ಶಿರಹಟ್ಟಿ ಸಾಮರ್ಥ್ಯ ಸೌಧದಲ್ಲಿ ’ವಿಪತ್ತು ನಿರ್ವಹಣೆ ವಿಷಯಗಳ ಕುರಿತ ಟಾಸ್ಕ್ ಫೋರ್ಸ್ ಕಮಿಟಿ ಸಭೆಯ ಅಧ್ಯಕ್ಷತೆ ವಹಿಸಿ ಶಾಸಕ ಡಾ. ಚಂದ್ರು ಕೆ. ಲಮಾಣಿ ಮಾತನಾಡಿದರು. ರಾಘವೇಂದ್ರ ರಾವ್, ರಾಮಣ್ಣ ದೊಡ್ಡಮನಿ ಇದ್ದರು. 
ಗದಗ

ಜನರ ಸಮಸ್ಯೆಗಳಿಗೆ ಸ್ಪಂದಿಸದಿದ್ರೆ ಕಠಿಣ ಕ್ರಮ: Task Force metting

ಮಂಜುನಾಥ ಗದಗಿನ
ವಿಜಯವಾಣಿ ಸುದ್ದಿಜಾಲ ಶಿರಹಟ್ಟಿ
ಸಾರ್ವಜನಿಕರ ಸಮಸ್ಯೆಗಳಿಗೆ ಸಮಪರ್ಕವಾಗಿ ಸ್ಪಂದಿಸದೆ ಇದ್ದರೆ ಬೇಜವಾಬ್ದಾರಿತನ ಮುಂದುವರಿದರೆ ಕಠಿಣ ಕ್ರಮ ಅನಿವಾರ್ಯ ಎಂದು ಶಾಸಕ ಡಾ. ಚಂದ್ರು ಲಮಾಣಿ ಎಚ್ಚರಿಕೆ ನೀಡಿದರು.
ಸೋಮವಾರ ಪಟ್ಟಣದ ಸಾಮರ್ಥ್ಯ ಸೌಧದಲ್ಲಿ ಜರುಗಿದ ‘ವಿಪತ್ತು ನಿರ್ವಹಣೆ ವಿಷಯಗಳ ಕುರಿತ ಟಾಸ್ಕ್ ಫೋರ್ಸ್ ಕಮಿಟಿ’ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಶಿರಹಟ್ಟಿ ತಾಲೂಕು ಉತ್ತಮ ಮಳೆ ಬೀಳುವ ಪ್ರದೇಶವಾಗಿದ್ದರೂ, ಈ ವಷರ್ ಕೇವಲ ಶೇ.27ರಷ್ಟು ಮಾತ್ರ ಮಳೆಯಾಗಿದೆ. ಮಳೆಯ ಅಭಾವ ಹೀಗೆಯೇ ಮುಂದುವರಿದರೆ ಮುಂಬರುವ ದಿನಗಳಲ್ಲಿ ತಾಲೂಕನ್ನು ಬರಗಾಲ ಪೀಡಿತ ಪ್ರದೇಶ ಎಂದು ಘೋಷಿಸುವ ಸಾಧ್ಯತೆ ದಟ್ಟವಾಗಿದೆ ಎಂದರು.
ಕೇಂದ್ರ ಸ್ಥಾನದಲ್ಲಿ ವಾಸ್ತವ್ಯ ಇರಿ: ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಸಲ್ಲಿಸಲು ಹೋದಾಗ ಕಂದಾಯ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಯ ಅಧಿಕಾರಿಗಳು ಸಕಾಲದಲ್ಲಿ ಲಭ್ಯವಿರುತ್ತಿಲ್ಲ ಎಂಬ ವ್ಯಾಪಕ ದೂರುಗಳು ಕೇಳಿಬರುತ್ತಿವೆ. ಬಾಹ್ಯ ಒತ್ತಡಗಳಿಗೆ ಮಣಿಯದೆ ಜನಾಭಿಮುಖವಾಗಿ ಕಾರ್ಯನಿರ್ವಹಿಸಬೇಕು. ಅಧಿಕಾರಿಗಳು ಸಾರ್ವಜನಿಕರಿಗೆ ಸುಲಭವಾಗಿ ಕೈಗೆಟುಕುವಂತಾಗಲು ಕಂದಾಯ ಮತ್ತು ಗ್ರಾಮೀಣ ಭಾಗದ ಅಧಿಕಾರಿಗಳು ತಾವು ಕರ್ತವ್ಯ ನಿರ್ವಹಿಸುವ ಸ್ಥಳೀಯ ಕೇಂದ್ರ ಸ್ಥಾನಗಳಲ್ಲೇ ಕಡ್ಡಾಯವಾಗಿ ವಾಸ್ತವ್ಯ ಹೂಡಬೇಕು ಎಂದು ಕಟ್ಟುನಿಟ್ಟಿನ ಅದೇಶ ನೀಡಿದರು.
ವರದಿ ಸಲ್ಲಿಸಿ: ಹಿಂದಿನ ನರೇಗಾ ಕ್ರಿಯಾ ಯೋಜನೆಗಳ ಪ್ರಕಾರ ಇನ್ನೂ ಹಲವು ಕಾಮಗಾರಿಗಳು ಬಾಕಿ ಉಳಿದಿವೆ. ಗ್ರಾಮೀಣ ಭಾಗದ ಜನರಿಗೆ ಸಮರ್ಪಕವಾಗಿ ಉದ್ಯೋಗ ದೊರೆಯುತ್ತಿಲ್ಲ. ಹಿಂದಿನ ಕಾಮಗಾರಿಗಳ ಕೂಲಿ ಹಣವೂ ಜಮೆಯಾಗಿಲ್ಲ. ಇದರಿಂದಾಗಿ ಗ್ರಾಮೀಣ ಭಾಗದ ಜನರು ಪ್ರತಿದಿನ ಜೀವನೋಪಾಯಕ್ಕಾಗಿ ಹೊರ ರಾಜ್ಯಗಳಿಗೆ ವಲಸೆ ಹೋಗುವಂತಾಗಿದೆ. ಕೇವಲ ವಿಬಿಜಿ ರಾಮ್ ಜೀ’ ಯೋಜನೆ ಪ್ರಗತಿಯಲ್ಲಿದೆ ಎಂದು ಪ್ರಚಾರ ಗಿಟ್ಟಿಸಿಕೊಳ್ಳುವುದನ್ನು ಬಿಟ್ಟು, ತಾಂತ್ರಿಕ ದೋಷಗಳನ್ನು ಯುದ್ಧೋಪಾದಿಯಲ್ಲಿ ಬಗೆಹರಿಸಿ ಜನರಿಗೆ ಸ್ಥಳೀಯವಾಗಿಯೇ ಉದ್ಯೋಗ ಒದಗಿಸಬೇಕು. ಈ ಯೋಜನೆಗಳಿಗೆ ಸಂಬಂಧಿಸಿದ ಅಧಿಕಾರಿಗಳು ಪ್ರಗತಿ ಮತ್ತು ಬಾಕಿ ಕಾಮಗಾರಿಗಳ ಸಮಗ್ರ ಮಾಹಿತಿಯೊಂದಿಗೆ ತಮಗೆ ವರದಿ ಸಲ್ಲಿಸಬೇಕು ಸೂಚಿಸಿದರು.
ತಹಸೀಲ್ದಾರ್ ರಾಘವೇಂದ್ರ ರಾವ್, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ರಾಮಣ್ಣ ದೊಡ್ಡಮನಿ, ವಿವಿಧ ತಾಲೂಕು ಅಧಿಕಾರಿಗಳ, ಕಂದಾಯ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಕುಡಿಯುವ ನೀರಿನ ಸಮಸ್ಯೆ ಬಗೆ ಹರಿಸಿ

