ಶಿರಹಟ್ಟಿಯ ವರವಿ ಮಠದಲ್ಲಿ ಹಮ್ಮಿಕೊಂಡಿದ್ದ ಬಂಜಾರ ಸಮಾಜದ ಜನಜಾಗೃತಿ ಸಮಾವೇಶದಲ್ಲಿ ಶಾಸಕರಾದ ಡಾ. ಚಂದ್ರು ಲಮಾಣಿ, ಪ್ರಭು ಚವ್ಹಾಣ, ಮಾಜಿ ಸಂಸದ ಡಾ. ಉಮೇಶ ಜಾಧವ್, ಇತರರು ಪಾಲ್ಗೊಂಡಿದ್ದರು.
ಶಿರಹಟ್ಟಿ: ಒಳಮೀಸಲಾತಿ ವಿಚಾರದಲ್ಲಿ ಲಂಬಾಣಿ, ಬೋವಿ, ಕೊರಮ (TANDA) ಹಾಗೂ ಕೊರಚ ಸಮುದಾಯಗಳಿಗೆ ಮಾಡಿರುವ ಅನ್ಯಾಯ ಸರಿಪಡಿಸದಿದ್ದರೆ ರಾಜ್ಯಾದ್ಯಂತ ’ಕಾಂಗ್ರೆಸ್ ಹಠಾವೋ, ತಾಂಡಾ ಬಚಾವೋ’ ಚಳವಳಿ ನಡೆಸಬೇಕಾಗುತ್ತದೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಎಚ್ಚರಿಕೆ ನೀಡಿದರು.
ತಾಲೂಕಿನ ಪ್ರಸಿದ್ಧ ವರವಿ ಶ್ರೀ ಮೌನೇಶ್ವರ ಮಠದ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಬಂಜಾರ ಜನಜಾಗೃತಿ ಸಮಾವೇಶದಲ್ಲಿ ಅವರು ಪ್ರಧಾನ ಭಾಷಣ ಮಾಡಿದರು.
ರೋಸ್ಟರ್ ಪದ್ಧತಿ ಗಾಳಿಗೆ ತೂರಿದ ಸರ್ಕಾರ: ಸಮಾವೇಶ ಉದ್ಘಾಟಿಸಿ ಮಾತನಾಡಿದ ಡಾ. ಚಂದ್ರು, ಒಳಮೀಸಲಾತಿಯೊಳಗೆ ಮತ್ತೊಂದು ಒಳಮೀಸಲಾತಿ ತರುವ ಮೂಲಕ ಕಾಂಗ್ರೆಸ್ ಸರ್ಕಾರ ಇಡೀ ವ್ಯವಸ್ಥೆಯನ್ನು ಗೊಂದಲದ ಗೂಡಾಗಿಸಿದೆ. ರೋಸ್ಟರ್ ಪದ್ಧತಿಯಲ್ಲಿ ಏಕಗವಾಕ್ಷಿ ಪದ್ಧತಿ ತರಬೇಕೆಂಬ ನ್ಯಾಯಯುತ ಬೇಡಿಕೆಗೆ ಸರ್ಕಾರ ಸ್ಪಂದಿಸುತ್ತಿಲ್ಲ. ಸದ್ಯ ನೀಡಿರುವ ಶೇ. 4.5 ಮೀಸಲಾತಿಯಲ್ಲಿ 59 ಅಲೆಮಾರಿ ಜಾತಿಗಳು ಹೆಚ್ಚು ಮೀಸಲಾತಿ ಪಡೆದರೆ, ಇನ್ನುಳಿದ ಬಂಜಾರ, ಬೋವಿ, ಕೊರಮ, ಕೊರಚ ಸಮುದಾಯಗಳಿಗೆ ಕೇವಲ ಶೇ. 3.5ರಷ್ಟು ಮಾತ್ರ ಉಳಿಯುತ್ತದೆ. ಇದು ನಮ್ಮ ಸಮುದಾಯಕ್ಕೆ ಮಾಡುತ್ತಿರುವ ದ್ರೋಹ. ಮುಂಬರುವ ಅಧಿವೇಶನದಲ್ಲಿ ಈ ತಾರತಮ್ಯ ಸರಿಪಡಿಸದಿದ್ದರೆ ತಾಂಡಾಗಳ ರಕ್ಷಣೆಗೆ ಉಗ್ರ ಹೋರಾಟ ಅಥವಾ ಆಂದೋಲನ ನಡೆಸುವುದು ಅನಿವಾರ್ಯ ಆಗಲಿದೆ ಎಂದು ತಿಳಿಸಿದರು.
ಒಳಮೀಸಲಾತಿ ಅವೈಜ್ಞಾನಿಕ: ಔರಾದ್ ಶಾಸಕ ಪ್ರಭು ಚವ್ಹಾಣ ಮಾತನಾಡಿ, ಸರ್ಕಾರವು ಜನಸಂಖ್ಯೆ ಮತ್ತು ಸಾಮಾಜಿಕ ಸ್ಥಿತಿಗತಿಯನ್ನು ಪರಿಗಣಿಸದೆ ಅವೈಜ್ಞಾನಿಕವಾಗಿ ಒಳಮೀಸಲಾತಿ ನಿಗದಿ ಮಾಡಿದೆ. ಇದರಿಂದ ನಮ್ಮ ಸಮುದಾಯದ ಮಕ್ಕಳಿಗೆ ಶಿಕ್ಷಣ, ವಸತಿ ನಿಲಯಗಳ ಪ್ರವೇಶ ಹಾಗೂ ನೇಮಕಾತಿಯಲ್ಲಿ ಅನ್ಯಾಯವಾಗುತ್ತಿದೆ. ಸರ್ಕಾರ ತನ್ನ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಮಾಡಿರುವ ಈ ಒಳಮೀಸಲಾತಿಯನ್ನು ಮರುಪರಿಶೀಲಿಸಬೇಕು. ಇಲ್ಲವಾದಲ್ಲಿ ಸಿಎಂ ಹಾಗೂ ಸಚಿವರ ಮನೆ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.