ನರೇಗಲ್ಲ ಪಟ್ಟಣದಲ್ಲಿ ಆಯೋಜಿಸಿದ್ದ ಮಾಸಿಕ ಮನೆಯಲ್ಲಿ ಮಹಾಮನೆ ಕಾರ್ಯಕ್ರಮದಲ್ಲಿ ಕೆ.ಎ. ಬಳಗೇರ ಉಪನ್ಯಾಸ ನೀಡಿದರು. ಸಿ.ವಿ. ವಂಕಲಕುಂಟಿ, ಶರಣಪ್ಪ ಹಂಜಿ, ಮುತ್ತಣ್ಣ ಕರಡಿ ಇತರರಿದ್ದರು. 
ಗದಗ

Virtuous-life ಸಾತ್ವಿಕ ಬದುಕಿಗೆ ಶರಣರ ತತ್ವಗಳೇ ದಾರಿದೀಪ

ಪ್ರಮುಖ ಮುಖ್ಯಾಂಶಗಳು

  • ಶಸಾಪ ಜಿಲ್ಲಾಧ್ಯಕ್ಷ ಕೆ.ಎ. ಬಳಿಗೇರ ಅಭಿಮತ
  • ಮನೆಯಲ್ಲಿ ಮಹಾಮನೆ ಕಾರ್ಯಕ್ರಮ

ನರೇಗಲ್ಲ: ಮನುಕುಲದ ಭವಿಷ್ಯದ ವಾರಸುದಾರರಾಗಿರುವ ಮಕ್ಕಳ ಮನಸಿನಲ್ಲಿ ಸಂಸ್ಕಾರ, ಮಾನವೀಯತೆ ಹಾಗೂ ಸಾತ್ವಿಕತೆಯ ಬೀಜ ಬಿತ್ತುವಲ್ಲಿ ಶರಣರ ವಚನಗಳು ದಾರಿದೀಪವಾಗಿವೆ. ಎಳೆಯ ವಯಸ್ಸಿನಲ್ಲಿಯೇ ಬಸವಾದಿ ಶರಣರ ತತ್ವಾದರ್ಶಗಳನ್ನು ಮಕ್ಕಳಿಗೆ ಪರಿಚಯಿಸಿ, ಅವರನ್ನು ಮೌಲ್ಯಯುತ ಬದುಕಿನತ್ತ ಕೊಂಡೊಯ್ಯುವ ಹೊಣೆಗಾರಿಕೆ ಪಾಲಕರ ಮೇಲಿದೆ ಎಂದು ಗದಗ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎ. ಬಳಿಗೇರ ಹೇಳಿದರು.

ಶ್ರಾವಣ ಮಹೋತ್ಸವದ ಅಂಗವಾಗಿ ಪಟ್ಟಣದ ಶರಣಪ್ಪ ಎಸ್. ಹಂಜಿ ಅವರ ನಿವಾಸದಲ್ಲಿ ನರೇಗಲ್ಲ ಹಾಗೂ ಕೋಡಿಕೊಪ್ಪ ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಆಯೋಜಿಸಿದ್ದ ಮಾಸಿಕ ಮನೆಯಲ್ಲಿ ಮಹಾಮನೆ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು. ಶರಣರ ವಚನಗಳು ಮಕ್ಕಳ ಅಂತರಂಗವನ್ನು ತಿದ್ದುವ ಸಂಸ್ಕಾರದ ದೀಪಗಳಾಗಿವೆ. ನಡೆ, ನುಡಿ ಹಾಗೂ ನೋಟದಲ್ಲಿ ಪರಿಶುದ್ಧತೆಯನ್ನು ಬೆಳೆಸುವ ಶಕ್ತಿ ವಚನಗಳಲ್ಲಿದೆ. ಅವು ಕೇವಲ ಓದುವ ಸಾಹಿತ್ಯವಲ್ಲ; ಬದುಕನ್ನು ರೂಪಿಸುವ ಜೀವನದರ್ಶನ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಶಿವಯೋಗಿ ಜಕ್ಕಲಿ ಮಾತನಾಡಿ, ಸಮಾಜದ ಬಂಧುಗಳನ್ನು ಒಂದೆಡೆ ಸೇರಿಸುವುದರೊಂದಿಗೆ ಶರಣ ಸಂಪ್ರದಾಯದ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಉದ್ದೇಶದಿಂದ ಪ್ರತಿ ತಿಂಗಳು ಮನೆಯಲ್ಲಿ ಮಹಾಮನೆ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದರು.
ರಾಜ್ಯ ಪ್ರಶಸ್ತಿಗೆ ಭಾಜನರಾದ ಸಂಘದ ಅಧ್ಯಕ್ಷ ಶಿವಯೋಗಿ ಜಕ್ಕಲಿ, ಉಪಾಧ್ಯಕ್ಷ ಬಸವರಾಜ ವಂಕಲಕುಂಟಿ ಹಾಗೂ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಕೆ.ಎ. ಬಳಿಗೇರ ಅವರನ್ನು ಸನ್ಮಾನಿಸಲಾಯಿತು.
ನಿವೃತ್ತ ಶಿಕ್ಷಕ ಸಿ.ವಿ. ವಂಕಲಕುಂಟಿ, ಶರಣಪ್ಪ ಹಂಜಿ, ಮುತ್ತಣ್ಣ ಕರಡಿ, ರಾಜಕುಮಾರ ನೂಲ್ವಿ, ಬಸವರಾಜ ಅಂಗಡಿ, ಪ್ರಭು ಅಂಗಡಿ ಇತರರಿದ್ದರು. ಸಂಘದ ಉಪಾಧ್ಯಕ್ಷ ಬಸವರಾಜ ವಂಕಲಕುಂಟಿ ಹಾಗೂ ಗೌರವಾಧ್ಯಕ್ಷ ಗುರುಪಾದಪ್ಪ ಬೆಲ್ಲದ ಕಾರ್ಯಕ್ರಮ ನಿರ್ವಹಿಸಿದರು.