ನರಗುಂದ ತಾಲೂಕಿನ ಬನಹಟ್ಟಿ-ಮೂಗನೂರ ಗ್ರಾಮಸ್ಥರು ಸಮರ್ಪಕ ಕುಡಿಯುವ ನೀರು ಪೊರೈಸುವಂತೆ ಎತ್ತು-ಚಕ್ಕಡಿ, ಖಾಲಿ ಬಿಂದಿಗೆ, ಬ್ಯಾರಲ್‌ಗಳನ್ನು ಹಿಡಿದು ಗ್ರಾಪಂ ಕಚೇರಿ ಎದುರಿಗೆ ಇತ್ತೀಚೆಗೆ ಪ್ರತಿಭಟನೆ ನಡೆಸಿದರು. 
ಗದಗ

WATER PROBLEM: 20 ದಿನಗಳಿಗೊಮ್ಮೆ ನೀರು ಪೂರೈಕೆ!

ಮಂಜುನಾಥ ಗದಗಿನ
ನರಗುಂದ: ತಾಲೂಕಿನ ಬನಹಟ್ಟಿ ಹಾಗೂ ಮೂಗನೂರ ಗ್ರಾಮಗಳ ನಡುವೆ ನೀರು ಪೂರೈಕೆಗೆ ಒಂದೇ ಟ್ಯಾಂಕ್ ನಿರ್ಮಿಸಲಾಗಿದೆ. ಇದರಿಂದ ವರ್ಷದ 12 ತಿಂಗಳು ನೀರಿನ ತೊಂದರೆ ಇದ್ದೆ ಇದೆ. ಇದೀಗ ರಣ ಬಿಸಿಲು ಆರಂಭಗೊಂಡ ಹಿನ್ನೆಲೆಯಲ್ಲಿ ಎರಡು ಗ್ರಾಮಗಳಿಗೆ 20 ದಿನಗಳಿಗೊಮ್ಮೆ ನೀರು ಪೂರೈಕೆಯಾಗುತ್ತಿದೆ. ಹೀಗಾಗಿ ಇಲ್ಲಿನ ಮಕ್ಕಳು, ಮಹಿಳೆಯರು, ವಯೋವೃದ್ಧರು ಕುಡಿಯುವ ನೀರಿಗೆ ನಿತ್ಯವೂ ಪರದಾಡುವಂತಾಗಿದೆ.
400 ಮನೆಗಳಿರುವ ತಾಲೂಕಿನ ಬನಹಟ್ಟಿ ಗ್ರಾಮದಲ್ಲಿ 6 ಸಾವಿರ ಜನರು ವಾಸಿಸುತ್ತಿದ್ದಾರೆ. 300 ಕುಟುಂಬ ಹೊಂದಿರುವ ಮೂಗನೂರ ಗ್ರಾಮದಲ್ಲಿ 2500ಕ್ಕೂ ಅಧಿಕ ಜನ ವಾಸಗೊಂಡಿದ್ದು, ಎರಡೂ ಊರಿನ ನಡುವೆ ಒಂದೇ ಟ್ಯಾಂಕ್ ನಿರ್ಮಿಸಲಾಗಿದೆ. ಸುಮಾರು ವರ್ಷಗಳ ಹಿಂದೆ ಬನಹಟ್ಟಿ-ಮೂಗನೂರ ಗ್ರಾಮಗಳ ಮಧ್ಯದ 17.20 ಗುಂಟೆ ವಿಸ್ತೀರ್ಣದಲ್ಲಿ ಕುಡಿಯುವ ನೀರಿನ ಕೆರೆ ನಿರ್ಮಿಸಲಾಗಿತ್ತು. ಮಲಪ್ರಭಾ ಕಾಲುವೆ ಮುಖಾಂತರ ಪ್ರತಿವರ್ಷ ಇಲ್ಲಿನ ಕೆರೆ ಭರ್ತಿಗೊಳಿಸಿ ಜನ-ಜಾನುವಾರುಗಳಿಗೆ ಸಮರ್ಪಕವಾಗಿ ಕುಡಿಯುವ ನೀರು ಪೊರೈಕೆ ಮಾಡಲಾಗುತ್ತಿತ್ತು. ಕೆಲವರು ನೇರವಾಗಿ ಕೆರೆಯಿಂದ ನೀರು ತಂದು ದಾಹ ನೀಗಿಸಿಕೊಳ್ಳುತ್ತಿದ್ದರು. ಆದರೀಗ ನಾಲ್ಕೈದು ವರ್ಷಗಳಿಂದ ಕೆರೆಯ ನೀರು ಕಲುಷಿತಗೊಂಡಿದೆ.
ಕರ್ತವ್ಯ ಮರೆತ ಅಧಿಕಾರಿಗಳು: ಪೈಪ್‌ಲೈನ್ ಮೂಲಕ ಕೆರೆಗೆ ನೀರು ತುಂಬಿಸಬೇಕಾದ ಅಧಿಕಾರಿಗಳು ತಮ್ಮ ಕರ್ತವ್ಯ ಪ್ರಜ್ಞೆಯನ್ನೇ ಮರೆತಿದ್ದಾರೆ. 5 ವರ್ಷಗಳ ಹಿಂದೆ ಜಾರಿಯಾದ ಅವೈಜ್ಞಾನಿಕ ನಿರಂತರ ಕುಡಿಯುವ ನೀರು (ಡಿಬಿಒಟಿ) ಯೋಜನೆಯಿಂದ ಸಮರ್ಪಕ ನೀರಿನ ಪೊರೈಕೆಯಾಗುತ್ತಿಲ್ಲ. ಕೋಟ್ಯಂತರ ರೂ. ವೆಚ್ಚದಲ್ಲಿ ಕೈಗೊಂಡಿರುವ ಜೆಜೆಎಂ ಯೋಜನೆ ಕಳಪೆ, ಅವೈಜ್ಞಾನಿಕ ಪೈಪ್‌ಲೈನ್ ಕಾಮಗಾರಿಯಿಂದ ಸರಿಯಾಗಿ ನೀರು ಪೂರೈಕೆ ಆಗುತ್ತಿಲ್ಲ ಎಂಬುದು ಗ್ರಾಮಸ್ಥರ ಆರೋಪ.
ಹುಳು ಉತ್ಪತ್ತಿ: ಪ್ರತಿಯೊಂದು ಮನೆಗೆ ನಲ್ಲಿಗಳ ಮುಖಾಂತರ ನೀರು ಸರಬರಾಜು ಮಾಡಬೇಕಾದ ಅಧಿಕಾರಿಗಳು 20 ದಿನಕ್ಕೊಮ್ಮೆ ಪೂರೈಸುತ್ತಿದ್ದಾರೆ. ಬಹಳ ದಿನ ಸಂಗ್ರಹಿಸಿಡುವ ನೀರಿನಲ್ಲಿ ಹುಳುಗಳು ಉತ್ಪತ್ತಿ ಆಗುತ್ತಿವೆ. ಕಲುಷಿತ ನೀರು ಸೇವನೆಯಿಂದ ಜನರು ವಿವಿಧ ಕಾಯಿಲೆಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಗ್ರಾಮದ ಬಹುತೇಕರಿಗೆ 20 ದಿನಗಳವರೆಗೆ ನೀರು ಸಂಗ್ರಹಿಸಿಟ್ಟುಕೊಳ್ಳುವುದೇ ಸವಾಲಿನ ಕೆಲಸವಾಗಿ ಮಾರ್ಪಟ್ಟಿದ್ದು, ಅಧಿಕಾರಿ-ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುವಂತಾಗಿದೆ.
"

