ಲಕ್ಷ್ಮೇಶ್ವರ ಪಟ್ಟಣದ ಟಿ.ಬಿ. ಮಾನ್ವಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕಟ್ಟಡ ಕಾಮಗಾರಿ ಅರ್ಧಕ್ಕೆ ನಿಂತಿರುವುದು. 
ಗದಗ

ROOM: ನನೆಗುದಿಗೆ ಬಿದ್ದ ಕೊಠಡಿ ಕಾಮಗಾರಿ

ಪ್ರಮುಖ ಮುಖ್ಯಾಂಶಗಳು

  • ಟಿ.ಬಿ. ಮಾನ್ವಿ ಪಪೂ ಕಾಲೇಜ್ ವಿದ್ಯಾರ್ಥಿಗಳಿಗೆ ನಿತ್ಯ ಕಿರಿಕಿರಿ
  • ಶಿಕ್ಷಣ ಇಲಾಖೆ ನಿರ್ಲಕ್ಷೃಕ್ಕೆ ಜನರ ಬೇಸರ
  • ಅನುದಾನದ ಕೊರತೆ, ಪಿಯು ಶಿಕ್ಷಣ ಇಲಾಖೆಯ ನಿರ್ಲಕ್ಷ್ಯ
ಮಲ್ಲು ಕಳಸಾಪುರ ಲಕ್ಷ್ಮೇಶ್ವರ
ಪಟ್ಟಣದ ಟಿ.ಬಿ. ಮಾನ್ವಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಹೆಚ್ಚುವರಿ 4 ಕೊಠಡಿಗಳ ಕಾಮಗಾರಿ ಅನುದಾನದ ಕೊರತೆ ಮತ್ತು ಪಿಯು ಶಿಕ್ಷಣ ಇಲಾಖೆಯ ನಿರ್ಲಕ್ಷ್ಯದಿಂದ 2 ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಪರಿಣಾಮ ನೂರಾರು ವಿದ್ಯಾರ್ಥಿಗಳ ಶಿಕ್ಷಣಕ್ಕೆ ತೊಂದರೆಯಾಗುತ್ತಿದ್ದು ವಿದ್ಯಾರ್ಥಿಗಳು, ಪಾಲಕರು ಹಾಗೂ ಶಿಕ್ಷಣ ಪ್ರೇಮಿಗಳ ಅಸಮಾಧಾನಕ್ಕೆ ಕಾರಣವಾಗಿದೆ.
ಕಾಯಂ ಉಪನ್ಯಾಸಕರು ಮತ್ತು ಅಗತ್ಯ ಸೌಲಭ್ಯಗಳ ಕೊರತೆಯ ನಡುವೆಯೂ ಕಳೆದ 25 ವರ್ಷಗಳಿಂದ ಉತ್ತಮ ಶೈಕ್ಷಣಿಕ ಸಾಧನೆಯ ಮೂಲಕ ಕಾಲೇಜ್ ಜಿಲ್ಲೆಯಲ್ಲಿಯೇ ಹೆಸರಾಗಿದೆ. ಪ್ರಸ್ತುತ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿರುವುದರಿಂದ ಹೆಚ್ಚುವರಿ ಕೊಠಡಿಗಳ ಅಗತ್ಯವಿದೆ. ಹೀಗಾಗಿ 2022-23ನೇ ಸಾಲಿನ ರಾಜ್ಯ ವಲಯದ ವಿವೇಕ ಯೋಜನೆಯಡಿ 1.35 ಕೋಟಿ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಾಣಕ್ಕೆ ಟೆಂಡರ್ ಮಂಜೂರಾಗಿತ್ತು.
