ್ ವೃತ್ತದಿಂದ ಆರಂಭಗೊಂಡು ಪಟ್ಟಣದ ಕೆಂಪೇಗೌಡ ಸರ್ಕಲ್, ಖಾಸಗಿ ಬಸ್ ನಿಲ್ದಾಣ, ಪೊಲೀಸ್ ಠಾಣೆ, ಕೋಟೆ ರಸ್ತೆ ಮೂಲಕ ಪಟ್ಟಣದ ಬಿ.ಕೆ.ರಸ್ತೆ, ಕಲ್ಯಾಗೇಟ್ ಮಾರ್ಗವಾಗಿ ಡಾ.ರಾಜ್‌ಕುಮಾರ್, ರಾಮಮಂದಿರ ರಸ್ತೆ ಮೂಲಕ ಸಾಗಿದ ಮೆರವಣಿಗೆ ಗೌರಮ್ಮ ಕೆರೆಯಲ್ಲಿ ಮೂರ್ತಿಯನ್ನು ವಿಸರ್ಜಿಸಲಾಯಿತು. ಮೆರವಣಿಗೆಯಲ್ಲಿ ಸಾವಿರಾರು ಯವಕರು, ಮಹಿಳೆಯರು, ಯುವತಿಯರ ದಂಡೆ ನೆರೆದಿತ್ತು. ತಮಟೆವಾದ್ಯಕ್ಕೆ ಸಾವಿರಾರು ಮಂದಿ ಕುಣಿದು ಕುಪ್ಪಳಿಸಿದರು.

ಪೊಲೀಸರ ಅಲರ್ಟ್:  ತಾಲೂಕು ಕಚೇರಿಯಿಂದ ಹೊಸಮಸೀದಿ ಮೊಹಲ್ಲಾ ಬಳಿ ಮೆರವಣಿಗೆ ಬರುತ್ತಿದ್ದಂತೆ ಎಸ್‌ಪಿ ಕಾರ್ತಿಕ್‌ರೆಡ್ಡಿ ನೇತೃತ್ವದಲ್ಲಿ ಅಡಿಷನ್‌ಎಸ್‌ಪಿ ಸುರೇಶ್, ಡಿವೈಎಸ್ಪಿ ಪ್ರಮೀಣ್ ಹಾಗೂ ಇನ್‌ಸ್ಪೆಕ್ಟರ್‌ಗಳಾದ ಜಿ.ವೈ. ಗಿರಿರಾಜು, ನವೀನ್ ಕುಮಾರ್, ಮೋಹನ್, ಪುಟ್ಟೇಗೌಡ, ಮಂಜುನಾಥ್ ಪಿಎಸ್‌ಐಗಳು ಸೇರಿ 200ಕ್ಕೂ ಹೆಚ್ಚು ಸಿಬ್ಬಂದಿ ಬೀಡು ಬಿಟ್ಟಿತ್ತು. ಉತ್ಸವದಲ್ಲಿ ವಿವಿಧ ಕಲಾತಂಡಗಳು, ಜೈ ಶ್ರೀರಾಮ್ ಬಾವುಟ ಹಿಡಿದು ನೂರಾರು ಯುವಕರು, ಭಕ್ತರು ಶ್ರೀರಾಮ್, ಗಣಪತಿ ಬಪ್ಪ ಮೊರೆಯ ಎಂಬ ಜೈಕಾರದ ಘೋಷಣೆ ದೃಶ್ಯ ವಿಶೇಷವಾಗಿತ್ತು. ಮುಸ್ಲಿಂ ಬಡಾವಣೆಯಲ್ಲಿ ಸಮುದಾಯದಿಂದ ನೀರಿನ ಬಾಟೆಲ್ ವಿತರಿಸಿದರೆ, ಹಿಂದುಗಳು ಅನ್ನದಾನ ಮಾಡಿದರು.

ಪೊಲೀಸ್ ವಿಜಯ್ ಕುಮಾರ್, ಪುರಸಭಾ ಸದಸ್ಯರಾದ ರಾಮು, ಅಶ್ವತ್ಥ್, ಅನಿಲ್ ಕುಮಾರ್, ರಿಯಾಜ್, ಮಾಜಿ ಸದಸ್ಯ ರೂಪೇಶ್, ಎಂ.ಆರ್. ರಾಘವೇಂದ್ರ, ಶಂಕರ್, ಭರತ್ ಜೈನ್, ಗುಂಡಾ ದೇವರಾಜು, ರಂಗಣ್ಣಿ, ಡಿಜಿ.ಕುಮಾರ್, ರೋಹಿತ್, ಚಂದನ್ ಇತರರು ಇದ್ದರು.