ಶಿರಹಟ್ಟಿ ತಾಪಂನಲ್ಲಿ ಏರ್ಪಡಿಸಿದ್ದ ತಾಲೂಕು ಮಟ್ಟದ ಟಾಸ್ಕ್‌ಫೋರ್ಸ್ ಸಮಿತಿ ಸಭೆಯಲ್ಲಿ ಶಾಸಕ ಡಾ. ಚಂದ್ರು ಲಮಾಣಿ ಮಾತನಾಡಿದರು. ತಹಸೀಲ್ದಾರ್ ಕೆ. ರಾಘವೇಂದ್ರ ರಾವ್, ಧನಂಜಯ ಎಂ., ಯರ‌್ರಿಸ್ವಾಮಿ ಪಿ.ಎಸ್., ಇತರರಿದ್ದರು.
- ಶಾಸಕ ಡಾ. ಚಂದ್ರು ಲಮಾಣಿ ಅಧಿಕಾರಿಗಳಿಗೆ ತಾಕೀತು
- ತಾಲೂಕು ಮಟ್ಟದ ಟಾಸ್ಕ್‌ಫೋರ್ಸ್ ಸಮಿತಿ ಸಭೆ
ಶಿರಹಟ್ಟಿ: ದಿನದಿಂದ ದಿನಕ್ಕೆ ತಾಪಮಾನ ಏರಿಕೆಯಾಗುತ್ತಿದ್ದು, ಗ್ರಾಮೀಣ ಭಾಗದ ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಮುಂಜಾಗ್ರತೆ ವಹಿಸಬೇಕು. ಸದ್ಯ ಗ್ರಾಮ ಪಂಚಾಯಿತಿಗಳಲ್ಲಿ ಆಡಳಿತ ಮಂಡಳಿ ಇಲ್ಲದ ಕಾರಣ ಪಿಡಿಒ ಹಾಗೂ ಆಡಳಿತಾಧಿಕಾರಿಗಳು ಪರಸ್ಪರ ಸಮನ್ವಯದಿಂದ ಕೆಲಸ ಮಾಡಬೇಕು ಎಂದು ಶಾಸಕ ಡಾ. ಚಂದ್ರು ಲಮಾಣಿ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಇಲ್ಲಿನ ತಾಪಂ ಸಾಮರ್ಥ್ಯ ಸೌಧದಲ್ಲಿ ಮಂಗಳವಾರ ಏರ್ಪಡಿಸಿದ್ದ ಶಿರಹಟ್ಟಿ-ಲಕ್ಷ್ಮೇಶ್ವರ-ಮುಂಡರಗಿ ತಾಲೂಕು ಮಟ್ಟದ ಟಾಸ್ಕ್‌ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಮನ್ವಯದ ಕೊರತೆಗೆ ಕಿಡಿ: ಗ್ರಾಪಂಗಳಿಗೆ ನೇಮಕವಾಗಿರುವ ಆಡಳಿತಾಧಿಕಾರಿಗಳು ಪಂಚಾಯಿತಿಗಳಿಗೆ ಭೇಟಿ ನೀಡುತ್ತಿಲ್ಲ ಎಂಬ ದೂರುಗಳು ಕೇಳಿಬರುತ್ತಿವೆ. ಆಡಳಿತಾಧಿಕಾರಿಗಳು ಕಚೇರಿಗೆ ತೆರಳಿ ಸಮಸ್ಯೆ ಆಲಿಸದಿದ್ದರೆ ಪಿಡಿಒಗಳು ಹೇಗೆ ಕೆಲಸ ಮಾಡಲು ಸಾಧ್ಯ? ಇನ್ನು ಮುಂದೆ ಕಡ್ಡಾಯವಾಗಿ ಹಳ್ಳಿಗಳಿಗೆ ಭೇಟಿ ನೀಡಿ, ವಾಸ್ತವ ಸ್ಥಿತಿಯ ವರದಿಯನ್ನು ತಾಪಂ ಇಒ ಅವರಿಗೆ ನಿತ್ಯ ಜಿಪಿಎಸ್ ಫೋಟೋ ತೆಗೆದು ಕಳುಹಿಸಬೇಕು ಎಂದು ನಿರ್ದೇಶಿಸಿದರು.
