(MATHA) ನರಗುಂದ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಶ್ರೀ ನಾಗನೂರು ಶಿವಬಸವ ಮಹಾಸ್ವಾಮಿಗಳು, ಬಾಲ್ಕಿ ಚೆನ್ನಬಸವ ಪಟ್ಟದ್ದೇವರ ಜಯಂತ್ಯುತ್ಸವ ಸಮಾರಂಭವನ್ನು ಪ್ರವಚನಕಾರ ವೀರಯ್ಯ ಶಾಸ್ತ್ರಿಗಳು ಶನಿವಾರ ಉದ್ಘಾಟಿಸಿದರು. ಪ್ರೊ.ಎಸ್.ಬಿ. ಭಜಂತ್ರಿ, ಡಾ. ಎಂ.ಪಿ. ಕುಲಕರ್ಣಿ, ಪ್ರೊ. ಬಿ.ಎಂ. ಲೆಂಕೆನ್ನವರ, ಪ್ರೊ. ಎಸ್.ವಿ. ದಂಡನಾಯ್ಕರ ಇತರರಿದ್ದರು. 
ಗದಗ

Matha: ಕರುನಾಡ ಮಠಗಳಿಂದ ಸಾಮಾಜಿಕ ಕ್ರಾಂತಿ

ಸೋಮನಾಥ ರೆಡ್ಡಿ
ನರಗುಂದ: ಕರುನಾಡಿನ ಹಲವಾರು ಮಠ (Matha) ಮಾನ್ಯಗಳು ಸರ್ವರಿಗೂ ಶಿಕ್ಷಣವನ್ನು ಧಾರೆಯೆರೆದು ಸಾಮಾಜಿಕ ಕ್ರಾಂತಿ ಮಾಡಿವೆ. ಶಿಕ್ಷಣದ ಜತೆಗೆ ಪರಭಾಷಿಕರ ಹಾವಳಿಯಲ್ಲಿದ್ದ ಗಡಿನಾಡಿನಲ್ಲಿ ಕನ್ನಡ ಶಾಲೆಗಳನ್ನು ತೆರೆಯುವುದರ ಮೂಲಕ ಕನ್ನಡ ದೀಪ ಪ್ರಜ್ವಲಿಸಿದ ಕೀರ್ತಿ ನಾಗನೂರು ಹಾಗೂ ಬಾಲ್ಕಿ ಶ್ರೀಗಳಿಗೆ ಸಲ್ಲುತ್ತದೆ ಎಂದು ಶಲವಡಿಯ ಪ್ರವಚನಕಾರ ವೀರಯ್ಯ ಶಾಸ್ತ್ರಿಗಳು ಹೇಳಿದರು.
ಪಟ್ಟಣದ ಶ್ರೀ ಸಿದ್ಧೇಶ್ವರ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಶ್ರೀ ದೊರೆಸ್ವಾಮಿ ವಿವಿಧೋದ್ದೇಶ ಟ್ರಸ್ಟ್ ಹಾಗೂ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶ್ರೀ ನಾಗನೂರು ಶಿವಬಸವ ಮಹಾಸ್ವಾಮಿಗಳು, ಬಾಲ್ಕಿ ಚೆನ್ನಬಸವ ಪಟ್ಟದ್ದೇವರ ಜಯಂತ್ಯುತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಸ್ವಾತಂತ್ರ್ಯ ಹಾಗೂ ಕರ್ನಾಟಕದ ಏಕೀಕರಣ ಹೋರಾಟಕ್ಕೆ ಬೆಳಗಾವಿಯ ನಾಗನೂರು ರುದ್ರಾಕ್ಷಿಮಠ ಮತ್ತು ಬೀದರ್‌ನ ಬಾಲ್ಕಿ ಮಠಗಳ ಕೊಡುಗೆ ಅಪಾರ. ಸಾವಿರಾರು ವಿದ್ಯಾರ್ಥಿಗಳಿಗೆ ಅನ್ನ, ಅಕ್ಷರ, ಅರಿವು ಕೊಟ್ಟು ತ್ರಿವಿಧ ದಾಸೋಹದ ಮೂಲಕ ನಿರಂತರವಾಗಿ ಹಲವಾರು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿವೆ. ಮಠಗಳು ಸಂಸ್ಕಾರ ಸಂಸ್ಕೃತಿಯ ಕೊಂಡಿಯಂತೆ ಎಲ್ಲ ಸಮುದಾಯಗಳನ್ನು ಸನ್ಮಾರ್ಗದತ್ತ ಕೊಂಡ್ಯೊಯ್ಯುವುದರ ಜತೆಗೆ ಸದ್ಭಾವ ಸಮಾಜವನ್ನು ನಿರ್ಮಿಸುತ್ತಿರುವುದು ಶ್ಲಾಘನೀಯ’ ಎಂದು ತಿಳಿಸಿದರು.