ಗ್ರಾಮೀಣ ಭಾಗದ ಮೂಲಸೌಕರ್ಯಗಳ ಬಗ್ಗೆ ಮಾತನಾಡಿದ ಶಾಸಕರು, ಗ್ರಾಮೀಣ ಭಾಗದಲ್ಲಿ ಸಂಪರ್ಕ ರಸ್ತೆಗಳು ತೀರಾ ಹದಗೆಟ್ಟಿದ್ದು, ಸಾರ್ವಜನಿಕರ ಸಂಚಾರಕ್ಕೆ ತೀವ್ರ ಅಡಚಣೆಯಾಗಿದೆ. ಗ್ರಾಮೀಣ ಒಳ ಮತ್ತು ಹೊರ ವಲಯದ ರಸ್ತೆಗಳಿಗೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ತಕ್ಷಣವೇ ನಿಗಾ ವಹಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು. ಇದರೊಂದಿಗೆ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮರ್ಪಕ ಪೂರೈಕೆಯಾಗುತ್ತಿಲ್ಲ ಎಂಬ ದೂರುಗಳು ಹೆಚ್ಚಾಗುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ಆದಷ್ಟು ಬೇಗ ನೀರಿನ ಸಮಸ್ಯೆ ಸರಿಪಡಿಸಬೇಕು.