ರೋಣ ಪಟ್ಟಣದ ಜಕ್ಕಲಿ ರಸ್ತೆಯಲ್ಲಿ ಮರ ಸ್ಥಳಾಂತರಿಸುವ ಕಾರ್ಯಕ್ಕೆ ಮಿಥುನ್ ಪಾಟೀಲ ಚಾಲನೆ ನೀಡಿದರು. ರಮೇಶ ಹೊಸಮನಿ, ಬಾವಾಸಾಬ್ ಬೆಟಗೇರಿ, ಅನ್ವರ್ ಕೋಲ್ಹಾರ್, ಮಲಿಕ ಯಲಿಗಾರ, ಅಸ್ಲಾಂ ಕೊಪ್ಪಳ, ರಾಜು ಮಾಡಲಗೇರಿ ಇತರರು ಇದ್ದರು.
ರೋಣ: ಪಟ್ಟಣದ ಜಕ್ಕಲಿ ರಸ್ತೆ ವಿಸ್ತರಣೆ ಹಾಗೂ ಫುಟ್‌ಪಾತ್ ನಿರ್ಮಾಣಕ್ಕಾಗಿ ರಸ್ತೆ ಬದಿಯ ಮರಗಳನ್ನು(TREE) ತೆರವುಗೊಳಿಸಿ ಜಿಗಳೂರು ಬಳಿಯ ಪಾರ್ಕ್ ಪಕ್ಕ ಮರು ನಾಟಿ ಮಾಡಲಾಯಿತು.
ಮರ ತೆರವು ಕಾರ್ಯಕ್ರಮಕ್ಕೆ ಚಾಲನೆ ನೀಡಿದ ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಮಿಥುನ್ ಪಾಟೀಲ ಮಾತನಾಡಿ, ಅಭಿವೃದ್ಧಿ ಯೋಜನೆಗಳಿಗಾಗಿ ಮರ ಕಡಿಯುವುದು ತಪ್ಪು. ಆದರೆ, ಸ್ವಲ್ಪ ಆಲೋಚಿಸಿ ಕಡಿದ ಮರಗಳನ್ನು ಬೇರೆಡೆ ಸ್ಥಳಾಂತರಿಸಿ ಮರು ನಾಟಿ ಮಾಡುವುದರಿಂದ ಪರಿಸರ ನಾಶವಾಗದಂತೆ ತಡೆಗಟ್ಟಬಹುದು ಎಂದರು.
ರೋಣ ತಾಲೂಕಿನಲ್ಲಿ ಇದೊಂದು ವಿಶೇಷವಾಗಿದ್ದು, ಇನ್ನು ಮಂದೆ, ರಸ್ತೆ, ಗಟಾರ್ ಹಾಗೂ ಸರ್ಕಾರಿ ಕಟ್ಟಡಗಳ ನಿರ್ಮಾಣದ ವೇಳೆ ಮರಗಳನ್ನು ಕಡಿಯದೇ ಬೇರೆಡೆ ಸ್ಥಳಾಂತರ ಮಾಡಬೇಕು ಎಂದು ಸಲಹೆ ನೀಡಿದರು.
ಬಾವಾಸಾಬ್ ಬೆಟಗೇರಿ, ಮಲ್ಲಯ್ಯ ಮಹಾಪುರುಷಮಠ, ಪುರಸಭೆ ಮುಖ್ಯಾಧಿಕಾರಿ ರಮೇಶ ಹೊಸಮನಿ, ವಲಯ ಅರಣ್ಯಾಧಿಕಾರಿ ಅನ್ವರ್ ಕೋಲ್ಹಾರ್, ಮಲಿಕ ಯಲಿಗಾರ, ಅಸ್ಲಾಂ ಕೊಪ್ಪಳ, ರಾಜು ಮಾಡಲಗೇರಿ ಇತರರು ಇದ್ದರು.
ಆರೋಗ್ಯವಂತ ಮತ್ತು ಮರು ನಾಟಿಗೆ ಯೋಗ್ಯವಿರುವ ಮರಗಳನ್ನು ಈಗಿರುವ ಸ್ಥಳದಿಂದ ಸ್ಥಳಾಂತರಿಸಿ ಸಾಲು ಮರದ ತಿಮ್ಮಕ್ಕ ಪಾರ್ಕ್ ಪಕ್ಕದ ಖಾಲಿ ಜಾಗದಲ್ಲಿ ಮರು ನಾಟಿಗೆ ಸಿದ್ಧತೆ ಮಾಡಲಾಗಿದೆ. ಅಲ್ಲಿ ಮರು ನಾಟಿ ಮಾಡಿ ಆರೈಕೆ ಮಾಡಲಾಗುತ್ತದೆ.
ಪಟ್ಟಣದ ಜಕ್ಕಲಿ ರಸ್ತೆ ವಿಸ್ತರಣೆ ಹಾಗೂ ಗಟಾರ್ ನಿರ್ಮಾಣಕ್ಕೆ ಮರಗಳು ಅಡ್ಡಿಯಾಗಿದ್ದವು. ಪುರಸಭೆ, ಅರಣ್ಯ ಇಲಾಖೆ ಹಾಗೂ ಹೆಸ್ಕಾಂ ಸಹಕಾರದೊಂದಿಗೆ ಮರಗಳನ್ನು ಸುರಕ್ಷಿತವಾಗಿ ತೆರವುಗೊಳಿಸಿ ಸ್ಥಳಾಂತರಿಸಲಾಗಿದೆ.