ಆದರೆ, ಕಾಮಗಾರಿ ಆರಂಭಗೊಂಡು ಸ್ಲಾೃಬ್ ಹಂತದವರೆಗೆ ಬಂದಿರುವ ಕಟ್ಟಡಕ್ಕೆ ಶಿಕ್ಷಣ ಇಲಾಖೆಯಿಂದ ಕೇವಲ 98.40 ಲಕ್ಷ ರೂ. ಬಿಡುಗಡೆಯಾಗಿದೆ. ಇನ್ನುಳಿದ ಅನುದಾನದ ಕೊರತೆಯಿಂದ ಕಾಮಗಾರಿ ಸ್ಥಗಿತಗೊಂಡಿದೆ.
ಸೈನ್ಸ್, ಕಾಮರ್ಸ್ ಮತ್ತು ಆರ್ಟ್ಸ್ ವಿಭಾಗ ಸೇರಿದಂತೆ ಒಟ್ಟು 500 ವಿದ್ಯಾರ್ಥಿಗಳಿರುವ ಕಾಲೇಜ್‌ನಲ್ಲಿ ಸದ್ಯ 13 ಕೊಠಡಿಗಳಿವೆ. 5 ಲ್ಯಾಬರೋಟರಿ ಲ್ಯಾಬ್, 1 ಆಫೀಸ್/ ಸ್ಟಾಫ್‌ರೂಂ, 1 ಸ್ಟೋರ್ ರೂಮ್‌ಗಾಗಿ ಬಳಸಲಾಗುತ್ತಿದೆ. ಉಳಿದ 6 ಕೊಠಡಿಗಳಲ್ಲಿ 3 ಕೊಠಡಿಗಳು ಕಳಪೆ ಕಾಮಗಾರಿಯಿಂದ ಸೋರುತ್ತಿವೆ. ಇಂತಹ ಅಪಾಯದ ಕೊಠಡಿಗಳಲ್ಲಿ ತರಗತಿ ನಡೆಸುವುದು ಅಪಾಯ ಎನ್ನುವುದು ಇಂಜಿನಿಯರ್‌ಗಳ ಅಭಿಪ್ರಾಯವಾಗಿದೆ. ಉಳಿದ 3-4 ಕೊಠಡಿಗಳಲ್ಲಿ ಹೆಚ್ಚು ವಿದ್ಯಾರ್ಥಿಗಳನ್ನು ಸೇರಿಸಿ ತರಗತಿ ನಡೆಸಲಾಗುತ್ತಿದೆ. 1 ಕೊಠಡಿಯಲ್ಲಿ 100ಕ್ಕಿಂತ ಹೆಚ್ಚು ಮಕ್ಕಳಿದ್ದರೂ ಮತ್ತೊಂದು ವಿಭಾಗ ಆರಂಭಿಸಲು ಸಾಧ್ಯವಾಗುತ್ತಿಲ್ಲ. ಅಲ್ಲದೆ, ಕಾಲೇಜ್‌ನಲ್ಲಿ ಐವರು ಮಾತ್ರ ಕಾಯಂ ಉಪನ್ಯಾಸಕರಿದ್ದು 10 ಜನ ಅತಿಥಿ ಉಪನ್ಯಾಸಕರ ನೆರವಿನಿಂದ ಬೋಧನೆ ನಡೆಯುತ್ತಿದೆ. ಎಫ್‌ಡಿಸಿ, ಎಸ್‌ಡಿಸಿ, ಸಿಪಾಯಿ ಹುದ್ದೆಗಳಿಗೆ ಇನ್ನೂ ಮಂಜೂರಾತಿ ದೊರೆತಿಲ್ಲ. ಸಮಸ್ಯೆ ಕುರಿತು ಸಚಿವರು ಹಾಗೂ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ವಿದ್ಯಾರ್ಥಿಗಳು ಹಾಗೂ ಶಿಕ್ಷಣ ಪ್ರೇಮಿಗಳು.
ಈ ಬಗ್ಗೆ ಶಾಲಾ ಶಿಕ್ಷಣ ಇಲಾಖೆ (ಪಿಯು) ನಿರ್ದೇಶಕರನ್ನು ಹಲವು ಬಾರಿ ಸಂಪರ್ಕಿಸಲು ಯತ್ನಿಸಿದರೂ ಅವರು ಪೋನ್ ಕರೆ ಸ್ವೀಕರಿಸಿಲ್ಲ.