ಜೆಜೆಎಂ ಯೋಜನೆಯಡಿ ಬನಹಟ್ಟಿ ಹಾಗೂ ಮೂಗನೂರ ಗ್ರಾಮದಲ್ಲಿ ಕೈಗೊಂಡಿರುವ ಪೈಪ್‌ಲೈನ್ ಕಾಮಗಾರಿ ಸಂಪೂರ್ಣ ಅವೈಜ್ಞಾನಿಕ ಹಾಗೂ ಕಳಪೆ ಗುಣಮಟ್ಟದ್ದಾಗಿದೆ. ಎರಡು ಊರಿನ ನಡುವೆ ಒಂದೇ ಟ್ಯಾಂಕ್ ನಿರ್ಮಿಸಿರುವುದು ಖಂಡನೀಯ. ಕುಡಿಯುವ ನೀರಿನ ಕೆರೆ ತುಂಬಿಸುವ ವಿಚಾರದಲ್ಲಿ ಅಧಿಕಾರಿಗಳು ಸರ್ಕಾರ ಹಾಗೂ ಜಿಲ್ಲಾಡಳಿತಕ್ಕೆ ತಪ್ಪು ಮಾಹಿತಿ ನೀಡಿ ಅನುದಾನ ದುರುಪಯೋಗಪಡಿಸಿಕೊಂಡಿದ್ದಾರೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿ, ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ.

"

ತಾಲೂಕಿನ ಬನಹಟ್ಟಿ ಹಾಗೂ ಮೂಗನೂರ ಗ್ರಾಮಸ್ಥರಿಗೆ ಪ್ರತಿನಿತ್ಯ 4 ಲಕ್ಷ ಲೀಟರ್ ನೀರು ಬೇಕು. ಆದರೆ, ಡಿಬಿಒಟಿಯಿಂದ ಕೇವಲ 2.50 ಲಕ್ಷ ಲೀಟರ್ ನೀರು ಪೊರೈಕೆ ಮಾಡುತ್ತಿರುವುದರಿಂದ ಬೇಸಿಗೆ ನಿರ್ವಹಣೆಗೆ ವಿಪರೀತ ಸಮಸ್ಯೆ ತಂದೊಡ್ಡಿದೆ. ಮೂಗನೂರ ಗ್ರಾಮದಲ್ಲಿ ಹೊಸ ಜಲಾಗಾರ ನಿರ್ಮಾಣಕ್ಕೆ ಇತ್ತೀಚೆಗೆ ಭೂಮಿಪೂಜೆ ನೆರವೇರಿಸಿದ್ದು, ಕಾಮಗಾರಿ ಪೂರ್ಣಗೊಂಡ ಬಳಿಕ ಸಮಸ್ಯೆಗೆ ಶಾಶ್ವತ ಮುಕ್ತಿ ದೊರೆಯುವ ವಿಶ್ವಾಸವಿದೆ.