MASS MARRAGE ಹೊಳೆಆಲೂರ ಯಚ್ಚರೇಶ್ವರ ಸರ್ವಧರ್ಮ ಸಾಮೂಹಿಕ ವಿವಾಹ ಸಮಿತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಸಮಾರಂಭದಲ್ಲಿ 21 ಜೋಡಿ ದಾಂಪತ್ಯ ಜೀವನಕ್ಕೆ ಪದಾರ್ಪಣೆ ಮಾಡಿದರು.
ಹೊಳೆಆಲೂರ: ಜನ್ಮದಾತರು, ಒಡಹುಟ್ಟಿದವರು, (MASS MARRAGE) ಕೂಡಿ ಆಡಿ ಬೆಳೆದ ಸಖಿಯರನ್ನು ತ್ಯಾಗ ಮಾಡಿ ಹುಟ್ಟಿದ ಮನೆ ಹಾಗೂ ಕೊಟ್ಟ ಮನೆಗೆ ಕೀರ್ತಿ ತರುವ ಸಂಕಲ್ಪದೊಂದಿಗೆ ದೈವ ಸಾಕ್ಷಿಯಾಗಿ ನೂತನ ಜೀವನಕ್ಕೆ ಕಾಲಿಡುವ ನವ ದಂಪತಿ ಸುಂದರ ಸಮಾಜ ನಿರ್ಮಾಣದ ಭಾಗಿದಾರರು ಆಗಬೇಕು ಎಂದು ನರಗುಂದ ಪತ್ರಿವನ ಮಠದ ಡಾ. ಗುರುಸಿದ್ಧವೀರ ಶಿವಯೋಗಿ ಶಿವಾಚಾರ್ಯರು ಹೇಳಿದರು.
ಗ್ರಾಮದ ಯಚ್ಚರೇಶ್ವರ ಸರ್ವಧರ್ಮ ಸಾಮೂಹಿಕ ವಿವಾಹ ಸಮಿತಿಯಿಂದ ಭಾನುವಾರ ಯಚ್ಚರೇಶ್ವರ ಮಠದ ಆವರಣದಲ್ಲಿ ಹಮ್ಮಿಕೊಂಡಿದ್ದ 21 ಜೋಡಿ ಸಾಮೂಹಿಕ ವಿವಾಹ ಸಮಾರಂಭದ ನೇತೃತ್ವ ವಹಿಸಿ ಮಾತನಾಡಿದ ಅವರು, ಸಾಮೂಹಿಕ ವಿವಾಹ ದುಂದು ವೆಚ್ಚ ಕಡಿಮೆ ಮಾಡುವುದರ ಜತೆಗೆ ಬಡವರಿಗೆ ವರದಾನವಾಗಿವೆ. ಧಾಮಿಕ ಮತ್ತು ಭಾವನಾತ್ಮಕ ಅಂಶಗಳನ್ನು ಒಳಗೊಂಡು, ಗುರು ಹಿರಿಯರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ನೀವು ಉತ್ತಮ ವೈವಾಹಿಕ ಜೀನವ ನಡಸುವದರ ಜತೆಗೆ ಮಕ್ಕಳನ್ನು ಸತ್ಪಪ್ರಜೆಗಳಾಗಿ ಬೆಳೆಸುವ ಸಮಾಜಮುಖಿ ಚಿಂತನೆ ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಉಮೇಶಗೌಡ ಪಾಟೀಲ ಮಾತನಾಡಿ, ಮಠಗಳು ಧಾರ್ಮಿಕ ಕಾರ್ಯದ ಜತೆಗೆ ಸಾಮಾಜಿಕ ಕಟ್ಟಳೆಯನ್ನು ಪಾಲನೆ, ತಂದೆ- ತಾಯಿಗಳನ್ನು ಪ್ರೀತಿಯಿಂದ ಕಾಣುವುದು, ಮಕ್ಕಳಿಗೆ ನೈತಿಕ ಮೌಲ್ಯಗಳು, ಸಂಸ್ಕೃತಿ, ಸಂಸ್ಕಾರ, ಪರಂಪರೆ ಪಾಲಿಸುವ ಮೂಲಕ ಸಾಮರಸ್ಯದ ಸಮಾಜ ನಿರ್ಮಾಣದಲ್ಲಿ ಪಾಲಗೊಳ್ಳುವಂತೆ ಪ್ರೇರಣೆ ನೀಡುತ್ತವೆ ಎಂದು ಹೇಳಿದರು.
ಯುವ ಕಾಂಗ್ರೆಸ್ ಕಾರ್ಯದರ್ಶಿ ವೀವೇಕ ಯಾವಗಲ್ಲ ಮಾತನಾಡಿ, ಸರ್ವ ಜನಾಂಗದ ಶಾಂತಿಯ ತೋಟವಾದ ಭಾರತದಲ್ಲಿ ನಂಬಿಕೆ ಮತ್ತು ಸಂಸ್ಕಾರಗಳಿಗೆ ಯಾವಾಗಲೂ ಬೆಲೆ ಇದೆ. ವಿವಿಧ ಧರ್ಮಗಳ ಆಚರಣೆ ಭಿನ್ನವಾಗಿದ್ದರೂ ಮಾನವ ಕಲ್ಯಾಣವೇ ಎಲ್ಲ ಧರ್ಮಗಳ ಗುರಿಯಾಗಿದೆ ಎಂದು ಹೇಳಿದರು.
ಸಾನ್ನಿಧ್ಯವನ್ನು ಯಚ್ಚರೇಶ್ವರ ಮಹಾಸ್ವಾಮೀಜಿಗಳು ವಹಿಸಿದ್ದರು.