ಗಜೇಂದ್ರಗಡ ಪಟ್ಟಣದಲ್ಲಿ ಏರ್ಪಡಿಸಿದ್ದ ವಾಲ್ಮೀಕಿ ಜಯಂತ್ಯುತ್ಸವವನ್ನು ಸಭಾಧ್ಯಕ್ಷ ಜಿ. ಎಸ್. ಪಾಟೀಲ್ ಉದ್ಘಾಟಿಸಿದರು. ಪ್ರಸನ್ನಾನಂದಪುರಿ ಶ್ರೀಗಳು, ಭೀಮಣ್ಣ ತಳವಾರ, ಸಿದ್ದಣ್ಣ ಬಂಡಿ ಇತರರು ಇದ್ದರು. 
ಗದಗ

ಹಕ್ಕುಗಳಿಗಾಗಿ ಜನ ಒಗ್ಗಟ್ಟಿನಿಂದ ಹೋರಾಡಲಿ

ಪ್ರಸನ್ನಾನಂದಪುರಿ ಶ್ರೀ ಆಶೀರ್ವಚನ ಗಜೇಂದ್ರಗಡದಲ್ಲಿ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ

ಗಜೇಂದ್ರಗಡ: ಸಮಾಜದ ಒಗ್ಗಟ್ಟು ಕಾಪಾಡಿಕೊಂಡು ಸಂವಿಧಾನ ನೀಡಿರುವ ಹಕ್ಕುಗಳ ರಕ್ಷಣೆಗೆ ಎಲ್ಲರೂ ಮುಂದಾಗಬೇಕು. ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಶ್ರೀಗಳು ಹೇಳಿದರು.

ಪಟ್ಟಣದ ಹಿರೇಮನಿಯವರ ಪ್ಲಾಟ್‌ನಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಧರ್ಮದ ತಳಪಾಯವೇ ದಯೆ. ಸಾಂಸಾರಿಕ ಜಂಜಾಟ ಹಾಗೂ ಒತ್ತಡದಿಂದ ಹೊರಬರಲು ಶ್ರೀರಾಮನ ತಾರಕಮಂತ್ರದ ಜಪ ಸಹಕಾರಿಯಾಗಿದೆ. ಅಧಿಕಾರ ಮತ್ತು ಆಸ್ತಿಗಾಗಿ ಸಹೋದರರ ನಡುವೆ ನಡೆಯುವ ಸಂಘರ್ಷಕ್ಕಿಂತ ತ್ಯಾಗ, ಪ್ರೀತಿ ಹಾಗೂ ಸಹೋದರತ್ವದ ಮೌಲ್ಯಗಳನ್ನು ಸಾರುವ ರಾಮಾಯಣ ಮಹಾಕಾವ್ಯ ಮಾನವೀಯ ಬದುಕಿಗೆ ದಾರಿದೀಪವಾಗಿದೆ ಎಂದರು.

ಸಮಾಜದ ಜನರು ಒಗ್ಗಟ್ಟಿನಿಂದ ಹಕ್ಕುಗಳಿಗಾಗಿ ಹೋರಾಡಬೇಕು. ಸಮುದಾಯದ ರಾಜಕೀಯ ಮತ್ತು ಆರ್ಥಿಕ ಮೀಸಲಾತಿ ಹಕ್ಕುಗಳ ಜತೆಗೆ ಉದ್ಯೋಗ ಮೀಸಲಾತಿ ಹೆಚ್ಚಳಕ್ಕೂ ಹೋರಾಟ ನಡೆಸಲಾಗಿದೆ. ನಾಗಮೋಹನದಾಸ ಆಯೋಗದ ವರದಿ ಆಧರಿಸಿ ಉದ್ಯೋಗ ಮೀಸಲಾತಿಯನ್ನು ಶೇ.3ರಿಂದ ಶೇ.7ಕ್ಕೆ ಹೆಚ್ಚಿಸುವಂತೆ ಸರ್ಕಾರಕ್ಕೆ ಒತ್ತಾಯಿಸಲಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಶೀಘ್ರವೇ ಪರಿಷ್ಕೃತ ಆದೇಶ ಹೊರಡಿಸಿ ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿದರು.

ಸಭಾಧ್ಯಕ್ಷ ಜಿ.ಎಸ್. ಪಾಟೀಲ ಮಾತನಾಡಿ, ಪಟ್ಟಣದಲ್ಲಿ ವಾಲ್ಮೀಕಿ ಸಮಾಜದ ಬಹುದಿನಗಳ ಬೇಡಿಕೆಯಾದ ಸಮುದಾಯ ಭವನ ನಿರ್ಮಾಣಕ್ಕೆ 2 ಕೋಟಿ ರೂ. ಅನುದಾನ ಒದಗಿಸಲಾಗಿದೆ. ಪುರಸಭೆಯಿಂದ 7 ಗುಂಟೆ ಜಾಗ ನೀಡಲಾಗಿದ್ದು, ಸುಸಜ್ಜಿತ ಭವನ ನಿರ್ಮಾಣವಾಗಲಿದೆ. ಸಮುದಾಯ ಭವನವನ್ನು ಸಮಾರಂಭಗಳಿಗೆ ಸೀಮಿತಗೊಳಿಸದೆ, ತರಬೇತಿ, ವಿಶೇಷ ತರಗತಿಗಳು ಸೇರಿದಂತೆ ಶೈಕ್ಷಣಿಕ ಚಟುವಟಿಕೆಗಳಿಗೆ ಬಳಸಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಕ್ಷೇತ್ರದ ಎರಡೂ ತಾಲೂಕುಗಳ ಜಯಂತಿ ಕಾರ್ಯಕ್ರಮವನ್ನು ಒಂದೇ ಕಡೆ ಆಯೋಜಿಸುವ ಕುರಿತು ಚಿಂತನೆ ನಡೆಸಬೇಕು ಎಂದರು.

ವಾಲ್ಮೀಕಿ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಯಿತು. ಸಂತೋಷ ವಾಲಿಕಾರ ಉಪನ್ಯಾಸ ನೀಡಿದರು. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಗೀತಾ ಆಲೂರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಟಿ. ಈಶ್ವರ, ವಾಲ್ಮೀಕಿ ಸಮಾಜದ ತಾಲೂಕು ಅಧ್ಯಕ್ಷ ಭೀಮಣ್ಣ ತಳವಾರ, ಸಿದ್ದಣ್ಣ ಬಂಡಿ, ಶಿವರಾಜ ಗೋರ್ಪಡೆ, ಎಚ್.ಎಸ್. ಸೋಂಪುರ, ಅಶೋಕ ಜಿಗಳೂರ, ರಾಜು ಸಾಂಗ್ಲಿಕರ, ಮೋಹನ ಹುಲ್ಲಣ್ಣವರ, ಬಸವರಾಜ ತಳವಾರ, ಶರಣಪ್ಪ ಸಿಂಗಾಡಿ, ಶೇಕಪ್ಪ ಜುಟ್ಲರ, ಮುದಿಯಪ್ಪ ಮುಧೋಳ, ನಾಗರಾಜ ತಳವಾರ, ಪ್ರಶಾಂತ ರಾಠೋಡ, ರಂಗಪ್ಪ ತಳವಾರ, ಶರಣಪ್ಪ ಉಪ್ಪಿನಬೆಟಗೇರಿ, ರಾಜು ಪಾಟೀಲ, ಕೆ.ಎಚ್. ಪಾಟೀಲ, ಪ್ರಕಾಶ ತಳವಾರ, ಮಂಜುಳಾ ಹುಲ್ಲಣ್ಣವರ ಇತರರಿದ್ದರು.