ಲಕ್ಷ್ಮೇಶ್ವರದ ಜಮೀನೊಂದರಲ್ಲಿ ಎತ್ತುಗಳ ಮೂಲಕ ಎಡೆ ಕುಂಟೆ ಹೊಡೆಯುತ್ತಿರುವುದು. 
ಗದಗ

BULLS: ಎತ್ತುಗಳುಳಿಗೆ ಈಗ ಭಾರಿ ಡಿಮಾಂಡ್

ಪ್ರಮುಖ ಮುಖ್ಯಾಂಶಗಳು

  • ಎಡೆ ಕುಂಟೆ ಹೊಡೆಯಲು ರೈತರಿಗೆ ಧಾವಂತ
  • ಖರ್ಚು ವೆಚ್ಚ ಹೆಚ್ಚಾಗುವ ಆತಂಕ
  • ಎತ್ತುಗಳ ಕೊರತೆ ನೀಗಿಸಲು ಯಂತ್ರೋಪಕರಣಗಳಿಗೆ ಮೊರೆ
ಮಲ್ಲು ಕಳಸಾಪುರ ಲಕ್ಷ್ಮೇಶ್ವರ
ಕಳೆದ ತಿಂಗಳು ಸುರಿದ ಉತ್ತಮ ಮಳೆಗೆ ಬಿತ್ತನೆ ಮಾಡಿರುವ ಬೆಳೆಗಳ ನಡುವೆ ಎಡೆ ಕುಂಟೆ ಹೊಡೆಯುವ ಕಾರ್ಯ ಎಲ್ಲೆಡೆ ಚುರುಕುಗೊಂಡಿದೆ. ಹೀಗಾಗಿ ಬಾಡಿಗೆ ಎತ್ತುಗಳಿಗೆ (BULLS) ಭಾರಿ ಡಿಮಾಂಡ್ ಬಂದಿದೆ ಮತ್ತು ಎತ್ತುಗಳ ಕೊರತೆ ನೀಗಿಸಲು ರೈತರು ಯಂತ್ರೋಪಕರಣಗಳಿಗೆ ಮೊರೆ ಹೋಗಿದ್ದಾರೆ.
ಸದ್ಯ 20 ದಿನಗಳ ಬೆಳೆಗಳಿದ್ದು ಮಳೆಯೂ ಬಿಡುವು ಕೊಟ್ಟಿದ್ದರಿಂದ ಹೆಸರು, ಶೇಂಗಾ, ಹತ್ತಿ, ಗೋವಿನಜೋಳ ಇನ್ನಿತರ ಬೆಳೆಗಳ ನಡುವಿನ ಕಳೆ ನಿಯಂತ್ರಣ ಮತ್ತು ಬೆಳೆ ಪೋಷಣೆಗಾಗಿ ಎಡೆ ಹೊಡೆಯುವ ಕಾರ್ಯಕ್ಕೆ ಎತ್ತುಗಳ ಅವಶ್ಯಕತೆ ಸಾಕಷ್ಟಿದೆ. 8-10 ದಿನಗಳಿಂದ ಮಳೆಯಾಗದೇ ಬಿಸಿಲು ಬಿದ್ದಿದ್ದು ಈಗ ಎಡೆ ಹೊಡೆಯುವುದು ಮತ್ತು ಸಾಲು ಮಾಡುವುದರಿಂದ ಬೆಳೆಯ ನಡುವಿನ ಕಳೆ ಸಾಯುತ್ತದೆ. ಬಳಿಕ ಗೊಬ್ಬರ ಹಾಕಿಸಲು ಅನೂಲವಾಗುತ್ತದೆ ಎಂಬ ಧಾವಂತದಲ್ಲಿರುವ ರೈತರು ಎತ್ತುಗಳನ್ನು ಹೊಂದಿರುವ ಅದರಲ್ಲೂ ಬಾಡಿಗೆ ಹೊಡೆಯುವ ರೈತರ ಮನೆ ಬಾಗಿಲಿಗೆ ಎಡತಾಕುತ್ತಿದ್ದಾರೆ.
ಏಕಕಾಲಕ್ಕೆ ಎತ್ತಿನಿಂದಲೇ ಎಡೆ ಹೊಡೆಯುವ, ಹತ್ತಿ, ಮೆಣಸಿನಕಾಯಿ ನಡುವೆ ಸಾಲು ಮಾಡುವ ಕೃಷಿ ಚಟುವಟಿಕೆ ಗರಿಗೆದರಿದ್ದರಿಂದ ಬೇಡಿಕೆ ಹೆಚ್ಚಾಗಿದೆ. ಮುಖ್ಯವಾಗಿ ಜಮೀನು ಹದಗೊಳಿಸಲು, ಬಿತ್ತನೆಗೆ ಟ್ರ್ಯಾಕ್ಟರ್ ಬಳಸುತ್ತಾರೆ. ಎಡೆ ಮಾಡಲು ಮಾತ್ರ ಎತ್ತುಗಳೇ ಬೇಕು. ಆದರೆ, ರೈತರು ಈ ಕೆಲಸಕ್ಕಾಗಿ ವರ್ಷಪೂರ್ತಿ ಎತ್ತುಗಳ ಜೋಪಾನವನ್ನೇ ಕೈ ಬಿಟ್ಟಿದ್ದಾರೆ. ಈ ಕಾರಣದಿಂದ ಪ್ರತಿ ಈ ಅವಧಿಯಲ್ಲಿ ಎತ್ತುಗಳಿಗೆ ಎಲ್ಲಿಲ್ಲದ ಬೇಡಿಕೆ. ಬೇಡಿಕೆ ಹೆಚ್ಚಿದ್ದರಿಂದ ಬಾಡಿಗೆಯೂ ಹೆಚ್ಚಳವಾಗಿದೆ. ಈ ಮೊದಲು 1500 ರೂ ಇದ್ದ ಎತ್ತುಗಳ ದಿನ ಬಾಡಿಗೆ ಈಗ 2000 ರೂ, ಅಗತ್ಯಕ್ಕೆ ತಕ್ಕಂತೆ 2500 ರೂ. ಮುಟ್ಟಿದೆ ಜೊತೆಗೆ ಎಡೆ ಹೊಡೆಯುವ ಆಳಿನ ಪಗಾರವು ಹೆಚ್ಚಿದೆ.
