ಗೋವಿನಜೋಳ ಬೆಂಬಲ ಬೆಲೆ ಖರೀದಿ ಕೇಂದ್ರ ಪ್ರಾರಂಭಿಸುವಂತೆ ಒತ್ತಾಯಿಸಿ ಲಕ್ಷ್ಮೇಶ್ವರದಲ್ಲಿ ನಡೆದಿರುವ ರೈತರ ಅಹೋರಾತ್ರಿ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಶಿರಹಟ್ಟಿ ಸಂಸ್ಥಾನಮಠದ ಜ. ಶ್ರೀ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಭೆಟಿ ನೀಡಿ ಬೆಂಬಲ ಸೂಚಿಸಿದರು.  
ಗದಗ

ಹೋರಾಟ ತೀವ್ರಗೊಳ್ಳುವ ಮೊದಲೇ ಸರ್ಕಾರ ಎಚ್ಚೆತ್ತುಕೊಳ್ಳಲಿ

ಲಕ್ಷ್ಮೇಶ್ವರ: ಸರ್ಕಾರ ರೈತರ ಬೆಂಬಲಕ್ಕೆ ಬರದಿದ್ದರೆ ಗೋವಿನಜೋಳವನ್ನು ಆಯಾ ಕ್ಷೇತ್ರದ ಶಾಸಕರು, ಜಿಲ್ಲಾಧಿಕಾರಿಗಳ ಕಚೇರಿ ಎದುರಿನ ರಸ್ತೆಗಳಲ್ಲಿ ಹಾಕಿ ವಾಹನ ಸಂಚಾರ ಬಂದ್ ಮಾಡಿದಾಗ ಮಾತ್ರ ಅಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಸರ್ಕಾರಕ್ಕೆ ಬಿಸಿ ತಟ್ಟುತ್ತದೆ ಎಂದು ಶಿರಹಟ್ಟಿ ಫಕೀರೇಶ್ವರ ಸಂಸ್ಥಾನಮಠದ ಜಗದ್ಗುರು ಫಕೀರ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.
ಗೋವಿನಜೋಳದ ಬೆಂಬಲ ಬೆಲೆ ಖರೀದಿ ಕೇಂದ್ರ ಪ್ರಾರಂಭಿಸಬೇಕೆಂದು ಲಕ್ಷ್ಮೇಶ್ವರದಲ್ಲಿ 5 ದಿನಗಳಿಂದ ನಡೆಸುತ್ತಿರುವ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಆಗಮಿಸಿ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿ ಶ್ರೀಗಳು ಮಾತನಾಡಿದರು.
ಕಬ್ಬು ಬೆಳೆಗಾರರಿಗೆ ಮನ್ನಣೆ ನೀಡಿದಂತೆ ಸರ್ಕಾರ ಗೋವಿನಜೋಳ ಖರೀದಿ ಕೇಂದ್ರವನ್ನು ಶೀಘ್ರ ಆರಂಭಿಸಬೇಕು. ರೈತರು ಶಾಂತಿಯುತವಾಗಿ ಧರಣಿ ನಡೆಸುತ್ತಿದ್ದರೂ ಸರ್ಕಾರ ಕಣ್ತೆರೆಯುತ್ತಿಲ್ಲ, ಜನರಿಗೆ ಅನ್ನ ನೀಡುವ ರೈತರನ್ನು ನಿರ್ಲಕ್ಷಿಸುವ ಯಾವುದೇ ಸರ್ಕಾರವಾಗಲಿ ಅಧಿಕಾರದಲ್ಲಿ ಉಳಿಯುವದಿಲ್ಲ ಎಂದು ಎಚ್ಚರಿಕೆ ನೀಡಿದರು.
ರೈತರ ಹೆಸರು ಹೇಳಿಕೊಂಡು ಚುನಾವಣೆ ಗೆಲ್ಲುವ ಎಲ್ಲ ರಾಜಕೀಯ ಪಕ್ಷಗಳು ಅಧಿಕಾರದ ಗದ್ದುಗೆ ಏರಿದ ನಂತರ ರೈತರ ಬಗ್ಗೆ ಕಿಂಚಿತ್ತೂ ಗಮನ ಹರಿಸುವುದಿಲ್ಲ. ರೈತರ ಹೋರಾಟಗಳು ತೀವ್ರ ಸ್ವರೂಪ ಪಡೆಯುವ ಮೊದಲೇ ಎಚ್ಚೆತ್ತುಕೊಂಡು ರೈತರ ಬೇಡಿಕೆಗಳಿಗೆ ಸ್ಪಂದಿಸಬೇಕು ಎಂದರು. 
ಆದ್ರಳ್ಳಿ ಗವಿಮಠದ ಶ್ರೀ ಕುಮಾರ ಮಹಾರಾಜರು ಮಾತನಾಡಿ, ಪ್ರತಿವರ್ಷ ಬೆಂಬಲ ಬೆಲೆ ಖರೀದಿ ಕೇಂದ್ರ ಪ್ರಾರಂಭಕ್ಕಾಗಿ ಹೋರಾಟ ಮಾಡುವುದು ಸಾಮಾನ್ಯವಾಗಿದೆ. ಈ ಸಮಸ್ಯೆ ತಪ್ಪಬೇಕು ಮತ್ತು ಶಾಶ್ವತ ಬೆಂಬಲ ಬೆಲೆ ಖರೀದಿ ಕೇಂದ್ರಗಳು ಕಾರ್ಯನಿರ್ವಹಿಸುವಂತಾಗಬೇಕು. ಸತ್ಯಾಗ್ರಹ ಸ್ಥಳದಲ್ಲಿ ಪ್ರಾಣ ಹೋದರೂ ಸರಿ ರೈತರ ಬೇಡಿಕೆ ಈಡೇರುವವರೆಗೂ ಹನಿ ನೀರೂ ಕುಡಿಯುವುದಿಲ್ಲ ಎಂದರು.
