ನರಗುಂದ: ಉತ್ತಮ ಶಿಕ್ಷಕನ (TEACHER) ಬೋಧನೆ ತರಗತಿ ಮುಗಿದೊಡನೆ ಮುಗಿಯುವುದಿಲ್ಲ. ಅದು ಸತ್ಯ, ನಿತ್ಯ ಸರ್ವಕಾಲಿಕ. ಗುರುವಿನ ಮಾತುಗಳು ಹಾಗೂ ಅವರು ತೋರಿದ ಸಣ್ಣ ದಾರಿಯೊಂದು ವಿದ್ಯಾರ್ಥಿ ಬದುಕಿನ ದಿಸೆಯನ್ನೇ ಬದಲಿಸುತ್ತದೆ. ಜೀವನದುದ್ದಕ್ಕೂ ವಿದ್ಯಾರ್ಥಿಗಳ ಹಿತ ಬಯಸುವ ಶಿಕ್ಷಕರನ್ನು ಪೂಜನೀಯ ಸ್ಥಾನದಲ್ಲಿ ಕಾಣಲಾಗುತ್ತದೆ ಎಂದು ನಿವೃತ್ತ ಶಿಕ್ಷಕ ಆರ್.ವೈ. ಮುಳಗುಂದ ಬಣ್ಣಿಸಿದರು.
ತಾಲೂಕಿನ ಭೈರನಹಟ್ಟಿಯ ಶ್ರೀ ದೊರೆಸ್ವಾಮಿ ವಿರಕ್ತಮಠದಲ್ಲಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ, ಶ್ರೀದೊರೆಸ್ವಾಮಿ ವಿವಿಧೋದ್ದೇಶ ಟ್ರಸ್ಟ್ ಆಶ್ರಯದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ 387ನೇ ಮಾಸಿಕ ಶಿವಾನುಭವ, ನಿವೃತ್ತ ಹಾಗೂ ಸಾಧಕ ಶಿಕ್ಷಕರಿಗೆ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಶಿಕ್ಷಕರು ಬೋಧನೆಯ ಜತೆಗೆ ಸರ್ಕಾರದ ವಿವಿಧ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿರುವುದರಿಂದ ಪರಿಣಾಮಕಾರಿ ಬೋಧನೆಗೆ ಸಾಕಷ್ಟು ತೊಂದರೆ ಉಂಟಾಗುತ್ತಿದೆ. ತರಗತಿಗಳ ಕೊಠಡಿಯಲ್ಲಿ ದೇಶದ ಭವಿಷ್ಯ ನಿರ್ಮಾಣವಾಗುತ್ತದೆ. ಒಂದು ಕೋಣೆಯಲ್ಲಿ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿರುತ್ತಾರೆ. ಹೀಗಾಗಿ ಶಿಕ್ಷಕರು ಮೈಯೆಲ್ಲ ಕಣ್ಣಾಗಿಸಿಕೊಂಡು ಅಧ್ಯಯನ ಮಾಡಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ದಾರಿದೀಪವಾಗಬೇಕು’ ಎಂದರು.
ಶ್ರೀಶಾಂತಲಿಂಗ ಸ್ವಾಮೀಜಿ ಮಾತನಾಡಿ, ವಿದ್ಯಾರ್ಥಿಗಳ ಜ್ಞಾನ, ಮೌಲ್ಯಗಳು, ಆತ್ಮವಿಶ್ವಾಸ ಮತ್ತು ಸುಂದರವಾದ ಭವಿಷ್ಯವನ್ನು ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ತರವಾಗಿರುತ್ತದೆ. ಶಿಕ್ಷಕನ ಆಯ್ಕೆ ವಿಚಾರದಲ್ಲಿ ಸರ್ಕಾರ ಅಥವಾ ಖಾಸಗಿ ಶಿಕ್ಷಣ ಸಂಸ್ಥೆಗಳು ಸಂಬಳಕ್ಕೊಬ್ಬ ಎಂಬಂತೆ ಆಯ್ಕೆ ಮಾಡದೆ ಪ್ರತಿಭಾವಂತ ವ್ಯಕ್ತಿಯನ್ನು ಆಯ್ಕೆ ಮಾಡಿ ಗುಣಮಟ್ಟದ, ಸಂಸ್ಕಾರಯುತ ಶಿಕ್ಷಣಕ್ಕೆ ಆದ್ಯತೆ ನೀಡಬೇಕು’ ಎಂದರು.
ವಿದ್ಯಾರ್ಥಿಗಳು ಮತ್ತು ಸಮಾಜದ ಸರ್ವತೋಮುಖ ಬೆಳವಣಿಗೆಗೆ ಶಿಕ್ಷಕರೇ ನಿಜವಾದ ಬೆನ್ನೆಲುಬು. ಶಿಕ್ಷಕರು ಕೇವಲ ಪಠ್ಯ-ಪುಸ್ತಕದ ಜ್ಞಾನವನ್ನಲ್ಲದೆ ಮಾನವನ ಬದುಕಿಗೆ ಅಗತ್ಯವಿರುವ ಮೌಲ್ಯಗಳು ಮತ್ತು ಸತ್ಯ-ಅಸತ್ಯಗಳ ಪರಿಚಯವನ್ನು ವಿದ್ಯಾರ್ಥಿಗಳಿಗೆ ಕಲಿಸಬೇಕು ಎಂದರು.
ಜಿಲ್ಲಾ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿ ಪುರಸ್ಕೃತರು, ನಿವೃತ್ತರಾದ 22 ಶಿಕ್ಷಕರನ್ನು ಸನ್ಮಾನಿಸಲಾಯಿತು. ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಆರ್. ನಿಡಗುಂದಿ, ನಿವೃತ್ತ ಶಿಕ್ಷಕ ನಾಗಪ್ಪ ಮಣ್ಣೇರಿ, ಮಾಜಿ ಸೈನಿಕ ಅರ್ಜುನ ಕಳಿಗಣ್ಣವರ, ಪ್ರೊ. ಆರ್.ಎಚ್. ತಿಗಡಿ, ಆರ್.ಪಿ. ಪಟ್ಟಣಶೆಟ್ಟಿ, ಮುಖ್ಯ ಶಿಕ್ಷಕ ವಿ.ಜಿ. ಬೋಗಾರ, ಶಿಕ್ಷಕ ಅಮರೇಶ ತೆಗ್ಗಿನಮನಿ ಇತರರಿದ್ದರು. ಪ್ರೊ. ಆರ್.ಕೆ. ಐನಾಪೂರ, ಶ್ರೀಮಠದ ವ್ಯವಸ್ಥಾಪಕ ಮಹಾಂತೇಶ ಹಿರೇಮಠ ಕಾರ್ಯಕ್ರಮ ನಿರ್ವಹಿಸಿದರು.