ಇಷ್ಟಾಗಿಯೂ ಬಾಡಿಗೆ ಎತ್ತುಗಳು ಸಿಗುತ್ತಿಲ್ಲ ಎತ್ತುಗಳಿರುವ ರೈತರಿಗೆ ಮೊದಲೇ ದುಡ್ಡುಕೊಟ್ಟು ವಾರ ಮೊದಲೇ ಕಾಯ್ದಿರಿಸಬೇಕಾಗಿದೆ. ಟ್ರ್ಯಾಕ್ಟರ್ ಮೂಲಕ ಎಡೆ ಹೊಡೆಯುವ ತಂತ್ರಜ್ಞಾನ ಅಳವಡಿಸಿಕೊಂಡಿದ್ದರೂ ಇದಕ್ಕೆ ಹೆಚ್ಚು ಜಮೀನು, ಆಳು ಇದ್ದರೆ ಮಾತ್ರ ಅನಕೂಲವಾಗುತ್ತದೆ. ಅಲ್ಲದೆ, ಎತ್ತುಗಳಿಂದಲೇ ಎಡೆ ಕುಂಟೆ ಹೊಡೆಯುವುದು ಉತ್ತಮ ಎಂಬ ಬಲವಾದ ಮನಸ್ಥಿತಿ ರೈತರದ್ದಾರಗಿದೆ. ಇನ್ನು ರೈತರು ಎತ್ತಿನ ಸಮಸ್ಯೆಗೆ ಪರ್ಯಾಯ ವ್ಯವಸ್ಥೆ ಕಂಡುಕೊಳ್ಳುತ್ತಿದ್ದು ಎಡೆ ಕುಂಟೆ ಹೊಡೆಯಲು ಟ್ರ್ಯಾಕ್ಟರ್‌ಗಳಿಗೆ ಚಿಕ್ಕ ಗಾಲಿ ಅಳವಡಿಸಿ ವಿಶೇಷವಾಗಿ ಸಿದ್ದಪಡಿಸುತ್ತಿದ್ದಾರೆ. ಈ ಟ್ರ್ಯಾಕ್ಟರ್‌ನಿಂದ ದಿನಕ್ಕೆ 10 ಎಕರೆಯಷ್ಟು ಎಡೆ ಹೊಡೆಯಬಹುದಾರರೂ ಕೂಲಿ ಕಾರ್ಮಿಕರ ಸಮಸ್ಯೆ ಕಾಡುತ್ತಿದೆ. ಎಕರೆ/ಎರಡು ಎಕರೆ ಇರುವ ಸಣ್ಣ ರೈತರು ಸೈಕಲ್ ಕುಂಟೆ ಬಳಸುತ್ತಿರುವುದನ್ನು ಕಾಣಬಹುದಾಗಿದೆ.
ಬಿತ್ತನೆ ಕಾರ್ಯಕ್ಕೆ ಟ್ರ್ಯಾಕ್ಟರ್ ಬಳಸಿದ್ದೇವೆ. ಆದರೆ ಶೇಂಗಾ, ಹೆಸರು, ಎಡೆ ಹೊಡೆಯಲು, ಹತ್ತಿ, ಮೆಣಸಿನ ಬೆಳೆ ಸಾಲು ಮಾಡಲು ಎತ್ತುಗಳೇ ಬೇಕಾಗುತ್ತದೆಯಾದ್ದರಿಂದ ಎತ್ತುಗಳಿಗೆ ಬೇಡಿಕೆ ಹೆಚ್ಚಿದ್ದು ಬಾಡಿಗೆ ದರವೂ ಹೆಚ್ಚಳವಾಗಿದೆ. ಮೊದಲೇ ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿರುವ ರೈತರಿಗೆ ಎತ್ತು ಮತ್ತು ಯಂತ್ರೋಪಕರಣಗಳ ಬಾಡಿಗೆ ದರ ಹೆಚ್ಚಿರುವುದು ಚಿಂತೆಗೀಡು ಮಾಡಿದೆ. ಬೇಸಿಗೆ ಸಂದರ್ಭದಲ್ಲಿಯೇ ಬಾಡಿಗೆ ಹೊಡೆಯುವ ರೈತರಿಗೆ ಮೊದಲೇ ದುಡ್ಡು, ಹೊಟ್ಟು, ಮೇವು ಕೊಟ್ಟು ನಮ್ಮ ಕೆಲಸ ಇದ್ದಾಗ ಬರಬೇಕು ಎಂದು ಕರಾರು ಮಾಡಿಕೊಂಡಿರುತ್ತಾರೆ. ಕೃಷಿ ಕಾರ್ಮಿಕರ ಕೊರತೆಯೂ ದೊಡ್ಡ ಸವಾಲಾಗಿದ್ದು ಗಂಡಾಳಿಗೆ 350-400 ಹೆಣ್ಣಾಳಿಗೆ 250-300 ರೂ ಇದ್ದದ್ದು ಈಗ ಹೆಚ್ಚು ಕೊಡುತ್ತೇವೆಂದರೂ ಆಳಿನ ಸಮಸ್ಯೆ ಕಾಡುತ್ತಿದೆ.

