ಗಜೇಂದ್ರಗಡ ಪಟ್ಟಣದಲ್ಲಿ ವೀರಶೈವ ಪಂಚಮಸಾಲಿ ಜಾಗೃತ ಸೇವಾ ಸಂಘದ ಆಶ್ರಯದಲ್ಲಿ ಭಾನುವಾರ ಆಯೋಜಿಸಿದ್ದ ಕಿತ್ತೂರು ರಾಣಿ ಚನ್ನಮ್ಮ ಸಾಂಸ್ಕೃತಿಕ ಭವನದ ಭೂಮಿಪೂಜೆ ಕಾರ್ಯಕ್ರಮ ನೆರವೇರಿತು. ಜಿ.ಎಸ್. ಪಾಟೀಲ, ಈಶಣ್ಣ ಮ್ಯಾಗೇರಿ, ಬಸವರಾಜೇಶ್ವರಿ ಚನ್ನು ಪಾಟೀಲ, ವಿಶ್ವನಾಥ ಜಿಡ್ಡಿಬಾಗಿಲ ಇತರರಿದ್ದರು.
- ಶಾಸಕ ಜಿ.ಎಸ್. ಪಾಟೀಲ ಬೇಸರ
- ರಾಣಿ ಚನ್ನಮ್ಮ ಸಾಂಸ್ಕೃತಿಕ ಭವನಕ್ಕೆ ಭೂಮಿಪೂಜೆ
ಗಜೇಂದ್ರಗಡ: ರಾಜ್ಯದಲ್ಲಿದ್ದ 1.60 ಕೋಟಿಯಷ್ಟಿದ್ದ ವೀರಶೈವ- ಲಿಂಗಾಯತರನ್ನು ಇತ್ತೀಚೆಗೆ ನಡೆಸಲಾದ ಸಮೀಕ್ಷೆಯಲ್ಲಿ ಕೇವಲ 70 ಲಕ್ಷಕ್ಕೆ ತಂದು ನಿಲ್ಲಿಸಿರುವುದು ದುರಂತದ ಸಂಗತಿ ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಪಟ್ಟಣದಲ್ಲಿ ವೀರಶೈವ ಪಂಚಮಸಾಲಿ ಜಾಗೃತ ಸೇವಾ ಸಂಘದ ಆಶ್ರಯದಲ್ಲಿ ಭಾನುವಾರ ಆಯೋಜಿಸಿದ್ದ ಕಿತ್ತೂರು ರಾಣಿ ಚನ್ನಮ್ಮ ಸಾಂಸ್ಕೃತಿಕ ಭವನದ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ರಾಜಕೀಯ, ಸಾಮಾಜಿಕ, ಧಾರ್ಮಿಕ ಸೇರಿದಂತೆ ಅನೇಕ ಕಾರ್ಯಗಳನ್ನು ಮಾಡುವಾಗ ನಾವೆಲ್ಲರೂ ವೀರಶೈವರು ಎಂಬ ಮನೋಬಲದಿಂದ ಮಾಡಬೇಕು. ಲಿಂಗಾಯತ- ವೀರಶೈವ ಬೇರೆ ಬೇರೆ ಪದ ಬಳಸುವುದು ಬೇಡ. ನಾವೆಲ್ಲರೂ ವೀರಶೈವರು. ರಾಜಕೀಯ ವ್ಯವಸ್ಥೆಯಲ್ಲಿ ವೀರಶೈವ- ಲಿಂಗಾಯತರ ಶಕ್ತಿ ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ. 12ನೇ ಶತಮಾನದಲ್ಲಿ ಲಿಂಗ ಪೂಜೆ ಮಾಡಿದವರು ಲಿಂಗವಂತರು, ವೀರಶೈವರು ಎಂದು ಬಸವಣ್ಣನವರು ಹೇಳಿದ್ದಾರೆ. ಸಮಾಜದಲ್ಲಿ ವೀರಶೈವ, ಲಿಂಗಾಯತರ ಪರಿಸ್ಥಿತಿ ಏನಿದೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ ಎಂದರು.
