ನರೇಗಲ್ಲ-ಅಬ್ಬಿಗೇರಿ ಮಾರ್ಗದ ರೈತ ಸಂಪರ್ಕ ಕೇಂದ್ರದ ಸಮೀಪ ರಸ್ತೆಯಲ್ಲಿ ನಿಂತಿರುವ ಮಳೆ ನೀರಿನಲ್ಲಿಯೇ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಸಂಚರಿಸಲು ಪರದಾಡುತ್ತಿರುವುದು. 
ಗದಗ

ಸಂಕಷ್ಟ ತಂದ ಅವೈಜ್ಞಾನಿಕ ಕಾಮಗಾರಿ Road problem

ನರೇಗಲ್ಲ-ಅಬ್ಬಿಗೇರಿ ಪ್ರಮುಖ ರಸ್ತೆ ಸಂಪೂರ್ಣ ಹಾಳು

ಪ್ರಭುಸ್ವಾಮಿ ಅರವಟಗಿಮಠ ನರೇಗಲ್ಲ

ಅವೈಜ್ಞಾನಿಕ ರಸ್ತೆ ಕಾಮಗಾರಿಯ ಫಲವಾಗಿ ನರೇಗಲ್ಲ-ಅಬ್ಬಿಗೇರಿ ಪ್ರಮುಖ ರಸ್ತೆ ಸಂಪೂರ್ಣ ಕೆಸರು ಗದ್ದೆಯಾಗಿ ಮಾರ್ಪಟ್ಟಿದ್ದು, ನಿತ್ಯ ಸಂಚರಿಸುವ ಸಾವಿರಾರು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ.

ಇತ್ತೀಚೆಗೆ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರದಿಂದ ಕಾಲನಿವರೆಗೆ ನಿರ್ಮಿಸಲಾದ ಕಾಂಕ್ರೀಟ್ ಡಬಲ್ ರಸ್ತೆಯ ಅವೈಜ್ಞಾನಿಕ ಕಾಮಗಾರಿಯೇ ಅವಾಂತರಗಳಿಗೆ ಮೂಲ ಕಾರಣ ಎನ್ನುವುದು ಸಾರ್ವಜನಿಕರ ಆರೋಪವಾಗಿದೆ. ರಸ್ತೆ ನಿರ್ಮಿಸುವಾಗ ಮಳೆನೀರು ಸರಾಗವಾಗಿ ಹರಿದುಹೋಗಲು ಚರಂಡಿ ವ್ಯವಸ್ಥೆ ಮಾಡದಿರುವುದು ಗುತ್ತಿಗೆದಾರರ ಹಾಗೂ ಅಧಿಕಾರಿಗಳ ಬೇಜವಾಬ್ದಾರಿಗೆ ಹಿಡಿದ ಕೈಗನ್ನಡಿಯಾಗಿದೆ.

ರೈತ ಸಂಪರ್ಕ ಕೇಂದ್ರದಿಂದ ಕಾಲೇಜಿಗೆ ತೆರಳುವ ಮಾರ್ಗದಲ್ಲಿ ಪೆಟ್ರೋಲ್ ಬಂಕ್ ಸಮೀಪದ ಎಡಭಾಗದಲ್ಲಿ ಭಾರಿ ಪ್ರಮಾಣದ ನೀರು ನಿಲ್ಲುತ್ತಿದೆ. ನೀರಿನ ಅಡಿಯಲ್ಲಿ ಅಡಗಿರುವ ತಗ್ಗು-ದಿಣ್ಣೆಗಳು ಕಣ್ಣಿಗೆ ಕಾಣದೆ ಬೈಕ್ ಸವಾರರು ಬಿದ್ದು ಗಾಯಗೊಳ್ಳುವುದು ನಿತ್ಯದ ಗೋಳಾಗಿದೆ. ಇತ್ತೀಚೆಗಷ್ಟೇ ರಸ್ತೆಯಲ್ಲಿ ನಿಂತ ನೀರು ತಪ್ಪಿಸಲು ಹೋದ ಬೈಕ್ ಸವಾರನೊಬ್ಬ ನಡೆದುಕೊಂಡು ಹೋಗುತ್ತಿದ್ದ ವಿದ್ಯಾರ್ಥಿನಿಯರಿಗೆ ಡಿಕ್ಕಿ ಹೊಡೆದಿದ್ದು, ಗಾಯಾಳು ವಿದ್ಯಾರ್ಥಿನಿಯರು ಆಸ್ಪತ್ರೆ ಸೇರಿದ್ದರು. ಇಷ್ಟೆಲ್ಲ ದುರ್ಘಟನೆಗಳು ಸಂಭವಿಸುತ್ತಿದ್ದರೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಮಾತ್ರ ಇತ್ತ ಗಮನ ಹರಿಸುತ್ತಿಲ್ಲ.

