ಮುಂಡರಗಿ ಪಟ್ಟಣದ ಜಗದ್ಗುರು ಅನ್ನದಾನೀಶ್ವರ ಕನ್ನಡ ಸಾಹಿತ್ಯ ಭವನದಲ್ಲಿ ಶನಿವಾರ ಜರುಗಿದ ತಾಲೂಕು ಮಹಿಳಾ ಸಾಹಿತ್ಯ ಸಮಾವೇಶದಲ್ಲಿ ಕನ್ನಡಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಡಾ.ಅನ್ನದಾನೀಶ್ವರ ಶಿವಯೋಗಿಗಳು, ಪ್ರೊ.ಕೆ.ಎಚ್.ಬೇಲೂರ, ವಿವೇಕಾನಂದಗೌಡ ಪಾಟೀಲ, ಚೇತನಾ ಪಾಟೀಲ, ಪ್ರೊ.ಎಂ.ಜಿ. ಗಚ್ಚಣ್ಣವರ ಇತರರಿದ್ದರು. 
ಗದಗ

Conference: ಮಕ್ಕಳಿಗೆ ಸಂಸ್ಕಾರ, ಸಂಸ್ಕೃತಿ ಕಲಿಸಿ

ಮಂಜುನಾಥ ಗದಗಿನ
ಮುಂಡರಗಿ: ಪಾಲಕರು ಮಕ್ಕಳಿಗೆ ಸಂಸ್ಕಾರ, ಸಂಸ್ಕೃತಿ ಕಲಿಸಿಕೊಡಬೇಕು ಎಂದು ನಿವೃತ್ತ ಪ್ರಾಚಾರ್ಯ ಪ್ರೊ.ಕೆ.ಎಚ್. ಬೇಲೂರ ಹೇಳಿದರು.
ಪಟ್ಟಣದ ಜಗದ್ಗುರು ಅನ್ನದಾನೀಶ್ವರ ಕನ್ನಡ ಸಾಹಿತ್ಯ ಭವನದಲ್ಲಿ ತಾಲೂಕು ಕಸಾಪ ಘಟಕ ಶನಿವಾರ ಹಮ್ಮಿಕೊಂಡಿದ್ದ ತಾಲೂಕು ಮಹಿಳಾ ಸಾಹಿತ್ಯ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿ, ಮನೆಗಳಲ್ಲಿ ಮಹಿಳೆಯರಿಂದ ನೆಮ್ಮದಿ ನೆಲೆಸುತ್ತದೆ. ಮಹಿಳೆಯರು ಮನಸು ಮಾಡಿದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು. ನಮ್ಮ ಜೀವನದಲ್ಲಿ ಕೊನೆವರೆಗೂ ಬರುವುದು ಶಿಕ್ಷಣ ಮಾತ್ರ ಎಂದರು.
ಸಾನ್ನಿಧ್ಯ ವಹಿಸಿದ್ದ ನಾಡೋಜ ಡಾ.ಅನ್ನದಾನೀಶ್ವರ ಶಿವಯೋಗಿಗಳವರು ಮಾತನಾಡಿ, ಎಲ್ಲ ರೀತಿಯಿಂದಲೂ ಮಹಿಳೆ ಗಂಡಿಗಿಂತ ಶ್ರೇಷ್ಠಳಾಗಿದ್ದಾಳೆ. ಹೀಗಾಗಿ ನಾವು ಮಹಿಳೆಯರನ್ನು ಸಾಕ್ಷಾತ್ ದೇವಿ ಹಾಗೂ ಆದಿಶಕ್ತಿಗೆ ಹೋಲಿಸುತ್ತೇವೆ. ಎಲ್ಲರೂ ಮಹಿಳೆಯರನ್ನು ಪೂಜ್ಯ ಭಾವನೆಯಿಂದ ಕಾಣಬೇಕು ಎಂದು ತಿಳಿಸಿದರು.
