ರೋಣ ತಾಲೂಕಿನಲ್ಲಿ ಸುರಿದ ಮಳೆಯಿಂದ ತುಂಬಿ ಹರಿಯುತ್ತಿರುವ ಹಳ್ಳ. 
ಗದಗ

ತುಂಬಿ ಹರಿಯುತ್ತಿವೆ ಹಳ್ಳ-ಕೊಳ್ಳ

ರೋಣ ಭಾಗದಲ್ಲಿ ಅಬ್ಬರದ ಮಳೆ ಕೆಲವೆಡೆ ರಸ್ತೆ ಸಂಚಾರ ಬಂದ್

ರೋಣ: ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಗೆ ತಾಲೂಕಿನ ಹಳ್ಳ-ಕೊಳ್ಳಗಳು ಭರ್ತಿಯಾಗಿವೆ.

ತಾಲೂಕಿನ ಯಾವಗಲ್ಲ ಬಳಿಯ ಬೆಣ್ಣೆ ಹಳ್ಳಕ್ಕೆ ಅಲ್ಪ ಪ್ರಮಾಣದ ನೀರು ಹರಿದು ಬಂದರೆ, ಚಿಕ್ಕಮಣ್ಣೂರ, ಹುಲ್ಲೂರ ಹಾಗೂ ಬೆನಹಾಳ ಭಾಗದಲ್ಲಿನ ಹಿರೇಹಳ್ಳ ಅಪಾಯಮಟ್ಟ ಮೀರಿ ಹರಿಯುತ್ತಿವೆ. ಹಿರೇಹಳ್ಳ ಅಕ್ಕಪಕ್ಕದ ನೂರಾರು ಎಕರೆ ಜಮೀನು ಜಲಾವೃತವಾಗಿದೆ. ಜತೆಗೆ ಹಿರೇಹಾಳ, ಕೊತಬಾಳ ಹಾಗೂ ಬೆಳವಣಕಿ ಭಾಗದಲ್ಲಿನ ಹಳ್ಳಗಳಲ್ಲಿ ಅಂತರ್ಜಲಮಟ್ಟ ಹೆಚ್ಚಾಗಿ ಮರುಜೀವ ಬಂದಂತಾಗಿದೆ.

ರಸ್ತೆ ಬಂದ್: ಮಂಗಳವಾರ ರಾತ್ರಿ ಹಾಗೂ ಬುಧವಾರ ಬೆಳಗ್ಗೆ ಸುರಿದ ಮಳೆಯಿಂದ ಹುಲ್ಲೂರ- ರೋಣ ರಸ್ತೆ ಸಂಚಾರ ಕೆಲ ಕಾಲ ಬಂದ್ ಆಗಿತ್ತು. ಜತೆಗೆ ಹುಲ್ಲೂರ ಮೂಲಕ ಚಿಕ್ಕಮಣ್ಣೂರ ತಲುಪುವ ಒಳರಸ್ತೆಯಲ್ಲಿಯೂ ಹಳ್ಳ ತುಂಬಿ ಹರಿಯುತ್ತಿರುವುದರಿಂದ ಈ ಮಾರ್ಗದ ಸಂಚಾರವೂ ಸ್ಥಗಿತವಾಗಿತ್ತು. ಹುಲ್ಲೂರಿನಿಂದ ವಿವಿಧ ಗ್ರಾಮಗಳಿಗೆ ತೆರಳುವ ಜನರು ಪರದಾಡಿದರು.

ರೋಣದಲ್ಲೂ ಮಳೆ ಅಬ್ಬರ: ತಾಲೂಕಿನ ಗ್ರಾಮೀಣ ಭಾಗದಲ್ಲಿ ಅಷ್ಟೇ ಅಲ್ಲದೆ, ಪಟ್ಟಣದಲ್ಲೂ ಮಂಗಳವಾರ ಇಡೀ ರಾತ್ರಿ ಹಾಗೂ ಬುಧವಾರ ಬೆಳಗ್ಗೆ ಅಬ್ಬರದ ಮಳೆ ಸುರಿಯಿತು. ಇದರಿಂದ ವಿದ್ಯಾರ್ಥಿಗಳು, ನೌಕರರು ಪರದಾಡಿದರು. ಮಂಗಳವಾರ ರಾತ್ರಿ ಸುರಿದ ಮಳೆಗೆ ಪಟ್ಟಣದ ತಗ್ಗು ಪ್ರದೇಶಗಳು ಜಲಾವೃತವಾದವು. ಖಾಲಿ ಜಾಗದಲ್ಲಿ ಸಾಕಷ್ಟು ನೀರು ಶೇಖರಣೆಯಾಗಿದೆ. ಪಟ್ಟಣದ ಶಿವಾನಂದ ನಗರದಲ್ಲಿ ರಸ್ತೆ ಸೌಲಭ್ಯವಿಲ್ಲದ್ದರಿಂದ ಮಣ್ಣಿನ ರಸ್ತೆ ರಾಡಿಮಯವಾಗಿ ಜನರು ಸಂಕಷ್ಟ ಅನುಭವಿಸಿದರು.