ಉದ್ಘಾಟನೆಗೆ ಸಿದ್ಧವಾಗಿರುವ ಗಜೇಂದ್ರಗಡದ ಅಗ್ನಿಶಾಮಕ ದಳದ ಕಟ್ಟಡ. 
ಗದಗ

BUILDING: ಕಟ್ಟಡ ಉದ್ಘಾಟನೆಗೆ ಮುಹೂರ್ತ ಯಾವಾಗ?

ಸೋಮನಾಥ ರೆಡ್ಡಿ

ಪ್ರಮುಖ ಮುಖ್ಯಾಂಶಗಳು

  • 3 ಕೋಟಿ ರೂ. ವೆಚ್ಚದಲ್ಲಿ ಅಗ್ನಿ ಶಾಮಕ ಠಾಣೆ ನಿರ್ಮಾಣ
  • ಸಾರ್ವಜನಿಕ ಸೇವೆಗೆ ವಿಳಂಭ
  • ಗಜೇಂದ್ರಗಡ ತಾಲೂಕು ರಚನೆಯಾಗಿ ಹತ್ತು ವರ್ಷ
ಮಂಜುನಾಥ ಕುದರಿಕೋಟಿ ಗಜೇಂದ್ರಗಡ
ತಾಲೂಕು ರಚನೆಯಾಗಿ ಹತ್ತು ವರ್ಷ ಕಳೆದರೂ ಗಜೇಂದ್ರಗಡಕ್ಕೆ ಅಗತ್ಯವಿರುವ ಹಲವು ಸರ್ಕಾರಿ ಕಚೇರಿಗಳಿಗೆ ಸ್ವಂತ ಕಟ್ಟಡಗಳೇ ಇಲ್ಲ. ಈ ಮಧ್ಯೆ ಸಾರ್ವಜನಿಕರ ಸುರಕ್ಷತೆಗೆ ಅಗತ್ಯವಿರುವ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಠಾಣೆಗೆ 3 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಸುಸಜ್ಜಿತ ಕಟ್ಟಡ ಕಾಮಗಾರಿ ಪೂರ್ಣಗೊಂಡು ಹಲವು ತಿಂಗಳಾದರೂ ಸೇವೆ ಆರಂಭವಾಗಿಲ್ಲ. ಹೀಗಾಗಿ ಕೋಟ್ಯಂತರ ರೂಪಾಯಿ ವೆಚ್ಚದ ಕಟ್ಟಡ ಬಳಕೆಯಾಗದೆ ಖಾಲಿ ನಿಂತಿದೆ.
ಗಜೇಂದ್ರಗಡ ಸಮೀಪದ ರಾಮಾಪುರ ಗ್ರಾಪಂ ವ್ಯಾಪ್ತಿಯ ಕೊಡಗನೂರ ಗ್ರಾಮದ ಸೀಮೆಯಲ್ಲಿ ಸುಮಾರು ಒಂದು ಎಕರೆ ಜಾಗದಲ್ಲಿ ಅಗ್ನಿಶಾಮಕ ಠಾಣೆ ನಿರ್ಮಿಸಲಾಗಿದೆ. ಕಚೇರಿ ಕೊಠಡಿಗಳು, ವಾಹನ ನಿಲುಗಡೆ, ಸಿಬ್ಬಂದಿಗೆ ಅಗತ್ಯ ಸೌಲಭ್ಯ ಹಾಗೂ ತುರ್ತು ಕಾರ್ಯಾಚರಣೆಗೆ ಬೇಕಾದ ಮೂಲಸೌಕರ್ಯಗಳನ್ನು ಒಳಗೊಂಡಿರುವ ಕಟ್ಟಡದ ಕಾಮಗಾರಿ ಕಳೆದ ಅಕ್ಟೋಬರ್‌ನಲ್ಲೇ ಪೂರ್ಣಗೊಂಡಿದ್ದು, ಇಲಾಖೆಗೆ ಹಸ್ತಾಂತರವೂ ಆಗಿದೆ. ಆದರೆ, ಉದ್ಘಾಟನೆಗೆ ಇನ್ನೂ ಮುಹೂರ್ತವೇ ಕೂಡಿಬಂದಿಲ್ಲ.

30 ಕಿಮೀ ದೂರದಿಂದ ಬರಬೇಕು!