ಕುಂದಗೋಳ ಕಲ್ಯಾಣಪುರಮಠ ಬಸವಣ್ಣಜ್ಜ ಮಾತನಾಡಿ, ನ. 20ರಂದು ಕರೆ ನೀಡಿರುವ ಲಕ್ಷ್ಮೇಶ್ವರ ಬಂದ್‌ಗೆ ಪ್ರತಿಯೊಬ್ಬರೂ ಕೈ ಜೋಡಿಸಬೇಕು ಎಂದರು.
ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯ ಯುವ ಘಟಕದ ಅಧ್ಯಕ್ಷ ಮೈಸೂರಿನ ಫಯಾಜ್ ಮಾತನಾಡಿ, ರೈತರು, ಮಠಾಧೀಶರು 5 ದಿನಗಳಿಂದ ಹೋರಾಟ ಮಾಡುತ್ತಿದ್ದರೂ ಶಾಸಕರು, ಉಸ್ತುವಾರಿ ಸಚಿವರು ಬಂದು ರೈತರ ಸಮಸ್ಯೆ ಆಲಿಸದಿರುವುದು ನಾಚಿಗೇಡಿನ ಸಂಗತಿ ಎಂದರು. ಎಸ್.ಪಿ. ಬಳಿಗಾರ, ಚನ್ನಪ್ಪ ಜಗಲಿ, ಡಿ.ವೈ. ಹುನಗುಂದ, ಶರಣು ಗೋಡಿ ಮಾತನಾಡಿದರು.
ಬಂದ್‌ಗೆ ಸಂಘಟನೆಗಳ ಬೆಂಬಲ: 
ಖಾಸಗಿ ಶಾಲೆಗಳ ಆಡಳಿತ ಮಂಡಳಿ, ಸಮಗ್ರ ರೈತ ಹೋರಾಟ ಸಂಘಟನೆಗಳು, ಕನ್ನಡಪರ ಸಂಘಟನೆಗಳು, ಶ್ರೀ ರಾಮಸೇನೆ, ಬಜಾರ ವ್ಯಾಪಾರಸ್ಥರ ಸಂಘ, ಬೀದಿ ಬದಿ ವ್ಯಾಪಾರಸ್ಥರ ಸಂಘ, ವಿದ್ಯಾರ್ಥಿ ಸಂಘಟನೆಗಳು, ಶಿಗ್ಲಿ ಗ್ರಾಮಸ್ಥರು, ಗೋಸಾವಿ ಸಮಾಜ, ವಕೀಲರು ಸಂಘ, ಮೆಕಾನಿಕ್ ಸಂಘ, ಮಾಜಿ ಸೈನಿಕರ ಸಂಘ, ಔಷಧ ವ್ಯಾಪಾರಸ್ಥರ ಸಂಘ ಸೇರಿದಂತೆ ಅನೇಕರು ಧರಣಿ ಸ್ಥಳಕ್ಕೆ ಬಂದು ಬೆಂಬಲ ವ್ಯಕ್ತಪಡಿಸಿದರು. ಗುರುವಾರದ ಬಂದ್‌ಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಘೋಷಿಸಿದರು.
ತಹಸೀಲ್ದಾರ್ ರಾಘವೇಂದ್ರ ರಾವ್, ಸಿಪಿಐ ಬಿ.ವಿ. ನ್ಯಾಮಗೌಡ, ಪಿಎಸ್‌ಐ ನಾಗರಾಜ ಗಡದ, ಟಿ.ಕೆ. ರಾಠೋಡ ನೇತೃತ್ವದ ತಂಡ ಭದ್ರತೆ ಕೈಗೊಂಡಿದೆ. 
ಮಂಜುನಾಥ ಮಾಗಡಿ, ರವಿಕಾಂತ ಅಂಗಡಿ, ಪರಮೇಶ ಲಮಾಣಿ, ನಾಗರಾಜ ಚಿಂಚಲಿ, ಎಂ.ಎಸ್. ದೊಡ್ಡಗೌಡ್ರ, ಚನ್ನಪ್ಪ ಷಣ್ಮುಖಿ, ಹೊನ್ನಪ್ಪ ವಡ್ಡರ, ನೀಲಪ್ಪ ಶೆರಸೂರಿ, ಮಂಜುನಾಥ ಕೊಡಳ್ಳಿ, ಮಲ್ಲಿಕಾರ್ಜುನ ನೀರಾಲೋಟ, ಟಾಕಪ್ಪ ಸಾತಪುತೆ, ಗುರಪ್ಪ ಮುಳುಗುಂದ, ಸೋಮಣ್ಣ ಡಾಣಗಲ್, ಪ್ರಕಾಶ ಕೊಂಚಿಗೇರಿಮಠ, ಪವನ ಬಂಕಾಪುರ, ಭರತ ಬಳಿಗಾರ ಸೇರಿದಂತೆ ನೂರಾರು ರೈತರು ಇದ್ದರು.