ಧರ್ಮ ಸಮಾರಂಭದಲ್ಲಿ ಸಂಸದ ಬಸವರಾಜ ಬೊಮ್ಮಾಯಿ
ಗಜೇಂದ್ರಗಡ: ದೇಶದಲ್ಲಿ ಕೃಷಿ (AGRI) ಬೆಳೆದಿದೆ. ಆದರೆ, ರೈತನ ಸ್ಥಿತಿ ಸುಧಾರಿಸಿಲ್ಲ. ಕೃಷಿಯಲ್ಲಿ ಬಂಡವಾಳ ಹೂಡಿಕೆ ಕಡಿಮೆಯಾಗಿದೆ. ಒಂದು ಕಾಲದಲ್ಲಿ ಕೃಷಿಯಿಂದ ಶೇ 60ಕ್ಕಿಂತ ಹೆಚ್ಚು ಜಿಡಿಪಿ ಇತ್ತು. ಆದರೆ, ಕೃಷಿಯಿಂದ ಜಿಡಿಪಿ ಕಡಿಮೆಯಾಗಿದೆ. ಕೃಷಿ ವಲಯದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಚರ್ಚೆ ನಡೆಸುವುದು ಅಗತ್ಯವಿದೆ ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ತಾಲೂಕಿನ ಸೂಡಿ ಗ್ರಾಮದಲ್ಲಿ ವೀರಶೈವ ಧರ್ಮಪೀಠದ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ 50ನೇ ವರ್ಷದ ರಥೋತ್ಸವದ ನಿಮಿತ್ತ ನೂತನ ರಥ ಲೋಕಾರ್ಪಣೆ ಹಾಗೂ ಧರ್ಮ ಸಮಾರಂಭದಲ್ಲಿ ಗುರುವಾರ ಭಾಗವಹಿಸಿ ಅವರು ಮಾತನಾಡಿದರು.
ರೇಣುಕಾಚಾರ್ಯರು ಮಾನವಧರ್ಮಕ್ಕೆ ಜಯವಾಗಲಿ ಎಂದು ಹೇಳಿದರು. ನಾವೆಲ್ಲರೂ ಮನುಷ್ಯರಾಗಿ ಹುಟ್ಟಿ ಮನುಷ್ಯರಾಗಿಯೇ ಹೋಗುತ್ತೇವೆ. ಆದರೆ, ಕೆಲವರು ಮನುಷ್ಯರಾಗಿ ಹುಟ್ಟಿ ಮಾನವರಾಗಿ ದೇವ ಮಾನವರಾಗುತ್ತಾರೆ. ಮನುಷ್ಯ ಮತ್ತು ಮಾನವರ ನಡುವೆ ಇರುವ ವ್ಯತ್ಯಾಸ ಇಷ್ಟೆ. ಕಾಮ, ಕ್ರೋಧ, ಮೋಹ, ಮದ, ಮತ್ಸರದ ಸಂಕೋಲೆಯಲ್ಲಿ ಸಿಲುಕಿರುವವನು ಮನುಷ್ಯ, ನ್ಯಾಯ, ನೀತಿ, ಧರ್ಮ, ಪ್ರೀತಿ, ಕರುಣೆಯಲ್ಲಿ ಸಿಲುಕಿರುವವನು ಮಾನವ. ಮಾನವೀಯ ಗುಣಗಳು ಎಂದರೆ ಏನು ಅಂತಕರಣ ಇರುವಂತಹ ಬದುಕನ್ನು ನಡೆಸುವುದು. ಅಂತಕರಣದಿಂದ ಜೀವನ ನಡೆಸಿದರೆ ನಮ್ಮ ಬದುಕಿನ ಪಯಣ ಮನುಷ್ಯನಿಂದ ಮಾನವೀಯತೆಯ ಕಡೆಗೆ ಹೋಗುತ್ತದೆ ಎಂದು ಹೇಳಿದರು.
