ಮುಂಡರಗಿ ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜ್‌ನ ಆವರಣದಲ್ಲಿರುವ ಶೌಚಗೃಹ.
ಮುಂಡರಗಿ: ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜ್‌ನಲ್ಲಿ ವಿದ್ಯಾರ್ಥಿಗಳಿಗೆ ಸಮರ್ಪಕ ಶೌಚಗೃಹದ ವ್ಯವಸ್ಥೆ ಇಲ್ಲದೆ ಮಕ್ಕಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಶೀಘ್ರ ಹೆಚ್ಚುವರಿ ಶೌಚಗೃಹ ನಿರ್ಮಿಸುವ ಅಗತ್ಯವಿದೆ.
ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜ್‌ನಲ್ಲಿ ಕಲಾ ಮತ್ತು ವಾಣಿಜ್ಯ ವಿಭಾಗ ತರಗತಿಗಳು ಒಂದು ಭಾಗದ ಕಟ್ಟಡದಲ್ಲಿದ್ದು, ಅಲ್ಲಿಂದ 200ಮೀ ದೂರದಲ್ಲಿನ ಮತ್ತೊಂದು ಕಟ್ಟಡದಲ್ಲಿ ವಿಜ್ಞಾನ ವಿಭಾಗದ ತರಗತಿಗಳನ್ನು ನಡೆಸಲಾಗುತ್ತದೆ. ಎರಡು ಕಟ್ಟಡದಲ್ಲಿ ಸದ್ಯ ಶೌಚಗೃಹ ವ್ಯವಸ್ಥೆ ಇದೆ. ಆದರೆ, ಅವುಗಳ ಸಂಖ್ಯೆ ಬೆರಳೆಣಿಕೆಯಷ್ಟು ಇರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ.
ಕಲಾ ಮತ್ತು ವಾಣಿಜ್ಯ ವಿಭಾಗದಲ್ಲಿ 820 ವಿದ್ಯಾರ್ಥಿಗಳು ಹಾಗೂ ವಿಜ್ಞಾನ ವಿಭಾಗದಲ್ಲಿ 227 ವಿದ್ಯಾರ್ಥಿಗಳು ಸೇರಿ ಕಾಲೇಜ್‌ನಲ್ಲಿ 1047 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶೌಚಗೃಹ ವ್ಯವಸ್ಥೆ ಇಲ್ಲದೆ ದಿನನಿತ್ಯ ಸಮಸ್ಯೆ ಅನುಭವಿಸುತ್ತಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಬಾಲಕಿಯರಿಗೆ ಒಂದೇ ಶೌಚಗೃಹ ಇತ್ತು. 15 ದಿನಗಳ ಹಿಂದೆ ಬಾಲಕರು ಮತ್ತು ಬಾಲಕಿಯರಿಗೆ ಹೊಸದಾಗಿ ಕಿರುದಾದ ಶೌಚಗೃಹ ನಿರ್ಮಿಸಲಾಗಿದೆ. ಆದರೆ, ಅದು ಸಾಕಾಗುವುದಿಲ್ಲ. ಹೆಚ್ಚು ಶೌಚಗೃಹಗಳನ್ನು ನಿರ್ಮಿಸಬೇಕಾದ ಅಗತ್ಯವಿದೆ.
ಸರ್ಕಾರಿ ಪದವಿಪೂರ್ವ ಕಾಲೇಜ್‌ನಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದೆ. ಅಲ್ಲಿ ಈಗಿರುವ ಶೌಚಗೃಹ ಕಡಿಮೆ ಇದ್ದು, ಮಕ್ಕಳು ತೊಂದರೆಗೊಳಗಾಗಿದ್ದಾರೆ. ಈ ಬಗ್ಗೆ ಸಂಬಂಧಿಸಿದವರು ಗಮನ ಹರಿಸುವ ಮೂಲಕ ಹೆಚ್ಚುವರಿ ಶೌಚಗೃಹ ನಿರ್ಮಿಸಿ ಸಮಸ್ಯೆಗೆ ಪರಿಹಾರ ನೀಡಬೇಕು ಎಂದು ಪಾಲಕ ದೇವಪ್ಪ ಇಟಗಿ ಒತ್ತಾಯಿಸಿದ್ದಾರೆ.
ಶೌಚಗೃಹ ಕೊರತೆ ಹಿನ್ನೆಲೆ ಹೆಚ್ಚುವರಿ ಶೌಚಗೃಹಗಳ ನಿರ್ಮಿಸಿಕೊಡುವಂತೆ ಮೇಲಧಿಕಾರಿಗಳು ಮತ್ತು ಪುರಸಭೆಗೆ ಈಗಾಗಲೇ ಪ್ರಸ್ತ್ತಾವನೆ ಸಲ್ಲಿಸಲಾಗಿದೆ. ಈಗಿರುವ ಶೌಚಗೃಹಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಲಾಗುತ್ತಿದೆ.
— ಫಕೀರಸಾಬ್ ಕಲಕೇರಿ, ಪ್ರಾಚಾರ್ಯ