ಗದಗ

ಕಾಂಗ್ರೆಸ್ ಒತ್ತಡಕ್ಕೆ ಮಣಿಯದೆ ಬಿಜೆಪಿ ಮತ: ಸಂಕನೂರು

ವಿಜಯವಾಣಿ ಸುದ್ದಿ ಜಾಲ ಗದಗ

ಹಾವೇರಿ, ಗದಗ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಪದವೀಧರ ಮತದಾರರು ಯಾವುದೇ ಒತ್ತಡ, ಆಮಿಷಗಳಿಗೆ ಮಣಿಯದೆ ತಮ್ಮ ಮೇಲೆ ವಿಶ್ವಾಸವಿಟ್ಟು ಗೆಲ್ಲಿಸಿದ್ದಾರೆ ಎಂದು  ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಗೆಲುವಿನ ಶ್ರೇಯಸ್ಸು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಿಗೆ ಸಲ್ಲಬೇಕು. ನಾಲ್ಕು ಜಿಲ್ಲೆಗಳಲ್ಲಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಸಂಘಟಿತವಾಗಿ ಶ್ರಮಿಸಿದ್ದಾರೆ. ಮತದಾರರು ನನ್ನ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ಈ ಚುನಾವಣೆಯಲ್ಲಿ 73 ಸಾವಿರಕ್ಕೂ ಅಧಿಕ ಮತಗಳು ಚಲಾವಣೆಯಾಗಿದ್ದು, ನಿರೀಕ್ಷೆಗೂ ಮೀರಿದ ಉತ್ತಮ ಫಲಿತಾಂಶ ದೊರೆತಿದೆ. ಚುನಾವಣೆಯ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಪದವೀಧರರ ಸಮಸ್ಯೆಗಳು, ಅವರ ಹಕ್ಕುಗಳು ಹಾಗೂ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದ ವಿಚಾರಗಳ ಕುರಿತು ವಿಧಾನ ಪರಿಷತ್ತಿನ ಒಳಗೆ ಮತ್ತು ಹೊರಗೆ ನಿರಂತರವಾಗಿ ಹೋರಾಟ ನಡೆಸುತ್ತೇನೆ ಎಂದು ಭರವಸೆ ನೀಡಿದರು.

ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತಗಳು ತಿರಸ್ಕೃತವಾಗಿರುವ ಕುರಿತು ಬೇಸರ ವ್ಯಕ್ತಪಡಿಸಿದ ಸಂಕನೂರ, ಮತದಾನಕ್ಕೂ ಮುನ್ನ ಮಾನ್ಯ ಮತ ಚಲಾಯಿಸುವ ವಿಧಾನದ ಬಗ್ಗೆ ಪದವೀಧರ ಮತದಾರರಿಗೆ ಮನವರಿಕೆ ಮಾಡಿಕೊಡಲಾಗಿತ್ತು. ಬ್ಯಾಲೆಟ್ ಪೇಪರ್ ಮಾದರಿಯನ್ನೂ ನೀಡಲಾಗಿತ್ತು. ಆದರೂ ಸುಮಾರು 10 ಸಾವಿರಕ್ಕೂ ಅಧಿಕ ಮತಗಳು ಅಸಿಂಧುವಾಗಿರುವುದು ನೋವಿನ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.

