WATER ನರೇಗಲ್ಲ ಸಮೀಪದ ಕೋಟುಮಚಗಿ ಗ್ರಾಮಸ್ಥರು ಕುಡಿಯುವ ನೀರಿನ ಸಮಸ್ಯೆ ಪರಿಹರಿಸಬೇಕೆಂದು ಆಗ್ರಹಿಸಿ ಪಿಡಿಒಗೆ ಮನವಿ ಸಲ್ಲಿಸಿದರು.
ನರೇಗಲ್ಲ: ಸಮೀಪದ ಕೋಟುಮಚಗಿ ಗ್ರಾಮಸ್ಥರು ಕುಡಿಯುವ ನೀರಿನ (WATER) ಸರಬರಾಜಿನಲ್ಲಿ ಆಗಿರುವ ತೊಂದರೆಗೆ ತಕ್ಷಣ ಸರಿಪಡಿಸುವಂತೆ ಎಂದು ಮನವಿ ಸಲ್ಲಿಸಿದರು.
ಗ್ರಾಮಸ್ಥರಿಗೆ ಆಗುತ್ತಿರುವ ಕುಡಿಯುವ ನೀರಿನ ತೊಂದರೆ ಪರಿಶೀಲಿಸಬೇಕು. ಅದಕ್ಕೆ ಸೂಕ್ತ ಮತ್ತು ಶಾಶ್ವತವಾದ ಪರಿಹಾರ ಮೇ 20ರೊಳಗೆ ಕಲ್ಪಿಸಬೇಕು. ಇಲ್ಲವಾದರೆ ಗ್ರಾಮಸ್ಥರಿಂದ ಉಗ್ರ ಹೋರಾಟ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ನೀರಿನ ಜಲಾಗಾರವನ್ನು ಸ್ವಚ್ಛಗೊಳಿಸಬೇಕು. ನೀರು ಸರಬರಾಜು ಮಾಡುವ ಪೈಪ್‌ಗಳಲ್ಲಿ ತುಂಬಿರುವ ಫ್ಲೊರೈಡ್ ಅಂಶ ತೆರವು ಮಾಡಬೇಕು. ಗ್ರಾಮದ ಎಲ್ಲ ಓಣಿಗಳಲ್ಲಿ ನೀರು ಸಮರ್ಪಕವಾಗಿ ಸರಬರಾಜು ಆಗುವಂತೆ ಮಾಡಬೇಕೆಂದು ಆಗ್ರಹಿಸಿದ್ದಾರೆ.
ಈಗ ಕುಡಿಯುವ ನೀರಿನ ತೊಂದರೆ ಇರುವುದರಿಂದ ಮಹಿಳೆಯರು, ವೃದ್ಧರು, ಮಕ್ಕಳು ದೂರದ ಪ್ರದೇಶಗಳಿಂದ ನೀರು ತಂದು ಜೀವನ ಸಾಗಿಸುವುದು ತುಂಬ ದುಸ್ತರವಾಗುತ್ತಿದೆ. ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದರು.
ತಾಪಂ ಮಾಜಿ ಅಧ್ಯಕ್ಷ ವಿದ್ಯಾಧರ ದೊಡ್ಡಮನಿ ಮಾತನಾಡಿ, ನೀರಿನ ಅನುಕೂಲ ಇಂದಾದೀತು, ನಾಳೆಯಾದೀತು ಎಂದು ಕಾಯುವುದೇ ಆಯಿತು. ಒಂದು ತಿಂಗಳಿಗೂ ಹೆಚ್ಚಿನ ಕಾಲ ಕಳೆದರೂ ಸಮಸ್ಯೆಗೆ ಪರಿಹಾರವೇನೂ ಸಿಕ್ಕಿಲ್ಲ. ಪಿಡಿಒ ಅವರನ್ನು ಕೇಳಿದರೆ ಪೈಪ್‌ಗಳಲ್ಲಿ ತುಂಬಿರುವ ಫ್ಲೊರೈಡ್ ರಾಸಾಯನಿಕ ತೆಗೆಯುವುದೇ ಸವಾಲಿನ ಕೆಲಸ. ನಾವೂ ಪ್ರಯತ್ನಿಸುತ್ತಿದ್ದೇವೆ. ಇನ್ನು ಕೆಲವೇ ದಿನಗಳಲ್ಲಿ ಎಲ್ಲವೂ ಸರಿಯಾಗುತ್ತದೆ ಎಂದು ಹೇಳುತ್ತಲೇ ಬಂದಿದ್ದಾರೆ. ಆದರೆ ತಿಂಗಳುಗಟ್ಟಲೆ ಸಮಯ ಕಳೆದರೂ ಕಾರ್ಯ ಆಗದಿರುವುದು ನಮ್ಮೆಲ್ಲರ ಸಹನೆಯನ್ನು ಕೆಣಕಿದೆ. ಆದ್ದರಿಂದ ಮೇ 20ರೊಳಗೆ ಪಿಡಿಒರವರು ಕುಡಿಯುವ ನೀರಿನ ಸಮಸ್ಯೆಗೆ ಏನಾದರೊಂದು ಪರಿಹಾರ ಕಾಣಿಸಲೇಬೇಕೆಂದು ಒತ್ತಾಯಿಸಿದರು.