ಪ್ರಾಚಾರ್ಯ ಪ್ರೊ. ಸಿ.ಎಸ್. ಸುಳ್ಳದ ಮಾತನಾಡಿ, ಬಾಲ್ಕಿ ಹಾಗೂ ನಾಗನೂರು ಮಠದ ಉಭಯ ಶ್ರೀಗಳು ಸಂದಿಗ್ಧ ಪರಿಸ್ಥಿತಿಗೆ ಸಿಲುಕಿದ್ದ ಕನ್ನಡ ಭಾಷೆಗೆ ಕುಸುಮವನ್ನು ಕೊಟ್ಟು ಅಖಂಡ ಕರ್ನಾಟಕ ನಿರ್ಮಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕರ್ನಾಟಕ ಏಕೀಕರಣ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದು ಫಜಲ್ ಅಲಿ ಆಯೋಗ ಹಾಗೂ ಮಹಾಜನ್ ಆಯೋಗಕ್ಕೆ ನೇರ ವರದಿಯನ್ನು ನೀಡಿ ಬೆಳಗಾವಿ ನಮ್ಮದೆ ಎಂದು ನಾಗನೂರು ರುದ್ರಾಕ್ಷಿಮಠದ ಶಿವಬಸವ ಶ್ರೀಗಳು ಹೇಳಿದ್ದರು. ಅಲ್ಲದೆ, ಕರ್ನಾಟಕದ ಮುಕುಟದಂತಿರುವ ಬೀದರ್ ಕೂಡ ಕರ್ನಾಟಕದಲ್ಲಿ ಉಳಿಸಿರುವ ಕೀರ್ತಿ ಬಾಲ್ಕಿಯ ಚೆನ್ನಬಸವ ಶ್ರೀ ಗಳಿಗೆ ಸಲ್ಲುತ್ತದೆ ಎಂದರು. ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ನಿರ್ದೇಶಕ ಪ್ರೊ. ಆರ್.ಕೆ. ಐನಾಪೂರ ಪ್ರಾಸ್ತಾವಿಕವಾಗಿ ಮಾತನಾಡಿದರು.
ವಿಶ್ರಾಂತ ಉಪನ್ಯಾಸಕ ಪ್ರೊ.ಎಸ್.ಬಿ. ಭಜಂತ್ರಿ, ಹಿರಿಯ ಉಪನ್ಯಾಸಕ ಡಾ.ಎಂ.ಪಿ. ಕುಲಕರ್ಣಿ, ಪ್ರೊ. ಬಿ.ಎಂ. ಲೆಂಕೆನ್ನವರ, ಪ್ರೊ. ಎಸ್.ವಿ.ದಂಡನಾಯ್ಕರ, ಮಂಜುನಾಥ ಘಾಳಿ, ಮಹಾಂತೇಶ ಹಿರೇಮಠ ಉಪಸ್ಥಿತರಿದ್ದರು. ಪ್ರೊ.ಎಸ್.ಎಸ್. ಪೂಜಾರ ಕಾರ್ಯಕ್ರಮ ನಿರ್ವಹಿಸಿದರು.
"

ಕರುನಾಡಿನಲ್ಲಿ ಮೊದಲಬಾರಿಗೆ ಸರ್ವರಿಗೂ ಅನ್ನ-ಅಕ್ಷರ, ಆಶ್ರಯವನ್ನು ನೀಡಿದ್ದು ಲಿಂಗಾಯತ ಮಠ ಮಾನ್ಯಗಳು. ಅವುಗಳು ನಡೆಸಿಕೊಂಡು ಬರುತ್ತಿರುವ ದಾಸೋಹದ ಪರಿಕಲ್ಪನೆಯೇ ಇಂದಿನ ಅಕ್ಷರ ದಾಸೋಹಕ್ಕೆ ಸ್ಫೂರ್ತಿಯಾಗಿದೆ.