ಗಜೇಂದ್ರಗಡ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬೆಂಕಿ ಅವಘಡ, ರಸ್ತೆ ಅಪಘಾತ ಸೇರಿದಂತೆ ತುರ್ತು ಪರಿಸ್ಥಿತಿ ಎದುರಾದಾಗ ಸುಮಾರು 30 ಕಿಮೀ ದೂರದ ರೋಣದಿಂದ ಅಗ್ನಿಶಾಮಕ ವಾಹನ ಬರಬೇಕಾಗಿದೆ. ವಾಹನ ಸ್ಥಳಕ್ಕೆ ತಲುಪುವಷ್ಟರಲ್ಲಿ ಅಮೂಲ್ಯ ಸಮಯ ಕಳೆದುಹೋಗುವ ಸಾಧ್ಯತೆ ಇದ್ದು, ಅನಾಹುತದ ಪ್ರಮಾಣ ಹೆಚ್ಚುವ ಆತಂಕವಿದೆ.
ಇದಕ್ಕೆ ಇತ್ತೀಚಿನ ಜವಳಿ ಪ್ಲಾಟ್‌ನ ಗೋದಾಮಿನಲ್ಲಿ ಸಂಭವಿಸಿದ ಅಗ್ನಿ ಅವಘಡವೇ ಸಾಕ್ಷಿ. ಬೆಂಕಿ ಅವಘಡದಲ್ಲಿ ಪೈಪ್‌ಗಳು, ತಾಡಪತ್ರಿ ಸೇರಿದಂತೆ ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಸುಟ್ಟುಹೋಗಿವೆ. ರೋಣದಿಂದ ಅಗ್ನಿಶಾಮಕ ವಾಹನ ತಲುಪುವಷ್ಟರಲ್ಲಿ ಸುಮಾರು ಒಂದು ಗಂಟೆ ಕಳೆದಿತ್ತು. ಗಜೇಂದ್ರಗಡದಲ್ಲೇ ಠಾಣೆ ಕಾರ್ಯನಿರ್ವಹಿಸುತ್ತಿದ್ದರೆ ತ್ವರಿತವಾಗಿ ಬೆಂಕಿ ನಂದಿಸಲು ಸಾಧ್ಯವಾಗುತ್ತಿತ್ತು ಎಂಬ ಮಾತುಗಳು ಸಾರ್ವಜನಿಕರಿಂದ ಕೇಳಿಬಂದಿವೆ.

2022ರಲ್ಲೇ ಮಂಜೂರು:

ಗಜೇಂದ್ರಗಡ ಭಾಗದ ಜನರ ಬಹುದಿನಗಳ ಬೇಡಿಕೆಗೆ ಸ್ಪಂದಿಸಿದ ಸರ್ಕಾರ 2022ರಲ್ಲಿ ತಾಲೂಕಿಗೆ ಅಗ್ನಿಶಾಮಕ ಠಾಣೆ ಮಂಜೂರು ಮಾಡಿತ್ತು. ಅದೇ ವರ್ಷ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭವಾಗಿ ನಿಗದಿತ ಅವಧಿಯಲ್ಲಿ ಪೂರ್ಣಗೊಂಡಿದೆ. ಆದರೆ ಠಾಣೆಗೆ ಸಂಪರ್ಕ ಕಲ್ಪಿಸುವ ರಸ್ತೆಯ ಡಾಂಬರೀಕರಣ ಬಾಕಿ ಉಳಿದಿರುವುದು ಹಾಗೂ ಅಗತ್ಯ ಸಿಬ್ಬಂದಿ ನೇಮಕವಾಗದಿರುವುದರಿಂದ ಉದ್ಘಾಟನೆ ವಿಳಂಬವಾಗಿದೆ ಎಂದು ಇಲಾಖೆ ತಿಳಿಸಿದೆ. ಶಾಸಕ ಜಿ.ಎಸ್. ಪಾಟೀಲರು ರಸ್ತೆ ನಿರ್ಮಾಣಕ್ಕೆ ಅಗತ್ಯ ಅನುದಾನ ಒದಗಿಸಿದರೆ ಹೆಚ್ಚಿನ ಅನುಕೂಲವಾಗುತ್ತದೆ ಎನ್ನುತ್ತಾರೆ ಸ್ಥಳೀಯರು.
ಕೋಟ್ಯಂತರ ರೂ. ವೆಚ್ಚದಲ್ಲಿ ನಿರ್ಮಿಸಿರುವ ಕಟ್ಟಡ ಹಲವು ತಿಂಗಳು ಬಳಕೆಯಾಗದೆ ಇರುವುದರಿಂದ ನಿರ್ವಹಣೆ ಹಾಗೂ ಮೂಲ ಸೌಕರ್ಯಗಳಿಗೆ ಹಾನಿಯಾಗುವ ಆತಂಕವೂ ಎದುರಾಗಿದೆ. ಕಟ್ಟಡವನ್ನು ಯಾವುದೇ ಕಾರಣಕ್ಕೂ ಖಾಲಿ ಬಿಡದೆ ಈಗಿರುವ ಕೊರತೆಗಳನ್ನು ಶೀಘ್ರವೇ ನಿವಾರಿಸಿ ಬಳಕೆಗೆ ಅವಕಾಶ ಕಲ್ಪಿಸಬೇಕು ಎನ್ನುವುದು ಜನರ ಒತ್ತಾಸೆಯಾಗಿದೆ.
"