ಕಸಾಪ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಕುಟುಂಬ ನಿರ್ವಹಣೆಗಾಗಿ ಮಹಿಳೆಯರು ಹಗಲಿರುಳು ಶ್ರಮಿಸುತ್ತಾರೆ. ಪುರುಷರಿಗಿಂತ ಮಹಿಳೆಯು ಎಲ್ಲ ರೀತಿಯಿಂದಲೂ ಸಶಕ್ತಳಿದ್ದಾಳೆ. ಹೀಗಾಗಿ ಪುರುಷರು ಸರಿಯಾಗಿ ಅರ್ಥಮಾಡಿಕೊಂಡು ಮಹಿಳೆಯನ್ನು ಸಮಾನವಾಗಿ ಕಾಣಬೇಕು ಎಂದರು.
ಕೃಷಿ ಇಲಾಖೆ ಗದಗ ಜಂಟಿ ನಿರ್ದೇಶಕಿ ಚೇತನಾ ಪಾಟೀಲ ಮಾತನಾಡಿ, ನಾವು ವರ್ಷಪೂರ್ತಿ ಆಚರಿಸುವ ಹಬ್ಬಗಳಿಗೂ ಹಾಗೂ ಕೃಷಿ ಕಾಯಕಕ್ಕೂ ಅವಿನಾಭಾವ ಸಂಬಂಧವಿದೆ. ಒಂದೊಂದು ಹಬ್ಬಕ್ಕೂ ಹಾಗೂ ಕೃಷಿ ಕಾಯಕಕ್ಕೂ ನೇರವಾದ ಸಂಬಂಧವಿದೆ. ನಾವು ಅವುಗಳನ್ನು ಅರ್ಥಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಚಿಂತಕ ಅನ್ನದಾನಿ ಹಿರೇಮಠ, ಕಸಾಪ ಮಾಜಿ ಜಿಲ್ಲಾಧ್ಯಕ್ಷ ಎ.ಬಿ. ಹಿರೇಮಠ, ಕದಳಿ ವೇದಿಕೆ ತಾಲೂಕಾಧ್ಯಕ್ಷೆ ಸೀತಾ ಬಸಾಪುರ, ಗಿರಿಜಾ ಹಿರೇಮಠ ಮಾತನಾಡಿದರು. ವೀಣಾ ಪಾಟೀಲ ಆಶಯನುಡಿಗಳನ್ನಾಡಿದರು.
ಪ್ರೊ.ಆರ್.ಎಲ್. ಪೊಲೀಸಪಾಟೀಲ ರಚಿಸಿದ ಜೇಂಗೋಡ ಗ್ರಂಥವನ್ನು ಡಾ.ಅನ್ನದಾನೀಶ್ವರ ಶ್ರೀಗಳು ಬಿಡುಗಡೆಗೊಳಿಸಿದರು. ಕಲೆ ಸಾಹಿತ್ಯ ಶಿಕ್ಷಣ ಮತ್ತು ತಂತ್ರಜ್ಞಾನ, ಸ್ವಾವಲಂಬನೆಯತ್ತ ಮಹಿಳೆ ಎಂಬ ಎರಡು ಗೋಷ್ಠಿಗಳು ಹಾಗೂ ಕವಿಗೋಷ್ಠಿ ನಡೆಯಿತು. ಚೈತನ್ಯ ಡ್ಯಾನ್ಸ್ ಅಕಾಡೆಮೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಕಸಾಪ ತಾಲೂಕಾಧ್ಯಕ್ಷ ಪ್ರೊ.ಎಂ.ಜಿ. ಗಚ್ಚಣ್ಣವರ, ಕಲ್ಪನಾ ಕಡ್ಡಿ, ಸುಕನ್ಯಾ ಕಬ್ಬೂರಮಠ, ಶೋಭಾ ಹೊಟ್ಟಿನ, ಕಸಾಪ ಪದಾಧಿಕಾರಿಗಳು, ಸಾಹಿತ್ಯಾಭಿಮಾನಿಗಳು ಉಪಸ್ಥಿತರಿದ್ದರು. ಶಶಿಕಲಾ ಕುಕನೂರ ಸ್ವಾಗತಿಸಿದರು. ಅರುಣಾ ಗುಜ್ಜರಿ ನಿರೂಪಿಸಿದರು. ಆರ್.ವೈ.ಪಾಟೀಲ ವಂದಿಸಿದರು.