ಮುಳಗುಂದ ಸಮೀಪದ ಶಿರುಂದ ಗ್ರಾಮದ ಹೊಲದಲ್ಲಿ ಮಳೆ ಕೊರೆತೆಯಿಂದ ಒಣಗುತ್ತಿರುವ ಗೋವಿನ ಜೋಳ ಬೆಳೆಯನ್ನು ಕುರಿಗಳು sheep ಮೇಯುತ್ತಿರುವುದು.
ಮುಳಗುಂದ: ಮಳೆ ಕೊರತೆಯಿಂದ ಕೃಷಿ ವಲಯದ ಮೇಲೆ ಗಂಭೀರ ಪರಿಣಾಮ ಬೀರಿದೆ. ಸಮೀಪದ ಶಿರುಂದ ಗ್ರಾಮದ ಹೊಲಗಳಲ್ಲಿ ಒಣಗಿದ ಗೋವಿನಜೋಳ ಬೆಳೆಗಳನ್ನು ರೈತರು ಕುರಿಗಳನ್ನು sheep ಮೇಯಿಸಲು ಬಿಟ್ಟಿದ್ದಾರೆ.
ಮುಂಗಾರು ವೈಫಲ್ಯದಿಂದ ಗ್ರಾಮೀಣ ಭಾಗದ ಕೃಷಿ ಅವಲಂಬಿತ ಕುಟುಂಬಗಳು ಅಕ್ಷರಶಃ ಸಂಕಷ್ಟದ ಸುಳಿಗೆ ಸಿಲುಕಿವೆ. ಅರ್ಧ ಮುಂಗಾರು ಕಳೆದರೂ ಹೇಳಿಕೊಳ್ಳುವಂಥ ಮಳೆ ಸುರಿಯದ ಕಾರಣ ರೈತರು ಬಿತ್ತನೆ ಮಾಡಿದ ಶೇಂಗಾ, ಹೆಸರು, ಗೋವಿನಜೋಳ, ಮೆಣಸಿನಕಾಯಿ, ಉಳ್ಳಾಗಡ್ಡಿ, ಉದ್ದು ಸೇರಿದಂತೆ ಇತರೆ ಬೆಳೆಗಳ ಬೆಳವಣಿಗೆಗೆ ತೇವಾಂಶವಿಲ್ಲದೆ ಒಣಗುತ್ತಿವೆ.
ಮಳೆ ಕೊರತೆಯಿಂದಾಗಿ ಬೆಳೆಗಳು ಭೂಮಿಯಿಂದ ಮೇಲೇಳದೆ ಒಣಗುತ್ತಿದ್ದು, ನಿರೀಕ್ಷಿತ ಮಟ್ಟದಲ್ಲಿ ಬೆಳೆಗಳು ಬಾರದ ಕಾರಣ ಕಂಗಾಲಾದ ರೈತರು ಬೆಳೆಗಳನ್ನು ಟ್ರ್ಯಾಕ್ಟರ್ ಮೂಲಕ ಹರಗಿ ನಾಶಪಡಿಸುವಂತಹ ಸ್ಥಿತಿ ಬಂದಿದೆ.
3 ಎಕರೆಯಲ್ಲಿ ಬಿತ್ತನೆ ಮಾಡಿದ ಗೋವಿನಜೋಳ ಬೆಳೆ ಮಳೆ ಬಾರದ ಕಾರಣ, ಕನಿಷ್ಠ ಕುರಿಗಳಿಗಾದರೂ ಮೇವು ಆಗಲಿ ಎಂದು ಹೊಲದಲ್ಲಿ ಕುರಿ ಮೇಯಿಸಲು ಬಿಟ್ಟಿದ್ದೇನೆ. ರೈತರು ಸಂಕಷ್ಟದಲ್ಲಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳಾಗಲೀ, ಜನಪ್ರತಿನಿಧಿಗಳಾಗಲೀ ರೈತರ ಜಮೀನುಗಳಿಗೆ ಇದುವರೆಗೂ ಬಂದಿಲ್ಲ. ಎಲ್ಲೋ ಒಂದು ಕಡೆ ಕಾಟಾಚಾರಕ್ಕೆ ಬೆಳೆಹಾನಿ ಪರಿಶೀಲನೆ ಮಾಡಿ ಹೋಗುತ್ತಾರೆ.
ಸಾವಿರಾರು ರೂ. ಖರ್ಚು ಮಾಡಿ ಕಷ್ಟಪಟ್ಟು ಬೆಳೆದ ಬೆಳೆಯನ್ನು ನಾಶಪಡಿಸುವಂತಹ ಸಂಕಷ್ಟದ ದಿನಗಳು ರೈತರಿಗೆ ಎದುರಾಗಿದ್ದು, ಆರ್ಥಿಕವಾಗಿ ದೊಡ್ಡ ಹೊಡೆತ ಬಿದ್ದಿದೆ. ಮುಂದೇ ಜೀವನ ನಡೆಸುವುದೇ ಕಷ್ಟಕರವಾಗಿದೆ ಎನ್ನುತ್ತಾರೆ ರೈತ ಭೀಮನಗೌಡ ಪಾಟೀಲ.