B Y Vijayendra
ಗದಗ

ಸ್ಟಿಂಗ್ ಏಜೆನ್ಸಿ ಹೆಸರನ್ನು ಸಿಎಂ ಬಹಿರಂಗಪಡಿಸಬೇಕು: ಬಿ.ವೈ. ವಿಜಯೇಂದ್ರ

ವಿಜಯವಾಣಿ ಸುದ್ದಿಜಾಲ ಗದಗ
ರಾಜ್ಯದಲ್ಲಿ ಸ್ಟಿಂಗ್ ಆಪರೇಷನ್ ಮಾಡಿಸಿ ಬ್ಲಾಕ್ ಮೇಲ್ ಮಾಡುವ ಚರಿತ್ರೆ ಯಾರದ್ದು ಎಂದು ಕಾಂಗ್ರೆಸ್ ಪಕ್ಷದ ಸಚಿವ ಮತ್ತು ಶಾಸಕರನ್ನೇ ಕೇಳಬೇಕು. ಸ್ಟಿಂಗ್ ಆಪರೇಷನ್ ಪರಂಪರೆ ಎಂಬುದನ್ನು ಶಾಸಕ ಎಚ್. ಕೆ. ಪಾಟೀಲರಿಗೆ ಕೇಳಿದರೆ ಚೆನ್ನಾಗಿ ಹೇಳುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ವ್ಯಂಗ್ಯವಾಡಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ಮೊಬೈಲ್ ಸ್ವಿಚ್ ಆಫ್ ಮಾಡಿಸಿ, ಬಾಗಿಲು ಹಾಕಿಕೊಂಡು ಲಂಚ ಹೊಡೆಯಿರಿ ಎಂದು ಕ್ಯಾಬಿನೆಟ್ ಸಚಿವರೊಬ್ಬರಿಗೆ ಕಿವಿಮಾತು ಹೇಳಲಾಗಿದೆ. ಸ್ಟಿಂಗ್ ಮಾಡುವ ಭಯದಿಂದ ಲಂಚಬಾಕತನಕ್ಕೆ ಹೊಸ ದಾರಿ ಕಂಡುಕೊಳ್ಳಲು ಹೀಗೆ ಹೇಳಿದ್ದಾರೆ. ಏಜೆನ್ಸಿಗಳ ಹೆಸರನ್ನು ಮುಖ್ಯಮಂತ್ರಿಗಳೇ ಹೇಳಬೇಕು. ಇದು ನಾನು ಹೇಳುತ್ತಿಲ್ಲ. ಬದಲಾಗಿ ಆಡಳಿತ ಪಕ್ಷದ ಕಾಂಗ್ರೆಸ್ ಶಾಸಕರೇ ಹೇಳುತ್ತಿದ್ದಾರೆ ಎಂದು ಲಂಚದ ಪ್ರಕರಣಕ್ಕೆ ಸಂಬಂಧಿಸಿದ ಸ್ಟಿಂಗ್ ಆಪರೇಷನ್ ಕುರಿತು  ವಿಜಯೇಂದ್ರ ಹೇಳಿದರು.
ಕೆಲವು ದಿನಗಳ ಹಿಂದೆ ಅತ್ಯುನ್ನತ ಪ್ರಭಾವಿ ನಾಯಕರೊಬ್ಬರು ರಿಯಲ್ ಎಸ್ಟೇಟ್ ಉದ್ಯಮಿಗಳನ್ನು ಕರೆಸಿದ್ದಾರೆ. ಪೋನ್ ಸ್ವಿಚ್ ಆಫ್ ಮಾಡಿಸಿ ಮಾತನಾಡಿ, ಇಷ್ಟು ದಿನ 75   ಕೊಡುತ್ತಿದ್ದಿರಿ, ಇನ್ನು ಮುಂದೆ 150 ಕೊಡಬೇಕು ಎಂದು ಕೇಳಿದ್ದಾರೆ. ಅಷ್ಟು ಕೊಡಲು ಆಗುವುದಿ ಎಂದು ಉದ್ಯಮಿ ಹೇಳಿದಾಗ ರಾಜ್ಯ ಬಿಟ್ಟು ಹೋಗಿ ಎಂದು ಹೇಳಲಾಗಿದೆ ಎಂದು ವಿಜಯೇಂದ್ರ ಗಂಭೀರ ಆರೋಪ ಮಾಡಿದರು.
ಆ ಪ್ರಭಾವಿ ನಾಯಕ ಯಾರು?. 75 ರಿಂದ 150 ರೂ. ಗೆ ದಿಢೀರ್ ಹೆಚ್ಚಳ ಮಾಡಿದವರು ಯಾರು?. ಎಂಬುದನ್ನು ಮುಖ್ಯಮಂತ್ರಿಗಳು ತಿಳಿದುಕೊಂಡು ಹೇಳಬೇಕು ಎಂದು ವಿಜಯೇಂದ್ರ ಆಗ್ರಹಿಸಿದರು.

 
ಜಿಪಂ, ತಾಪಂ ಚುನಾವಣೆ ಮೈತ್ರಿ ಇನ್ನೂ ಅಂತಿಮ ಆಗಿಲ್ಲ.

ಜೆಡಿಎಸ್ ಜತೆಗೆ ಜಿಪಂ ಹಾಗೂ ತಾಪಂ ಚುನಾವಣೆ ಮೈತ್ರಿ ಕುರಿತು ಮಾತನಾಡಿದ ವಿಜಯೇಂದ್ರ ಮೈತ್ರಿ ಬಗ್ಗೆ ಇನ್ನೂ ಅಂತಿಮ ತೀರ್ಮಾನಕ್ಕೆ ಬಂದಿಲ್ಲ. ಈ ಕುರಿತು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಮಾತನಾಡಿದ್ದೇನೆ. ವಿಧಾನಸಭೆ ಚುನಾವಣೆಯನ್ನು ಒಟ್ಟಿಗೆ ಎದುರಿಸಬೇಕು ಎಂಬ ಅಪೇಕ್ಷೆ ಇದ್ದರೆ, ಸ್ಥಳಿಯ ಚುನಾವಣೆಗಳ ಬಗ್ಗೆ ಸ್ಪಷ್ಟತೆ ಇರಬೇಕು. ಕುಳಿತು ಮಾತನಾಡಬೇಕು ಎಂದು ಸ್ಪಷ್ಟಪಡಿಸಿದರು.

ಬಸನಗೌಡ ಪಾಟೀಲ್ ಯತ್ನಾಳ್ ಅವರ ಪಕ್ಷ ಸೇರ್ಪಡೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಯತ್ನಾಳ್ ಅವರು ಒಂದು ತಿಂಗಳಿನಿಂದ ಪಾಪ ಸುಮ್ಮನಿದ್ದಾರೆ. ಈಗ ಗಣೇಶ ಹಬ್ಬ ನಡೆಯುತ್ತಿದೆ. ಅವರಿಗೆ ತೊಂದರೆ ಕೊಡಬೇಡಿ. ಹಬ್ಬದ ನಂತರ ಮಾತನಾಡುತ್ತೇನೆ ಎಂದು ಯತ್ನಾಳ ಕುರಿತು ವಿಜಯೇಂದ್ರ ಮಾಮಿರ್ಕವಾಗಿ ಹೇಳಿದರು.