ವಿದ್ಯಾರ್ಥಿಗಳ ಅಗತ್ಯಕ್ಕೆ ತಕ್ಕಂತೆ ಕೊಠಡಿಗಳು, ಕಾಯಂ ಉಪನ್ಯಾಸಕರು ಹಾಗೂ ಸಿಬ್ಬಂದಿ, ಪೀಠೋಪಕರಣಗಳು, ಶೌಚಗೃಹ, ಆಟದ ಮೈದಾನ ಸೇರಿದಂತೆ ಮೂಲಸೌಕರ್ಯಗಳ ಅಗತ್ಯತೆ ತೀವ್ರವಾಗಿದೆ. ಅರ್ಧಕ್ಕೆ ನಿಂತ ಕಟ್ಟಡಕ್ಕೆ ಅಗತ್ಯ ಸೌಲಭ್ಯಗಳನ್ನು ಒದಗಿಸಿ ಕಟ್ಟಡವನ್ನು ಶೀಘ್ರ ಪೂರ್ಣಗೊಳಿಸಿ ವಿದ್ಯಾರ್ಥಿಗಳ ಭವಿಷ್ಯ ಸುರಕ್ಷಿತಗೊಳಿಸಬೇಕು. ಈ ಬಗ್ಗೆ ಪಿಯು ಇಲಾಖೆ, ಸಚಿವರು, ಶಾಸಕರು, ಕಾಲೇಜು ಅಭಿವೃದ್ದಿ ಸಮಿತಿ ಗಮನ ಹರಿಸಬೇಕು.

— ಪ್ರವೀಣ ಬಾಳಿಕಾಯಿ, ಪುರಸಭೆ ಮಾಜಿ ಸದಸ್ಯ

ಕೊಠಡಿಗಳ ನಿರ್ಮಾಣಕ್ಕೆ ಶಿಕ್ಷಣ ಇಲಾಖೆಯಿಂದ 1.35 ಕೋಟಿ ರೂ. ಮೊತ್ತದ ಟೆಂಡರ್ ಆಗಿತ್ತು. ಆದರೆ ಬಿಡುಗಡೆಯಾಗಿದ್ದು 98.40 ಲಕ್ಷ ರೂ ಮಾತ್ರ. ಕೊಠಡಿ ನಿರ್ಮಾಣದ ಕಾಮಗಾರಿ ಶೇ.90 ರಷ್ಟಾಗಿ ಸ್ಥಗಿತಗೊಂಡಿದೆ. ಉಳಿದ, ಅಗತ್ಯ ಅನುದಾನಕ್ಕಾಗಿ ಶಿಕ್ಷಣ ಇಲಾಖೆಗೆ ಪತ್ರ ಬರೆದಿದ್ದೇವೆ ಮತ್ತು ಈ ಬಗ್ಗೆ ಸಚಿವರು, ಶಾಸಕರ ಗಮನಕ್ಕೂ ತರಲಾಗಿದೆ ಅನುದಾನ ಬಂದ ತಕ್ಷಣ ಉಳಿದ ಕಾಮಗಾರಿ ಪೂರ್ಣಗೊಳಿಸಲಾಗುವುದು.

— ಶ್ರೀಶೈಲ ಚಿಮ್ಮಟ್, ಸಹಾಯಕ ಇಂಜಿನಿಯರ್, ಪಿಡಬ್ಲುೃಡಿ

ನಾಲ್ಕು ಕೊಠಡಿಗಳ ನಿರ್ಮಾಣ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು ಅನುದಾನ ಕೊರತೆಯಿಂದ ಪ್ಲಂಬಿಂಗ್, ಪೇಂಟಿಂಗ್, ಫರ್ನಿಚರ್ ಇತರೆ ಕೆಲಸಗಳು ಬಾಕಿ ಉಳಿದಿವೆ. ಈ ಬಗ್ಗೆ ಜಿಲ್ಲಾ ಹಂತದ ಕೆಡಿಪಿ ಸಭೆಯಲ್ಲಿ ಶಿಕ್ಷಣ ಸಚಿವರ ಗಮನಕ್ಕೂ ತರಲಾಗಿತ್ತು. ಸರ್ಕಾರದಿಂದ ಅನುದಾನ ತರುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುತ್ತಿದ್ದು ಆದಷ್ಟು ಬೇಗ ಬಾಕಿ ಕಾಮಗಾರಿ ಪೂರ್ಣಗೊಳಿಸಲಾಗುತ್ತದೆ.

— ಡಾ.ಚಂದ್ರು ಲಮಾಣಿ, ಶಾಸಕ