ತಿರಸ್ಕೃತ ಮತಗಳಲ್ಲಿ ಶೇ.50ಕ್ಕಿಂತ ಹೆಚ್ಚು ಮತಗಳು ಬಿಜೆಪಿ ಪರವಾಗಿ ಚಲಾವಣೆಯಾಗಿದ್ದರೂ, ಮತದಾನದ ವೇಳೆ ಆಗಿರುವ ಲೋಪಗಳಿಂದಾಗಿ ಅವು ಮಾನ್ಯವಾಗಿಲ್ಲ ಎಂಬುದು ಬೇಸರದ ಸಂಗತಿ. ಕೆಲವು ಮತದಾರರು ಪ್ರಥಮ ಪ್ರಾಶಸ್ತ್ಯದ ಮತವನ್ನು ಸೂಚಿಸುವಾಗ ಅಂಕಿ ಬರೆಯುವುದರ ಜೊತೆಗೆ ಗುರುತು ಹಾಕಿರುವುದು ಸೇರಿದಂತೆ ವಿವಿಧ ರೀತಿಯ ತಪ್ಪುಗಳನ್ನು ಮಾಡಿದ್ದಾರೆ. ಮತಪತ್ರದಲ್ಲಿ ನಿಗದಿತ ನಿಯಮದಂತೆ ಮತ ಚಲಾಯಿಸದಿದ್ದರೆ ಮತ ತಿರಸ್ಕೃತವಾಗುವ ಸಾಧ್ಯತೆಗಳಿವೆ. ಆದ್ದರಿಂದ ಮುಂದಿನ ದಿನಗಳಲ್ಲಿ ಮತದಾನ ಮಾಡುವಾಗ ಪದವೀಧರರು ಹೆಚ್ಚಿನ ಜಾಗ್ರತೆ ವಹಿಸಬೇಕು ಎಂದು ಮನವಿ ಮಾಡಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಂದು ಮತವೂ ಅಮೂಲ್ಯವಾಗಿದೆ. ಮತದಾರರು ಸರಿಯಾದ ರೀತಿಯಲ್ಲಿ ಮತ ಚಲಾಯಿಸುವ ಬಗ್ಗೆ ಅರಿವು ಹೊಂದಿರಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಮತಗಳು ತಿರಸ್ಕೃತವಾಗುವುದರಿಂದ ಮತದಾರರ ಉದ್ದೇಶಿತ ಆಯ್ಕೆಗೆ ಧಕ್ಕೆಯಾಗುತ್ತದೆ. ಇದು ಸಮಾಜಕ್ಕೆ ಉತ್ತಮ ಸಂದೇಶ ನೀಡುವುದಿಲ್ಲ. ಹೀಗಾಗಿ ಮತದಾನದ ವಿಧಾನದ ಕುರಿತು ಇನ್ನಷ್ಟು ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಪ್ರಾಶಸ್ತ್ಯ ಮತದಾನ ಪದ್ಧತಿ ಕುರಿತು ಮಾತನಾಡಿದ ಅವರು, ಒಂದೇ ಕ್ಷೇತ್ರದಿಂದ ಒಬ್ಬ ಸದಸ್ಯರನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಪ್ರಸ್ತುತ ಇರುವ ಪ್ರಾಶಸ್ತ್ಯ ಮತ ಪದ್ಧತಿಯ ಬದಲಿಗೆ ಸರಳ ಮತದಾನ ವ್ಯವಸ್ಥೆಯನ್ನು ಜಾರಿಗೆ ತರುವ ಕುರಿತು ಚಿಂತನೆ ನಡೆಸಬೇಕಿದೆ ಎಂದು ಹೇಳಿದರು.

ವಿಧಾನಸಭೆ ಚುನಾವಣೆಯಲ್ಲಿ ಮತದಾರರು ತಮಗೆ ಇಷ್ಟವಾದ ಒಬ್ಬ ಅಭ್ಯರ್ಥಿಗೆ ಮತ ಚಲಾಯಿಸುವ ವ್ಯವಸ್ಥೆ ಇದೆ. ಅದೇ ರೀತಿಯ ಸರಳ ವಿಧಾನವನ್ನು ಪದವೀಧರ ಕ್ಷೇತ್ರದ ಚುನಾವಣೆಯಲ್ಲಿಯೂ ಅಳವಡಿಸಿಕೊಂಡರೆ ಮತದಾನದಲ್ಲಿನ ಲೋಪದೋಷಗಳನ್ನು ಕಡಿಮೆ ಮಾಡಬಹುದು ಒಂದಕ್ಕಿಂತ ಹೆಚ್ಚು ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಂದರ್ಭಗಳಲ್ಲಿ ಪ್ರಾಶಸ್ತ್ಯ ಮತ ಪದ್ಧತಿ ಉಪಯುಕ್ತವಾಗಬಹುದು. ಆದರೆ ಒಂದೇ ಸ್ಥಾನಕ್ಕೆ ಚುನಾವಣೆ ನಡೆಯುವಾಗ ಈ ಪದ್ಧತಿಯ ಅಗತ್ಯದ ಕುರಿತು ಪರಿಶೀಲನೆ ನಡೆಸಬೇಕಿದೆ ಎಂದರು.

ಮತದಾರರು ಮತಪತ್ರದಲ್ಲಿ ಅಂಕಿಗಳನ್ನು ಬರೆಯುವ ಬದಲು ನಿರ್ದಿಷ್ಟ ಅಭ್ಯರ್ಥಿಯ ಎದುರು ಗುರುತು ಹಾಕುವ ಅಥವಾ ಮುದ್ರೆ ಒತ್ತುವ ಸರಳ ವ್ಯವಸ್ಥೆಯನ್ನು ಜಾರಿಗೆ ತಂದರೆ ಮತಗಳು ಅಸಿಂಧುವಾಗುವ ಪ್ರಮಾಣವನ್ನು ಕಡಿಮೆ ಮಾಡಬಹುದು. ಈ ಕುರಿತು ಕಾನೂನು ತಜ್ಞರೊಂದಿಗೆ ಚರ್ಚೆ ನಡೆಸುತ್ತೇನೆ. ಅಗತ್ಯವಿದ್ದರೆ ವಿಧಾನ ಪರಿಷತ್ತಿನಲ್ಲಿಯೂ ಈ ವಿಷಯವನ್ನು ಪ್ರಸ್ತಾಪಿಸಿ, ಚುನಾವಣಾ ವ್ಯವಸ್ಥೆಯಲ್ಲಿ ಸೂಕ್ತ ಬದಲಾವಣೆ ತರಲು ಪ್ರಯತ್ನಿಸುತ್ತೇನೆ ಎಂದು ಸಂಕನೂರು ತಿಳಿಸಿದರು.