ಈ ಮಾರ್ಗದಲ್ಲಿ ಅನ್ನದಾನೇಶ್ವರ ಮಠದ ಸಂಸ್ಥೆಯ ಹತ್ತಾರು ಶಿಕ್ಷಣ ಸಂಸ್ಥೆಗಳು, ಪಿಎಸ್‌ಎಸ್ ಪ್ರಾಥಮಿಕ ಮತ್ತು ಪ್ರೌಢಶಾಲೆ, ಸರ್ಕಾರಿ ಪ್ರೌಢಶಾಲೆ, ಪಿಯು ಹಾಗೂ ಪದವಿ ಕಾಲೇಜುಗಳಿವೆ. ನಿತ್ಯ ಸಾವಿರಾರು ವಿದ್ಯಾರ್ಥಿಗಳು ಓಡಾಡುತ್ತಾರೆ. ಜತೆಗೆ ಅಬ್ಬಿಗೇರಿ, ರೋಣ, ಕೋಚಲಾಪುರ, ಯರೇಬೇಲೇರಿ ಹಾಗೂ ಕುರುಡಗಿ ಮುಂತಾದ ಗ್ರಾಮಗಳ ಸಂಪರ್ಕಕ್ಕೂ ಮುಖ್ಯ ಕೊಂಡಿಯಾಗಿದೆ. ಹೀಗಾಗಿ ಶೀಘ್ರ ರಸ್ತೆ ದುರಸ್ತಿ ಮಾಡಬೇಕು ಎಂದು ಆಗ್ರಹ ಕೇಳಿ ಬಂದಿದ.ಎ

ಸ್ಥಳೀಯರ ಅಸಮಾಧಾನ

ಲೋಕೋಪಯೋಗಿ ಇಲಾಖೆಯಿಂದ (ಪಿಡಬ್ಲುೃಡಿ) 1.50 ಕೋಟಿ ರೂ. ವೆಚ್ಚದಲ್ಲಿ 2ನೇ ಹಂತದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸೆಪ್ಟೆಂಬರ್ 9 ರಂದು ಚಾಲನೆ ನೀಡಲಾಗಿದೆ. ಆದರೆ, ತೀವ್ರ ಸಮಸ್ಯೆಯಿರುವ ಕೃಷಿ ಕೇಂದ್ರದ ಕಡೆಯಿಂದ ಕೆಲಸ ಆರಂಭಿಸದೆ, ಗುತ್ತಿಗೆದಾರರು ಕಾಲನಿಯಿಂದ ಕಾಮಗಾರಿ ಆರಂಭಿಸಿರುವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ.

ನರೇಗಲ್ಲನ ದ್ವಿಪಥ ರಸ್ತೆಯು ಸಂಪೂರ್ಣ ಅವೈಜ್ಞಾನಿಕವಾಗಿದ್ದು, ಇತ್ತೀಚೆಗಷ್ಟೇ ಬೈಕ್ ಸವಾರನೊಬ್ಬ ರಸ್ತೆ ಅಪಘಾತದಲ್ಲಿ ಜೀವ ಕಳೆದುಕೊಂಡಿದ್ದಾನೆ. ಆಗ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದಾಗ ಕೇವಲ ಗರಸು ಹಾಕಿ ಕೈತೊಳೆದುಕೊಂಡಿದ್ದಾರೆಯೇ ಹೊರತು, ಶಾಶ್ವತ ಪರಿಹಾರಕ್ಕೆ ಮುಂದಾಗಿಲ್ಲ.
ಸಂತೋಷ ಮಣ್ಣೋಡ್ಡರ, ಚಂದ್ರಮೌಳೇಶ್ವರ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಸಂಘದ ಅಧ್ಯಕ್ಷ
ನರೇಗಲ್ಲ ಪಟ್ಟಣದ ದ್ವಿಪಥ ರಸ್ತೆಯಲ್ಲಿ ಮಳೆ ನೀರು ಸಂಗ್ರಹವಾಗುತ್ತಿರುವ ಬಗ್ಗೆ ದೂರುಗಳು ಬಂದಿದ್ದು, ತಕ್ಷಣವೇ ಅಧಿಕಾರಿಗಳನ್ನು ಕಳುಹಿಸಿ ದುರಸ್ತಿಗೆ ಕ್ರಮ ಕೈಗೊಳ್ಳಲಗುವುದು.
ಎಇಇ ಜಿ. ಎಸ್. ಪಾಟೀಲ ಎಇಇ ಲೋಕೋಪಯೋಗಿ ಇಲಾಖೆ ರೋಣ