ಒಂದು ಕಡೆ ನಮ್ಮ ಉಪ ಘಟಕಗಳಿದ್ದು, ಅವುಗಳನ್ನು ಉದ್ದಾರ ಮಾಡುವ ಕೆಲಸವಾಗಬೇಕು. ಕೇವಲ ಪಂಚಮಸಾಲಿ ಒಗ್ಗಟ್ಟು ನನಗೆ ಬೇಕಾಗಿಲ್ಲ, ನಾವೆಲ್ಲರೂ ಸೇರಿ ಲಿಂಗಾಯತರು ಒಂದಾಗುವ ಕೆಲಸ ಮಾಡೋಣ. ರಾಜಕೀಯ ವ್ಯವಸ್ಥೆಯಲ್ಲಿ ನಮ್ಮ ಪಕ್ಷಗಳು ತೆಗೆದುಕೊಳ್ಳುವ ನಿರ್ಧಾರಕ್ಕೆ ತಲೆ ಬಾಗುವುದು ಅನಿವಾರ್ಯ. ಇಂತಹ ಕಾರ್ಯಕ್ರಮಗಳಲ್ಲಿ ಸಂಘಟನಾತ್ಮಕ ವಿಚಾರಗಳನ್ನು ಹಂಚಿಕೊಳ್ಳುವುದು ಅನಿವಾರ್ಯ. ವೀರಶೈವರಾಗಿ ಸರ್ವರೂ ಸಂಘಟಿತರಾದಾಗ ಅಗಾಧ ಶಕ್ತಿ ಹೊರಹೊಮ್ಮಲಿದೆ ಎಂದರು.
ಸಾನ್ನಿಧ್ಯ ವಹಿಸಿದ್ದ ಹಾಲಕೆರೆ ಶ್ರೀಮಠದ ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ಸಮಾಜದ ತಾಲೂಕಾಧ್ಯಕ್ಷ ಸಿದ್ದಣ್ಣ ಬಂಡಿ, ಈಶಣ್ಣ ಮ್ಯಾಗೇರಿ, ಬಸವರಾಜೇಶ್ವರಿ ಚನ್ನು ಪಾಟೀಲ, ವಿಶ್ವನಾಥ ಜಿಡ್ಡಿಬಾಗಿಲ, ಮುತ್ತಣ್ಣ ಮ್ಯಾಗೇರಿ, ನಾಗರಾಜ ಪಾಟೀಲ, ಬಸವರಾಜ ಪಲ್ಲೇದ, ರಮೇಶ ಪಲ್ಲೇದ, ಅನಿಲಕುಮಾರ, ವಿಜಯ ಬೂದಿಹಾಳ, ತುಳಸಪ್ಪ ಸುಳ್ಳದ, ಮಲ್ಲಿಕಾರ್ಜುನ ಬಿದರೂರ, ಪ್ರಭು ಮೇಟಿ, ಬಸಣ್ಣ ಮೂಲಿಮನಿ, ಬಸಪ್ಪ ಅಕ್ಕಿ, ಮುತ್ತಣ್ಣ ಪಲ್ಲೇದ, ಶಿವಾನಂದ ಗುಗ್ಗರಿ, ಅಶೋಕ ಪವಾಡಶೆಟ್ಟಿ, ಸಂಗಣ್ಣ ಮುದಗಲ್, ಶಿವಪ್ಪ ಅಕ್ಕಿ, ವೀರಪ್ಪ ಚಿನ್ನೂರು, ಚನ್ನಮಲ್ಲಪ್ಪ ಹಳ್ಳದ, ರಾಜು ಬಾಣದ, ಶಾಂತಗೌಡ ಪಾಟೀಲ, ಅಂದಪ್ಪ ಸರ್ವಿ, ಇತರರಿದ್ದರು.