ಲಕ್ಷ್ಮೇಶ್ವರದ ಎಂ.ಎ ಕಾಲೇಜಿನ ಕ್ಯಾಂಪಸ್‌ನಲ್ಲಿ ನಿರ್ಮಾಣ ಮಾಡುತ್ತಿರುವ ಬೃಹತ್ ಜಲಾಗಾರ ಕಾಮಗಾರಿ ಸ್ಥಗಿತಗೊಳಿಸಿ ಸ್ಥಳಾಂತರಿಸಬೇಕೆಂದು ಆಗ್ರಹಿಸಿ ಕಾಲೇಜಿನ ಹಳೇ ವಿದ್ಯಾರ್ಥಿಗಳು ಗ್ರೇಡ್-2 ತಹಸೀಲ್ದಾರ್ ಮಂಜುನಾಥ ಅಮಾಸಿ ಅವರಿಗೆ ಮನವಿ ಸಲ್ಲಿಸಿದರು.ಮಂಜುಳಾ ಹೂಗಾರ, ಡಿ.ಬಿ. ಫಕ್ಕಿರಪ್ಪ, ಟಾಕಪ್ಪ ಸಾತಪುತೆ ಇತರರಿದ್ದರು.
ವಿಜಯವಾಣಿ ಸುದ್ದಿಜಾಲ ಲಕ್ಷ್ಮೇಶ್ವರ
ಪಟ್ಟಣದ ಪುರಸಭೆ ಕಲಾ ಮಹಾವಿದ್ಯಾಲಯ ಕ್ಯಾಂಪಸ್‌ನಲ್ಲಿ ನಿರ್ಮಾಣ ಮಾಡುತ್ತಿರುವ ಬೃಹತ್ ಜಲಾಗಾರ ಕಾಮಗಾರಿ ಸ್ಥಗಿತಗೊಳಿ, ಬೇರೆ ಕಡೆ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿ ಸೋಮವಾರ ಕಾಲೇಜಿನ ಹಳೇ ವಿದ್ಯಾರ್ಥಿಗಳು ಮತ್ತು ನಾಗರಿಕರು ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.
ಪಟ್ಟಣದ ಶಿಗ್ಲಿ ನಾಕಾ ಹತ್ತಿರ ಪಾಳಾ-ಬಾದಾಮಿ ರಾಜ್ಯ ಹೆದ್ದಾರಿಯಲ್ಲಿ ಕಾಮಗಾರಿ ಸ್ಥಳಾಂತರಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿ ಕಾಮಗಾರಿ ಸ್ಥಳಾಂತರಕ್ಕೆ ಜೂ.1ರವರೆಗೆ ಗಡುವು ನೀಡಿದ ಪ್ರತಿಭಟನಾಕಾರರು, ಇದಕ್ಕೆ ಸ್ಫಂದಿಸದಿದ್ದರೆ ರಸ್ತೆಯಲ್ಲಿಯೇ ಅನಿರ್ಧಿಷ್ಟಾವಧಿ ಸತ್ಯಾಗ್ರಹ ನಡೆಸುತ್ತೇವೆ ಎಚ್ಚರಿಕೆ ನೀಡಿದರು.
ಈ ವೇಳೆ ಮಾತನಾಡಿದ ಹಳೆಯ ವಿದ್ಯಾರ್ಥಿ ಮಹೇಶ ಹೊಗೆಸೊಪ್ಪಿನ, ಶರಣು ಗೋಡಿ, ಜಲಾಗಾರ ನಿರ್ಮಾಣಕ್ಕೆ ನಮ್ಮ ವಿರೋಧವಿಲ್ಲ. ಆದರೆ, ಬೇರೆ ಕಡೆ ನಿರ್ಮಾಣವಾಗಬೇಕು ಎಂಬುವುದು ನಮ್ಮ ಕಳಕಳಿ. ಶಾಲೆ ಆವರಣದಲ್ಲಿ ಜಲಾಗಾರ ನಿರ್ಮಾಣವಾಗುವುದರಿಂದ ಪಠ್ಯೇತರ ಚಟುವಟಿಕೆಗಳಿಗೆ ಜಾಗವೇ ಇಲ್ಲದಂತಾಗುತ್ತದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಇದು ಅಪಾಯಕಾರಿಯೂ ಆಗಿದೆ. ಪುರಸಭೆ ವ್ಯಾಪ್ತಿಯಲ್ಲಿ ಸಾಕಷ್ಟು