ಶಿರಹಟ್ಟಿ ಪಟ್ಟಣದ ತಾ.ಪಂ ಸಾಮರ್ಥ್ಯ ಸೌಧದಲಿ ಗುರುವಾರ ಕರೆಯಲಾದ ಪ್ರಗತಿ ಪರಿಶೀಲನಾ ಸಭೆಯಲ್ಲಿ ತಾ.ಪಂ ಆಡಳಿತಾಧಿಕಾರಿ ಎ.ಎ.ಕಂಬಾಳಿಮಠ ಮಾತನಾಡಿದರು. ತಾ.ಪಂ ಇಒ ರಾಮಪ್ಪ ದೊಡ್ಡಮನಿ, ಯೋಜನಾಧಿಕಾರಿ ಎ.ಎಚ್.ಕೊಂಡಿಕೊಪ್ಪ, ಟಿಎಚ್‌ಒ ಡಾ.ಸುಭಾಸ ದಾಯಗೊಂಡ ಇತರರಿದ್ದರು.
ಶಿರಹಟ್ಟಿ: ತಾಲೂಕಿನ ಶಾಲಾ ಕೊಠಡಿಗಳ ದುರಸ್ತಿಗೆ ಸರ್ಕಾರ 20.50 ಲಕ್ಷ ರೂ.ಅನುದಾನ ನೀಡಿದೆ. ಶಿಕ್ಷಣ (MEETING) ಇಲಾಖೆಯು ಕೂಡಲೇ ದುರಸ್ತಿಗೆ ಬಂದ ಶಾಲೆಗಳನ್ನು ಗುರುತಿಸಿ ಕ್ರಿಯಾಯೋಜನೆ ಸಲ್ಲಿಸಬೇಕು ಎಂದು ತಾ.ಪಂ ಆಡಳಿತಾಧಿಕಾರಿ ಎ.ಎ. ಕಂಬಾಳಿಮಠ ಸೂಚನೆ ನೀಡಿದರು.
ಪಟ್ಟಣದ ತಾ.ಪಂ ಸಾಮರ್ಥ್ಯ ಸೌಧದಲ್ಲಿ ಗುರುವಾರ ಕರೆಯಲಾದ ಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ‘ಎಸ್‌ಎಸ್‌ಎಲ್‌ಸಿ ಹಂತದಲ್ಲಿ ಮಾತ್ರವಲ್ಲದೆ, ವಿದ್ಯಾರ್ಥಿಗಳು 8 ಮತ್ತು 9ನೇ ತರಗತಿಯಲ್ಲಿರುವಾಗಲೇ ಅವರನ್ನು ಸ್ಪರ್ಧಾತ್ಮಕವಾಗಿ ಸಿದ್ಧಪಡಿಸಬೇಕು. ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮುಖ್ಯವಾಹಿನಿಗೆ ತರುವ ಕೆಲಸವಾಗಬೇಕು’ ಎಂದು ತಿಳಿಸಿದರು.
ಮೇ ತಿಂಗಳ ಮೊದಲ ವಾರದಲ್ಲಿ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆ ನಡೆಸಿ ಇಲಾಖೆವಾರು ಅಭಿವೃದ್ಧಿ ಕಾರ್ಯಗಳಿಗೆ ಅನುಮೋದನೆ ನೀಡಲು ನಿರ್ಧರಿಸಲಾಗಿದೆ. ಆದ್ದರಿಂದ, ಪ್ರತಿ ಇಲಾಖೆಯ ಅಧಿಕಾರಿಗಳು ಏಪ್ರಿಲ್ ಅಂತ್ಯದೊಳಗೆ ತಮ್ಮ ಇಲಾಖೆಯ ಕ್ರಿಯಾಯೋಜನೆಯನ್ನು ತಾ.ಪಂ ಕಚೇರಿಗೆ ಸಲ್ಲಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಅಂಗನವಾಡಿಗಳಿಗೆ ಶುದ್ಧ ನೀರು:
ತಾಲೂಕಿನ 92 ಸ್ವಂತ ಕಟ್ಟಡ ಹೊಂದಿರುವ ಅಂಗನವಾಡಿ ಕೇಂದ್ರಗಳಿಗೆ ಸರ್ಕಾರದಿಂದ ಪೂರೈಕೆಯಾಗಿರುವ ಶುದ್ಧ ಕುಡಿಯುವ ನೀರಿನ ಯಂತ್ರಗಳನ್ನು ತ್ವರಿತವಾಗಿ ಅಳವಡಿಸಬೇಕು. ಮಕ್ಕಳು ಕೇಂದ್ರಕ್ಕೆ ಮರಳುವ ಮೊದಲು ವಿದ್ಯುತ್ ಹಾಗೂ ಪೈಪ್‌ಲೈನ್ ವ್ಯವಸ್ಥೆ ಪರಿಶೀಲಿಸಿ ಪೂರ್ಣ ಪ್ರಮಾಣದ ವರದಿ ನೀಡಲು ಸಿಡಿಪಿಒ ಮೃತ್ಯುಂಜಯ ಅವರಿಗೆ ಸೂಚಿಸಿದರು.
