BAR ನರೇಗಲ್ಲ ಪಟ್ಟಣದ ಕೃಷ್ಣಾಜಿ ರಂಗರಾವ್ ಕುಲಕರ್ಣಿ ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಶೇಖರಗೌಡ ರಾಮತ್ನಾಳ ಮಕ್ಕಳೊಂದಿಗೆ ಸಂವಾದ ನಡೆಸಿದರು.
ನರೇಗಲ್ಲ: ‘ನಮ್ ಸಾಲಿ ಮುಂದ ಬಾರ್ (BAR) ಐತ್ರಿ ಸರ್. ಅಲ್ಲಿಗೆ ಬರೋರು ಕುಡಿದು ಕಾಂಪೌಂಡ್ ಒಳಗ ಬಾಟ್ಲಿ, ಪಾಕೀಟು ಒಗಿತಾರ. ನಮ್ಗ ದಿನಾಲು ಕಿರಿಕಿರಿ ಆಗೈತಿ’ ಎಂದು ನರೇಗಲ್ಲ ಹೋಬಳಿಯ ಅಬ್ಬಿಗೇರಿ ಗ್ರಾಮದ ಪ್ರೌಢಶಾಲಾ ವಿದ್ಯಾರ್ಥಿನಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ರಾಮತ್ನಾಳ ಅವರು ಎದುರು ಅಳಲು ತೋಡಿಕೊಂಡಳು.
ಪಟ್ಟಣದ ಕೃಷ್ಣಾಜಿ ರಂಗರಾವ್ ಕುಲಕರ್ಣಿ ಸರ್ಕಾರಿ ಪ್ರೌಢಶಾಲೆಯಲ್ಲಿ ಮಕ್ಕಳ ರಕ್ಷಣಾ ನಿರ್ದೇಶನಾಲಯ, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಹಾಗೂ ವಿವಿಧ ಇಲಾಖೆ ಆಶ್ರಯದಲ್ಲಿ ಬುಧವಾರ ಆಯೋಜಿಸಿದ್ದ ಮಕ್ಕಳೊಂದಿಗೆ ಸಂವಾದ ಹಾಗೂ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಮಕ್ಕಳು ಪ್ರಶ್ನೆಗಳ ಮಳೆದರೆದರು.
ರಾತ್ರಿಯಾದರೆ ಸಾಕು ಶಾಲಾ ಆವರಣದೊಳಗೆ ಬಂದು ಕುಡಿದು, ತಂದ ವಸ್ತುಗಳನ್ನು ಬಿಸಾಡಿ ಹೋಗುತ್ತಾರೆ ಎಂದು ದೂರಿದರು. ಹಾಲಕೆರೆಯ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಯೊಬ್ಬಳು ರಾತ್ರಿಯಾದರೆ ಪುಂಡರು ಶಾಲಾ ಆವರಣದೊಳಗೆ ಬಂದು ಬರ್ತ್ ಡೇ ಪಾರ್ಟಿ, ಡ್ರಿಂಕ್ ಪಾರ್ಟಿ, ತಿನ್ನುವ ಪಾರ್ಟಿ ಮಾಡುತ್ತಾರೆ ಎಂದು ದೂರಿದನು. ನರೇಗಲ್ಲ ಎಎಸ್‌ಐ ಪ್ರತಿಕ್ರಿಯಿಸಿ, ಮದ್ಯದ ಅಂಗಡಿ ಆರಂಭಕ್ಕೆ ಈಗಾಗಲೇ ಅನುಮತಿ ನೀಡಲಾಗಿದೆ. ಶಾಲೆ ಆರಂಭವಾದ ನಂತರ ಬಾರ್ ಆರಂಭಿಸಲಾಗಿದೆ. ಈ ಸಂಗತಿಯನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಮಾಹಿತಿ ನೀಡಿದರು.
ಶೇಖರಗೌಡ ರಾಮತ್ನಾಳ ಮಾತನಾಡಿ, ಶಾಲೆ ಆರಂಭವಾದ ನಂತರ ಬಾರ್ ತೆರೆಯಲಾಗಿದೆ ಎಂದರೆ ಅದಕ್ಕೆ ಅನುಮತಿ ನೀಡಿದ ಅಬಕಾರಿ ಇಲಾಖೆಯವರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಿ ಇಲ್ಲವಾದರೆ ನಿಮ್ಮ ಮೇಲೆಯೇ ಕ್ರಮ ಕೈಗೊಳ್ಳಲಾಗುವುದು. ಕೆಲವೇ ದಿನಗಳಲ್ಲಿ ವರದಿ ಒಪ್ಪಿಸಬೇಕು ಎಂದು ವಾರ್ನ್ ಮಾಡಿದರು.