ಲಕ್ಷ್ಮೇಶ್ವರ ತಾಲೂಕಿನ ಬಾಲೇಹೊಸೂರು ಗ್ರಾಮದ ಕೆರೆಗಳಿಗೆ ವರದಾ ನದಿಯಿಂದ ನೀರು ಹರಿದು ಬರುತ್ತಿದೆ.
- ಬರದ ಛಾಯೆಯ ಮಧ್ಯೆಯೂ ಜಲಮೂಲಗಳಿಗೆ ಜೀವಕಳೆ
ಲಕ್ಷ್ಮೇಶ್ವರ: ಬಾಲೆಹೊಸೂರ ಗ್ರಾಮದ ಕೆರೆಗಳಿಗೆ ವರದಾ ನದಿಯಿಂದ ಬಾಲೆಹೊಸೂರ ಕೆರೆಗಳಿಗೆ ಈ ವರ್ಷವೂ ವರದಾ ನದಿಯಿಂದ ನೀರು ಹರಿದು ಬರುತ್ತಿದೆ. ಬರದ ಛಾಯೆಯ ನಡುವೆಯೂ ಗ್ರಾಮದ ಕೆರೆಗಳಿಗೆ ನದಿ ನೀರು ಬರುತ್ತಿರುವುದಕ್ಕೆ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.
2016ರಲ್ಲಿ ಶಾಸಕರಾಗಿದ್ದ ರಾಮಕೃಷ್ಣ ದೊಡ್ಡಮನಿ ಅವರು ಬಾಲೆಹೊಸೂರ ಗ್ರಾಮದಲ್ಲಿನ 3 ಕೆರೆಗಳಿಗೆ ವರದಾ ನದಿಯಿಂದ ನೀರು ತುಂಬಿಸಲು 9.50 ಕೋಟಿ ರೂ. ವೆಚ್ಚದ ಯೋಜನೆಯನ್ನು ಸಾಕಾರಗೊಳಿಸಿದ್ದರು. ಸಣ್ಣ ನೀರಾವರಿ ಇಲಾಖೆಯಿಂದ ಸುಮಾರು 64 ಎಕರೆ ಪ್ರದೇಶದಲ್ಲಿ ನಿರ್ಮಿಸಲಾದ ಸಣ್ಣ ನೀರಾವರಿ ಕೆರೆ, 4 ಎಕರೆ ವಿಸ್ತಾರದ ಜೋಕುಮಾರ ಕೆರೆ ಮತ್ತು 42 ಎಕರೆಯಷ್ಟು ವಿಶಾಲವಾಗಿರುವ ಹೊಸಕೆರೆಗಳಿಗೆ 10 ಕಿ.ಮೀ ದೂರದಲ್ಲಿರುವ ಮರಡೂರ ಗ್ರಾಮದ ವರದಾ ನದಿ ಪಾತ್ರದಿಂದ ನೀರು ತುಂಬಿಸುವ ಯೋಜನೆ ಇದಾಗಿತ್ತು.
2022ರಲ್ಲಿ ನದಿಗೆ ನೀರು ಹರಿಸುವ ಯೋಜನೆ ಪ್ರಾರಂಭವಾದಾಗ ಪ್ರತಿ ವರ್ಷ ಮಳೆಗಾಲದಲ್ಲಿ ನದಿ ಹರಿಯುತ್ತಿರುವ ವೇಳೆ ಜುಲೈದಿಂದ ಸೆಪ್ಟೆಂಬರ್‌ವರೆಗೂ ಕೆರೆಗೆ ನೀರು ಹರಿಸಲಾಗುತ್ತದೆ. ಈ ವರ್ಷದ ಮುಂಗಾರು ಮಳೆಯ ಕೊರತೆಯಿಂದ ಗ್ರಾಮದ ಎಲ್ಲ ಮೂರು ಕೆರೆಗಳು ಬತ್ತಿ ಹೋಗಿದ್ದವು, ಇದೀಗ ಕೆರೆಗಳು ಸಂಪೂರ್ಣ ಭರ್ತಿಯಾಗುತ್ತಿದ್ದು, ಗ್ರಾಮದಲ್ಲಿನ ಬೋರ್‌ವೆಲ್‌ಗಳ ಅಂತರ್ಜಲ ಮಟ್ಟ ಏರಿಕೆಯಾಗಿ ವರದೆಯ ನೀರು ವರದಾನವಾಗಿ ಪರಿಣಮಿಸಿದೆ.
ರಾಮಕೃಷ್ಣ ದೊಡ್ಡಮನಿ ಅವರ ದೂರದೃಷ್ಟಿಯಿಂದ ಗ್ರಾಮದ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಜಾರಿಗೆ ಬಂದಿದೆ. ಹತ್ತಾರು ಸಂಕಷ್ಟಗಳ ನಡುವೆ ಸಾಕಾರಗೊಂಡ ಮಹತ್ವದ ಕಾರ್ಯದಿಂದ ಗ್ರಾಮದ ವ್ಯಾಪ್ತಿಯ ಬೋರ್‌ವೆಲ್‌ಗಳ ಅಂತರ್ಜಲಮಟ್ಟ ಕಾಯ್ದುಕೊಳ್ಳಲಾಗಿದೆ. ರೈತರು, ಜನ, ಜಾನುವಾರುಗಳಿಗೆ ಆಸರೆಯಾಗಿದೆ. ಬರದ ಸಮಯದಲ್ಲಿ ವರದಾ ನದಿ ನೀರು ನಮ್ಮೂರ ಕೆರೆಗಳಿಗೆ ಹರಿದು ಬರುತ್ತಿರುವುದು ನಮಗೆಲ್ಲ ವರದಾನವಾಗಿದೆ. ಕೆರೆಗಳಿಗೆ ನದಿ ನೀರು ಹರಿಸುವ ಮೊದಲು ಸಣ್ಣ ನೀರಾವರಿ ಇಲಾಖೆ, ತಾಪಂ, ಗ್ರಾಪಂಗಳು ಕೆರೆ ಹೂಳೆತ್ತುವುದು, ಗಿಡಗಂಟೆಗಳನ್ನು ತೆರವುಗೊಳಿಸುವ ಕಾರ್ಯ ಮಾಡಿದರೆ ಸಾಕಷ್ಟು ಅನುಕೂಲವಾಗುತ್ತದೆ.
— ಬಸವರೆಡ್ಡಿ ಹನಮರೆಡ್ಡಿ ಗ್ರಾಮಸ್ಥ