ಕಳೆದ ವರ್ಷ ಬರಗಾಲದಿಂದ ಕಡಿಮೆ ಬೆಲೆಗೆ ಎತ್ತುಗಳನ್ನು ಮಾರಾಟ ಮಾಡಲಾಗಿತ್ತು. ಈಗ 1 ರಿಂದ 1.50 ಲಕ್ಷ ರೂ ಬೆಲೆ ಇರುವ ಎತ್ತುಗಳನ್ನು ಖರೀದಿಸುವ ಶಕ್ತಿ ರೈತರಲ್ಲಿಲ್ಲ. ಬೆಳೆ ಸಕಾಲಿಕ ಮಳೆಯಿಂದ ನಳನಳಿಸುತ್ತಿದ್ದರೂ ಬೆಳೆಯ ಜೊತೆಗೆ ಕಳೆಯೂ ಬೆಳೆದಿದೆ. ಆದಷ್ಟು ಬೇಗ ಎಡೆ ಹೊಡೆಯಲೇಬೇಕು. ಇಲ್ಲದಿದ್ದರೆ ಬೆಳೆಗಿಂತ ಕಳೆಯೇ ಹೆಚ್ಚುವುದರಿಂದ ಎಡೆಕುಂಟೆ ಹೊಡೆಯಲು ಎತ್ತುಗಳಿರುವ ರೈತರ ಮನೆಗೆ ಎಡತಾಕುವಂತಾಗಿದೆ . 2 ಸಾವಿರ ರೂ. ಎತ್ತಿನ ಬಾಡಿಗೆ, 400 ರೂ ಆಳಿನ ಪಗಾರ ಕೊಡಲು ಸಿದ್ದವಿದ್ದರೂ ಬಾಡಿಗೆ ಎತ್ತು/ಅಳು ಸಿಗದಂತಾಗಿದೆ.

— ಮುದಕನಗೌಡ್ರ ಪಾಟೀಲ, ರೈತ