ಸಾರ್ವಜನಿಕರ ಸುರಕ್ಷತೆಗೆ ಅತ್ಯಂತ ಅಗತ್ಯವಾಗಿರುವ ಅಗ್ನಿಶಾಮಕ ಠಾಣೆಯ ಕಟ್ಟಡ ಕಾಮಗಾರಿ ಪೂರ್ಣಗೊಂಡಿದ್ದರೂ ಉದ್ಘಾಟನೆ ಮಾಡದೆ ಖಾಲಿ ಬಿಟ್ಟಿರುವುದು ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆಯ ನಿರ್ಲಕ್ಷ್ಯಕ್ಕೆ ಸಾಕ್ಷಿ. ಇತ್ತೀಗೆ ಜವಳಿ ಪ್ಲಾಟಿನ ಗೋದಾಮಿಗೆ ಬೆಂಕಿ ಬಿದ್ದಾಗ ರೋಣದಿಂದ ಅಗ್ನಿಶಾಮಕ ವಾಹನ ತಡವಾಗಿ ಬಂದಿದ್ದರಿಂದ ಅಪಾರ ಪ್ರಮಾಣದ ವಸ್ತುಗಳು ಸುಟ್ಟು ಹೋಗಿವೆ. ಏನೇ ಸಮಸ್ಯೆಗಳಿದ್ದರೂ ಆದಷ್ಟು ಬೇಗ ಬಗೆಹರಿಸಿ ಕಟ್ಟಡ ಉದ್ಘಾಟಿಸಬೇಕು.

"

ನೂತನ ಅಗ್ನಿಶಾಮಕ ಠಾಣೆಯ ಕಟ್ಟಡ ಕಾಮಗಾರಿ ಪೂರ್ಣಗೊಂಡಿದ್ದು, ಉದ್ಘಾಟನೆಗೆ ಅಗತ್ಯ ಸಿದ್ಧತೆಗಳನ್ನು ಮಾಡಲಾಗಿದೆ. ಆದರೆ, ಠಾಣೆಗೆ ಸಂಪರ್ಕ ಕಲ್ಪಿಸುವ ರಸ್ತೆ ಇಲ್ಲದಿರುವುದರಿಂದ ಉದ್ಘಾಟನೆ ತಡವಾಗಿದೆ. ಜತೆಗೆ ಗಜೇಂದ್ರಗಡ ಠಾಣೆಗೆ ಅಗತ್ಯ ಸಿಬ್ಬಂದಿ ನೇಮಕವಾಗಿಲ್ಲ. ಚಾಲಕರನ್ನು ನೇಮಕ ಮಾಡುವಂತೆ ಸರ್ಕಾರಕ್ಕೆ ಕೋರಲಾಗಿದೆ. ರಸ್ತೆ ನಿರ್ಮಾಣಕ್ಕೆ ಅಗತ್ಯ ಅನುದಾನ ಹಾಗೂ ಸಿಬ್ಬಂದಿ ನೇಮಕವಾದ ಕೂಡಲೇ ಠಾಣೆ ಉದ್ಘಾಟಿಸಿ ಸೇವೆ ಆರಂಭಿಸಲಾಗುವುದು.