ಅಧಿಕಾರಿಗಳ ವಿರುದ್ಧ ಗರಂ: ಸಭೆಯಲ್ಲಿದ್ದ ಬಹುತೇಕ ಪಿಡಿಒಗಳು, ಡಿಬಿಒಟಿ ಯೋಜನೆಯಡಿ ಎಲ್ ಆ್ಯಂಡ್ ಟಿ ಕಂಪನಿಯವರು ಬೇಡಿಕೆಗೆ ತಕ್ಕಂತೆ ನೀರು ಪೂರೈಸುತ್ತಿಲ್ಲ ಎಂದು ದೂರಿದರು. ಈ ವಿಷಯವಾಗಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಶಾಸಕರು, ನೀರು ಸರಬರಾಜು ಮಾಡದಿದ್ದರೆ ಬಿಲ್ ಹೇಗೆ ಪಾವತಿಸುತ್ತೀರಿ? ಜನರ ಜೀವನದ ಜತೆ ಆಟವಾಡಬೇಡಿ ಎಂದು ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು. ಯಳವತ್ತಿ, ಯತ್ನಳ್ಳಿ, ಮಾಡಳ್ಳಿ, ರಣತೂರ, ಜಲ್ಲಿಗೇರಿ ಸೇರಿದಂತೆ ಅನೇಕ ಕಡೆಗಳಲ್ಲಿ ನೀರಿನ ತೊಂದರೆ ಇದೆ. ಎರಡ್ಮೂರು ದಿನಗಳಲ್ಲಿ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸುವಂತೆ ಕಂಪನಿ ಸಿಬ್ಬಂದಿಗೆ ಸೂಚಿಸಿದರು.
ಜೆಜೆಎಂ ಕಾಮಗಾರಿ ತನಿಖೆಗೆ ಆದೇಶ
ಜಿಲ್ಲಾ ಮಟ್ಟದ ಸಭೆಗಳಲ್ಲಿ ಜೆಜೆಎಂ (ಜಲ ಜೀವನ್ ಮಿಷನ್) ಕಾಮಗಾರಿ ಶೇ. 97ರಷ್ಟು ಪ್ರಗತಿಯಾಗಿದೆ ಎಂದು ಸುಳ್ಳು ವರದಿ ನೀಡುತ್ತೀರಿ. ಆದರೆ, ವಾಸ್ತವದಲ್ಲಿ ಅನೇಕ ಕಡೆ ಹನಿ ನೀರು ಬರುತ್ತಿಲ್ಲ. ರಣತೂರ ಗ್ರಾಮದಲ್ಲಿ ಕಾಮಗಾರಿ ಅಪೂರ್ಣವಾಗಿದ್ದರೂ ಹ್ಯಾಂಡ್ ಓವರ್ ಮಾಡಿಕೊಂಡಿರುವುದು ಸರಿಯಲ್ಲ. ಈ ಬಗ್ಗೆ ಕೂಡಲೇ ತನಿಖೆ ನಡೆಸಿ ವರದಿ ನೀಡಿ ಎಂದು ತಾಪಂ ಇಒ ಅವರಿಗೆ ಸೂಚಿಸಿದರು. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯು ಅಧಿಕಾರಿಗಳ ಬೇಜವಾಬ್ದಾರಿಯಿಂದ ವಿಫಲವಾಗುತ್ತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಶಿರಹಟ್ಟಿ ತಹಸೀಲ್ದಾರ್ ಕೆ. ರಾಘವೇಂದ್ರ ರಾವ್, ಧನಂಜಯ ಎಂ., ಯರ‌್ರಿಸ್ವಾಮಿ ಪಿ.ಎಸ್., ತಾಪಂ ಇಒಗಳಾದ ಆರ್.ವಿ. ದೊಡ್ಡಮನಿ, ಕೃಷ್ಣಪ್ಪ ಧರ್ಮರ ಹಾಗೂ ವಿವಿಧ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.