ಖಾಲಿ ನಿವೇಶನಗಳಿವೆ. ಅಲ್ಲದೇ ಈಗಾಗಲೇ ಪಟ್ಟಣಲ್ಲಿ ಲಕ್ಷಾಂತರ ರೂ. ವೆಚ್ಚದಲ್ಲಿ ಹತ್ತಾರು ವರ್ಷಗಳ ಹಿಂದೇಯೇ ನಿರ್ಮಾಣಗೊಂಡ ನಾಲ್ಕೈದು ಜಲಾಗಾರಗಳು ನಿರುಪಯುಕ್ತವಾಗಿದ್ದು, ಇವುಗಳನ್ನೂ ಬಳಸಬಹುದು. ಕಾಲೇಜಿನ ಕ್ಯಾಂಪಸ್‌ನಲ್ಲಿ ಜಲಾಗಾರ ನಿರ್ಮಾಣಕ್ಕೆ ಪ್ರಾರಂಭದಿಂದಲೂ ವಿರೋಧವಿದ್ದರೂ ಗುತ್ತಿಗೆದಾರರು ತಮ್ಮ ರಾಜಕೀಯ ಪ್ರಭಾವ ಮತ್ತು ರಾಜಕಾರಣಿಗಳ ಕುಮ್ಮಕ್ಕಿನಿಂದ ಜಿದ್ದಿಗೆ ಬಿದ್ದಂತೆ ವರ್ತಿಸುತ್ತಿದ್ದಾರೆ. ಗುತ್ತಿಗೆದಾರರು ಕಾಮಗಾರಿಗಾಗಿ ಮರಗಳನ್ನು ಕಡಿದಿದ್ದಾರೆ. ವಿದ್ಯುತ್ ಕಳ್ಳತನ ಮಾಡಿದ್ದಾರೆ. ಕಾಲೇಜಿನ ಕ್ಯಾಂಪಸ್‌ನಲ್ಲಿಯೇ ಸಾಮಗ್ರಿ ಹಾಕಿ ಶೈಕ್ಷಣಿಕ ಚಟುವಟಿಕೆಗಳಿಗೆ ಅಡ್ಡಿಪಡಿಸುತ್ತಿದ್ದಾರೆ. ಹೀಗಾಗಿ ಜಲಾಗಾರ ನಿರ್ಮಾಣ ಕೈಬಿಡುವಂತೆ ಒತ್ತಾಯಿಸಿದರು.
ನಂತರ ಸ್ಥಳಕ್ಕೆ ಆಗಮಿಸಿದ ಗ್ರೇಡ್-2 ತಹಸೀಲ್ದಾರ್ ಮಂಜುನಾಥ ಅಮಾಸಿ ಹಾಗೂ ಪುರಸಭೆ ವ್ಯವಸ್ಥಾಪಕಿ ಮಂಜುಳಾ ಹೂಗಾರ ಮನವಿ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ತಿಪ್ಪಣ್ಣ ಸಂಶಿ, ಗ್ರಾಪಂ ಮಾಜಿ ಸದಸ್ಯ ಪದ್ಮರಾಜ ಪಾಟೀಲ, ಡಿ.ಬಿ. ಫಕ್ಕಿರಪ್ಪ, ಟಾಕಪ್ಪ ಸಾತಪುತೆ, ಸೋಮಣ್ಣ ಹತ್ತಿ, ಇಸ್ಮಾಯಿಲ್ ಆಡೂರ, ಸದಾನಂದ ನಂದೆಣ್ಣವರ, ಬಾಬಾಜಾನ್ ಅಕ್ಕಿ, ಮಹಾಂತೇಶ ಮುಶೆಪ್ಪನವರ , ಆನಂದ ಅಮರಶೆಟ್ಟಿ, ಸಾದಿಕ್‌ಶೇಖ ಮನಿಯಾರ, ಸಂಜೀವ ಅಮರಾಪುರ, ಬಿ.ಬಿ. ಮಹಾಜನಶೆಟ್ಟರ, ಕೈಸರ್ ಮಮ್ಮದಲಿ, ಮಹೇಶ ಸೂರಣಗಿ, ಸೋಮಣ್ಣ ಯತ್ನಳ್ಳಿ, ರಾಜು ಅಮರಾಪುರ, ಜಹೀರ್ ಅಹ್ಮದ ಸಿದ್ದಾಪುರ, ಪ್ರವೀಣ ಆಚಾರಿ ಇತರರಿದ್ದರು.
ರಸ್ತೆ ತಡೆ ನಡೆಸಿದ್ದರಿಂದ ಕೆಲ ಹೊತ್ತು ಸಂಚಾರಕ್ಕೆ ಅಡಚಣೆಯಾಗಿತ್ತು. ಸಿಪಿಐ ಬಿ.ವಿ. ನ್ಯಾಮಗೌಡ್ರ, ಪಿಎಸ್‌ಐ ನಾಗರಾಜ ಗಡಾದ, ಟಿ.ಕೆ. ರಾಠೋಡ ಭದ್ರತೆ ಒದಗಿಸಿದ್ದರು.