ಅಂತಃಕರಣ ಮಾಯ: ಜಗತ್ತು ಮಾನವೀಯತೆ ಕಳೆದುಕೊಂಡಿದೆ. ಪ್ರತಿ ದಿನ ಯುದ್ಧ ನಡೆಯುತ್ತಿದೆ. ಯುದ್ಧ ಹಿಂದೆ ನ್ಯಾಯಕ್ಕಾಗಿ, ಧರ್ಮಕ್ಕಾಗಿ ನಡೆಯುತ್ತಿತ್ತು. ಸತ್ಯದ ಸ್ಥಾಪನೆಗಾಗಿ ಯುದ್ಧ ನಡೆಯುತ್ತಿತ್ತು. ಈಗ ಯಾರು? ಯಾಕೆ? ಯುದ್ಧ ಮಾಡುತ್ತಿದ್ದಾರೆ ಎಂಬುದು ಯಾರಿಗೂ ಗೊತ್ತಿಲ್ಲ. ಇದು ಸರಿಯಲ್ಲ ಎಂದು ಹೇಳುವ ಶಕ್ತಿ ಯಾರಿಗೂ ಇಲ್ಲ. ಹೀಗಾಗಿ ಜಗತ್ತಿನಲ್ಲಿ ಮಾನವೀಯತೆ ಸಂಪೂರ್ಣ ಮಾಯವಾಗಿದೆ. ರೈತರು ಬೆಳೆದ ಬೆಳೆಗೆ ಅಂತಾರಾಷ್ಟ್ರೀಯ ಮಾರುಕಟ್ಟೆ ಬೆಲೆ ನಿಗದಿ ಮಾಡುತ್ತದೆ. ರೈತನಿಗೆ ಆರ್ಥಿಕತೆಯ ಹಿಡಿತ ಸಿಗುತ್ತಿಲ್ಲ. ಎಷ್ಟು ಬಂಡವಾಳ ಹೂಡಬೇಕು, ಎಷ್ಟು ಲಾಭ ಬರುತ್ತದೆ ಎನ್ನುವ ಲೆಕ್ಕ ಸಿಗುತ್ತಿಲ್ಲ ಎಂದು ಹೇಳಿದರು.
ರೈತ ಅಭಿವೃದ್ಧಿಯಾಗಿಲ್ಲ: ಈಗ 140 ಕೋಟಿ ಜನಸಂಖ್ಯೆ ಆಗಿದೆ. ಎಲ್ಲರಿಗೂ ಆಹಾರ ಸಿಗುತ್ತಿದೆ. ಅದಕ್ಕೆ ನಮ್ಮ ರೈತ ಕಾರಣ. ಈಗಲೂ ಕೃಷಿ ವಲಯದಲ್ಲಿ ಶೇ 65 ರಷ್ಟು ಉದ್ಯೋಗ ಸೃಷ್ಟಿಯಾಗುತ್ತಿದೆ. ಆದರೆ, ಜಿಡಿಪಿ ಕಡಿಮೆಯಾಗಿದೆ. ಕೃಷಿಯಲ್ಲಿ ಶೇ 1ರಷ್ಟು ಅಭಿವೃದಧಿಯಾದರೆ ಶೇ 4 ರಷ್ಟು ಉತ್ಪಾದನಾ ವಲಯದ ಅಭಿವೃದ್ಧಿಯಾಗುತ್ತದೆ. ಶೇ 10 ಸೇವಾ ವಲಯದ ಅಭಿವೃದ್ಧಿಯಾಗುತ್ತದೆ. ಕೃಷಿ ಅಭಿವೃದ್ಧಿಯ ಕುರಿತು ಉತ್ತಮ ಚರ್ಚೆಗಳು ನಡೆದು ಅದರ ಸದುಪಯೋಗ ಆಗಲಿ ಎಂದು ಹೇಳಿದರು.
ಶ್ರೀ ಷ.ಬ್ರ ಡಾ. ಕೊಟ್ಟೂರ ಬಸವೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿ, ಷ.ಬ್ರ ವೀರೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿ, ಷ.ಬ್ರ ಶಿವಸಿದ್ಧರಾಮೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿ, ಷ.ಬ್ರ ಕರಿಬಸವ ಶಿವಾಚಾರ್ಯ ಮಹಾಸ್ವಾಮೀಜಿ, ಮ.ನಿ.ಪ್ರ ಮಲ್ಲಿಕಾರ್ಜುನ ಮಹಾಸ್ವಾಮೀಜಿ, ಡಾ. ಭೀಮೇಶ್ವರ ಜೋಶಿ ಸಾನ್ನಿಧ್ಯ ವಹಿಸಿದ್ದರು. ಶಾಸಕ ಜಿ.ಎಸ್.ಪಾಟೀಲ, ಮಾಜಿ ಶಾಸಕ ಕಳಕಪ್ಪ ಬಂಡಿ, ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ, ರೋಣ ಮಂಡಳದ ಅಧ್ಯಕ್ಷ ಉಮೇಶ ಮಲ್ಲಾಪುರ ಪ್ರಮುಖರು ಉಪಸ್ಥಿತರಿದ್ದರು.