ACCIDENTನಿಂಗಪ್ಪ ಮಾಟರಂಗಿ, ಪ್ರಶಾಂತ ಬಾರಕೇರ, ಲೋಕೇಶ ಅರಬತಂಬವರ.
ನರಗುಂದ: ಅಪರಿಚಿತ ವಾಹನ ಬೈಕ್‌ಗೆ ಡಿಕ್ಕಿ ಹೊಡೆದು ಮೂವರು ಬೈಕ್ (ACCIDENT) ಸವಾರರು ದಾರುಣವಾಗಿ ಮೃತಪಟ್ಟಿರುವ ಘಟನೆ ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಹೂಲಿಕಟ್ಟಿ- ಹಳಕಟ್ಟಿ ಗ್ರಾಮದ ಮಧ್ಯದ ಸೇತುವೆ ಬಳಿ ಶುಕ್ರವಾರ ರಾತ್ರಿ 8 ಗಂಟೆ ಸುಮಾರಿಗೆ ನಡೆದಿದೆ.
ನರಗುಂದದ ದಂಡಾಪುರ ಕುರುಬಗೇರಿ ಓಣಿಯ ನಿಂಗಪ್ಪ ನೀಲಪ್ಪ ಮಾಟರಂಗಿ (ಬೆಳಹಾರ) (25), ಪ್ರಶಾಂತ ಹನುಮಂತಪ್ಪ ಬಾರಕೇರ (24), ಲೋಕೇಶ ಶಂಕ್ರಪ್ಪ ಅರಬತಂಬವರ (25) ಮೃತ ಬೈಕ್ ಸವಾರರು. ನರಗುಂದದ ಮಹಾಂತೇಶ ಸವದತ್ತಿ ಎಂಬುವರು ಸವದತ್ತಿ ತಾಲೂಕಿನ ಶ್ರೀಯಕ್ಕೇರಿ ಕರಿಯಮ್ಮ ದೇವಿಗೆ ಹರಕೆ ತೀರಿಸಲು ಹೋಗಿದ್ದರು. ಈ ವೇಳೆ ಬಡಾವಣೆಯ ಗುರು- ಹಿರಿಯರು, ದೊಡ್ಡ ವಾಹನದಲ್ಲಿ ತೆರಳಿದರೆ ಇವರು ಪ್ರತ್ಯೇಕವಾಗಿ ಬೈಕ್‌ನಲ್ಲಿ ಯಕ್ಕೇರಿಗೆ ತೆರಳಿದ್ದರು. ದೇವರ ಕಾರ್ಯ ಮುಗಿಸಿ ರಾತ್ರಿ ಮನೆಗೆ ಮರಳುವಾಗ ಟಿಪ್ಪರ್ ವಾಹನ ಬೈಕ್‌ಗೆ ಡಿಕ್ಕಿ ಹೊಡೆದಿದೆ.ಅಪಘಾತದ ರಭಸಕ್ಕೆ ನಿಂಗಪ್ಪ ಮಾಟರಂಗಿ ಹಾಗೂ ಪ್ರಶಾಂತ ಬಾರಕೇರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಲೋಕೇಶ ಶಂಕ್ರಪ್ಪ ಅರಭೂತನವರ (24) ನರಗುಂದದ ಬಾಬಾಸಾಹೇಬ ಸರ್ಕಾರಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಸವದತ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಡಾವಣೆಯಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಶನಿವಾರ ಸಾಮೂಹಿಕವಾಗಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ಅಂತ್ಯಕ್ರಿಯೆ ವೇಳೆ ಯಾವುದೇ ಜನಪ್ರತಿನಿಧಿ ಹಾಗೂ ಅಧಿಕಾರಿಗಳು ಸೌಜನ್ಯಕ್ಕೂ ಭೇಟಿ ನೀಡಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.