ಅಭಿವೃದ್ಧಿ ಕಾರ್ಯಗಳಿಗೆ ಅಧಿಕಾರಿಗಳೇ ಖುದ್ದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು, ಸಿಬ್ಬಂದಿ ಮೇಲೆ ಜವಾಬ್ದಾರಿ ಹೊರಿಸಿ ಕೈತೊಳೆದುಕೊಳ್ಳಬಾರದು ಎಂದು ಕಂಬಾಳಿಮಠ ಎಚ್ಚರಿಸಿದರು. ಸಭೆಯಲ್ಲಿ ತಾ.ಪಂ ಇಒ ರಾಮಪ್ಪ ದೊಡ್ಡಮನಿ, ಯೋಜನಾಧಿಕಾರಿ ಎ.ಎಚ್. ಕೊಂಡಿಕೊಪ್ಪ, ಟಿಎಚ್‌ಒ ಡಾ.ಸುಭಾಸ ದಾಯಗೊಂಡ, ಅಕ್ಷರ ದಾಸೋಹ ಅಧಿಕಾರಿ ರಾಮನಗೌಡ ಸೇರಿದಂತೆ ವಿವಿಧ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಮುಂಗಾರಿನ ಉಳುಮೆಗೆ ಸಿದ್ಧತೆ
ಪೂರ್ವ ಮುಂಗಾರು ಆರಂಭವಾಗುತ್ತಿರುವುದರಿಂದ ಬಿತ್ತನೆ ಬೀಜ ಹಾಗೂ ರಸಗೊಬ್ಬರದ ಕೊರತೆಯಾಗದಂತೆ ಮುನ್ನೆಚ್ಚರಿಕೆ ವಹಿಸಲು ಕೃಷಿ ಇಲಾಖೆಗೆ ಸೂಚಿಸಿದರು. ಸಹಾಯಕ ಕೃಷಿ ನಿರ್ದೇಶಕ ಶಿವಕುಮಾರ ಕಶಪ್ಪನವರ ಪ್ರತಿಕ್ರಿಯಿಸಿ, ತಾಲೂಕಿನಲ್ಲಿ 32 ಸಾವಿರ ಹೆಕ್ಟೇರ್ ಬಿತ್ತನೆ ಗುರಿ ಇದ್ದು, 8000 ಟನ್ ಗೊಬ್ಬರದ ಅಗತ್ಯವಿದೆ. ಸದ್ಯ 2300 ಟನ್ ದಾಸ್ತಾನು ಲಭ್ಯವಿದ್ದು, ರೈತರು ಕೂಡ ಮುನ್ನೆಚ್ಚರಿಕೆಯಿಂದ ದಾಸ್ತಾನು ಮಾಡಿಕೊಳ್ಳುತ್ತಿದ್ದಾರೆ ಎಂದರು.
ರೇಷ್ಮೆ ಮಾರುಕಟ್ಟೆ ಸ್ಥಗಿತಕ್ಕೆ ಕಾರಣ ಏನು?
ತೋಟಗಾರಿಕೆಯಲ್ಲಿ ಕೇವಲ ಉಳ್ಳಾಗಡ್ಡಿ, ಮೆಣಸಿನಕಾಯಿಗೆ ಸೀಮಿತವಾಗದೆ ರೈತರು ಹಣ್ಣು, ತರಕಾರಿ ಹಾಗೂ ಹೂವು ಬೆಳೆಯುವ ಮೂಲಕ ಆರ್ಥಿಕವಾಗಿ ಸದೃಢರಾಗಲು ಜಾಗೃತಿ ಮೂಡಿಸಬೇಕು. ಹಿಂದೆ ಶಿರಹಟ್ಟಿ ರೇಷ್ಮೆ ಮಾರುಕಟ್ಟೆಗೆ ದೊಡ್ಡ ಹೆಸರಿತ್ತು. ಆದರೆ ಈಗ ಮಾರುಕಟ್ಟೆ ಸ್ಥಗಿತವಾಗಿರುವ ಬಗ್ಗೆ ರೈತರಲ್ಲಿ ಅಸಮಾಧಾನವಿದೆ. ಅಧಿಕಾರಿಗಳ ಬೇಜವಾಬ್ದಾರಿಯೇ ಅಥವಾ ಖರೀದಿದಾರರ ಒಳ ಒಪ್ಪಂದವೇ ಎಂಬ ಬಗ್ಗೆ ಪರಿಶೀಲಿಸಿ ವರದಿ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.