ನರೇಗಲ್ಲ ಸಮೀಪದ ಜಕ್ಕಲಿ ಗ್ರಾಮದಲ್ಲಿ ಪಗಡೆ ಆಟದಲ್ಲಿ ನಿರತಾರದ ಗ್ರಾಮಸ್ಥರು. 
ಗದಗ

ಜಕ್ಕಲಿಯಲ್ಲಿ ಬೆಳಗುತ್ತಿದೆ ಪಗಡೆಯಾಟ! : village game

ಕಣ್ಮರೆಯಾಗುತ್ತಿರುವ ಗ್ರಾಮೀಣ ಆಟದಲ್ಲಿ ಗ್ರಾಮಸ್ಥರು ತಲ್ಲೀನ

ಪ್ರಭುಸ್ವಾಮಿ ಅರವಟಗಿಮಠ ನರೇಗಲ್ಲ

ಆಧುನಿಕತೆಯ ಭರಾಟೆಯಲ್ಲಿ ಗ್ರಾಮೀಣ ಆಟಗಳು ಕಣ್ಮರೆಯಾಗುತ್ತಿವೆ. ಮೊಬೈಲ್‌ಗಳೇ ಮನರಂಜನೆಯ ಸಾಧನಗಳಾಗಿರುವ ಇಂದಿನ ದಿನಗಳಲ್ಲಿ ಸಮೀಪದ ಜಕ್ಕಲಿ ಗ್ರಾಮದಲ್ಲಿ ಇಂದಿಗೂ ಪಗಡೆಯಾಟದ ಪರಂಪರೆ ಮುಂದುವರಿಸಿಕೊಂಡು ಹೋಗುತ್ತಿರುವುದು ಅಭಿಮಾನ ಸಂಗತಿ.

ಗ್ರಾಮದ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಸುಮಾರು ಐದು ದಶಕಗಳ ಹಿಂದೆ ವೀರಪ್ಪಜ್ಜ ವಾಲಿ, ವಿರುಪಾಕ್ಷಪ್ಪ ವಾಲಿ, ರುದ್ರಪ್ಪ ಸಜ್ಜನರ, ವೀರಪ್ಪ ಸಂಕನೂರ, ಕರಬಸಪ್ಪ ಮಾಸ್ತರ ಕೇಸರಿ ಸೇರಿದಂತೆ ಹಲವು ಹಿರಿಯರು ಆರಂಭಿಸಿದ ಈ ಆಟ ಇಂದಿಗೂ ಮುಂದುವರಿದಿದೆ. ಗ್ರಾಮದಲ್ಲಿ 96 ಮನೆಗಳ ಪಗಡೆಯ ಪಟ್ಟ ಹಾಸಿ ಎರಡು ತಂಡಗಳಾಗಿ ಆಟವಾಡುತ್ತಾರೆ. ಕವಡೆಗಳ ಎಣಿಕೆ, ಕಾಯಿಗಳ ಚಲನೆ, ಎದುರಾಳಿಯ ಕಾಯಿಯನ್ನು ಕಡಿದು ಮುನ್ನಡೆಯುವ ತಂತ್ರಗಾರಿಕೆ ಆಟಕ್ಕೆ ರೋಚಕತೆ ನೀಡುತ್ತದೆ. ದೀರ್ಘಕಾಲ ಆಟ ಮುಂದುವರಿದು ಫಲಿತಾಂಶ ನಿರ್ಧಾರವಾಗದಿದ್ದರೆ ‘ಗಂಗೆ-ಗೌರಿಯಾಟ’ ಎಂದು ಮುಕ್ತಾಯಗೊಳಿಸುವ ಪದ್ಧತಿಯೂ ಇದೆ.

ಪ್ರಸ್ತುತ ವೀರೇಶ ಹಿರೇಮಠ, ಪ್ರಕಾಶ ವಾಲಿ, ಮಲ್ಲಪ್ಪ ಪಲ್ಲೇದ, ಅಂದಪ್ಪ ಬೂದಿಹಾಳ, ರಾಜಶೇಖರ ವಾಲಿ, ಮುದಿಯಪ್ಪ ಜಂಗಣ್ಣವರ, ಅಯ್ಯಪ್ಪ ವಾಲಿ, ಅಶೋಕ ವಾಲಿ ಸೇರಿದಂತೆ ಹಲವು ಆಟಗಾರರು ಸಂಪ್ರದಾಯವನ್ನು ಮುಂದುವರಿಸುತ್ತಿದ್ದಾರೆ.

ಹಿರಿಯರು ಬಿಟ್ಟುಹೋದ ಸಂಸ್ಕೃತಿಯ ಬಳುವಳಿಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ಎಲ್ಲರ ಮೇಲಿದೆ. ಜಕ್ಕಲಿಯಲ್ಲಿ ಐದು ದಶಕಗಳಿಂದ ಮೊಳಗುತ್ತಿರುವ ಕವಡೆಗಳ ಸದ್ದು ಹಿರಿಯರ ನೆನಪು ಮತ್ತು ಗ್ರಾಮೀಣ ಸಂಸ್ಕೃತಿಯ ಜೀವಂತ ಸಾಕ್ಷಿಯಾಗಿದೆ.

ಪಗಡೆಯಾಟ ಕೇವಲ ಮನರಂಜನೆಯಲ್ಲ. ದುಡಿಮೆಯ ದಣಿವಿನ ನಡುವೆ ಗ್ರಾಮಸ್ಥರನ್ನು ಒಂದೆಡೆ ಸೇರಿಸಿ ಸ್ನೇಹ, ಒಗ್ಗಟ್ಟು ಮತ್ತು ಬಾಂಧವ್ಯ ಬೆಸೆಯುವ ವೇದಿಕೆಯಾಗಿದೆ. ಇಲ್ಲಿ ಗೆಲುವಿಗಿಂತ ಸ್ನೇಹಕ್ಕೆ ಹೆಚ್ಚಿನ ಮಹತ್ವವಿದೆ. ಗ್ರಾಮೀಣ ಕ್ರೀಡೆಗಳಿಗೆ ಸರ್ಕಾರ ಪ್ರೋತ್ಸಾಹ ನೀಡಬೇಕು. ತಾಲೂಕು ಮತ್ತು ಜಿಲ್ಲಾ ಮಟ್ಟದ ಗ್ರಾಮೀಣ ಕ್ರೀಡಾಕೂಟಗಳಲ್ಲಿ ಪಗಡೆಯಾಟಕ್ಕೂ ಅವಕಾಶ ಕಲ್ಪಿಸಬೇಕು.
ಪ್ರಕಾಶಪ್ಪ ಹೊಸಮನಿ, ಮಲ್ಲಿಕಾರ್ಜುನ ಕುರುಡಗಿ ಪಗಡೆ ಆಟಗಾರರು ಜಕ್ಕಲಿ