ಶಿರಹಟ್ಟಿಯಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆಯನ್ನು ಶ್ರೀ ಫಕೀರಸಿದ್ಧರಾಮ ಸ್ವಾಮೀಜಿ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸುಜಾತಾ ದೊಡ್ಡಮನಿ ಉದ್ಘಾಟಿಸಿದರು. ರಾಜು ಹೆಬ್ಬಳ್ಳಿ, ಶರಣು ದೊಡ್ಡೂರ, ಬಿ.ವಿ. ನ್ಯಾಮಗೌಡ, ಚಂದ್ರು ಕುಸ್ಪಾಪೂರ, ಇತರರಿದ್ದರು.
- ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸುಜಾತಾ ದೊಡ್ಡಮನಿ ಅನಿಸಿಕೆ
- ಪತ್ರಿಕಾ ದಿನಾಚರಣೆ ಉದ್ಘಾಟನೆ
ಶಿರಹಟ್ಟಿ: ಸತ್ಯಾನ್ವೇಷಣೆಯೇ ಪತ್ರಿಕೋದ್ಯಮದ ಪರಮಧರ್ಮ. ಸಮಾಜದ ಕುರಿತು ನಿಷ್ಪಕ್ಷಪಾತ ಕಾಳಜಿ ವಹಿಸಿ, ಆಡಳಿತಾರೂಢರ ಕರ್ತವ್ಯಲೋಪಗಳನ್ನು ಎಚ್ಚರಿಸುವ ಪತ್ರಿಕೆಗಳು ಸಮಾಜದ ನಿಜವಾದ ರಕ್ಷಕರು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸುಜಾತಾ ದೊಡ್ಡಮನಿ ಹೇಳಿದರು.
ಸ್ಥಳೀಯ ಡಿ. ದೇವರಾಜ ಅರಸು ಸಭಾಂಗಣದಲ್ಲಿ ಶಿರಹಟ್ಟಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಪತ್ರಕರ್ತರು ಆಸೆ, ಆಮಿಷಗಳಿಗೆ ಬಲಿಯಾಗದೆ, ನಿರ್ಭೀತ ಮನೋಭಾವದಿಂದ ವರದಿ ಪ್ರಕಟಿಸಿದಾಗ ಮಾತ್ರ ವೃತ್ತಿಗೆ ನೈಜ ಗೌರವ ಲಭಿಸುತ್ತದೆ ಎಂದ ಅವರು, ಪಟ್ಟಣದಲ್ಲಿ ಪತ್ರಿಕಾ ಭವನ ನಿರ್ಮಾಣ ಸಂಕಲ್ಪಕ್ಕೆ ಪೂರ್ಣಪ್ರಮಾಣದ ನೆರವು ನೀಡುವುದಾಗಿ ಘೋಷಿಸಿದರು.
ಪತ್ರಕರ್ತ, ವಕೀಲ ರವಿಕಾಂತ ಅಂಗಡಿ ಮಾತನಾಡಿ, ದೈನಂದಿನ ಜೀವನದಲ್ಲಿ ಭದ್ರತೆಯಿಲ್ಲದಿದ್ದರೂ, ಸತ್ಯಶೋಧನೆಯಲ್ಲಿ ನಿರತರಾಗಿರುವ ಪತ್ರಕರ್ತರ ಶ್ರಮ ಪ್ರಶಂಸನೀಯ. ಸಾರ್ವಜನಿಕರು ಪತ್ರಿಕೆಗಳನ್ನು ಕೊಂಡು ಓದಬೇಕು. ಇದರಿಂದ ಪತ್ರಿಕಾ ರಂಗ ಅಭಿವೃದ್ಧಿಯಾಗುತ್ತದೆ. ಸಂಘಕ್ಕೆ ನಿವೇಶನ ದೊರೆತಲ್ಲಿ ನಾನು ಕೂಡ ಆರ್ಥಿಕ ನೆರವು ನೀಡುತ್ತೇನೆ ಎಂದರು.
ಶಿರಹಟ್ಟಿ ಸಂಸ್ಥಾನಮಠದ ಪೀಠಾಧ್ಯಕ್ಷರಾದ ಶ್ರೀ ಫಕೀರಸಿದ್ಧರಾಮ ಸ್ವಾಮೀಜಿ, ಪತ್ರಕರ್ತರ ಕರ್ತವ್ಯನಿಷ್ಠೆಯನ್ನು ಶ್ಲಾಘಿಸಿ, ಶುಭಾಶೀರ್ವಾದ ಮಾಡಿದರು. ಸಂಘದ ಅಧ್ಯಕ್ಷ ಮಹಾದೇವಪ್ಪ ಸ್ವಾಮಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇದೇ ವೇಳೆ ಪತ್ರಿಕೋದ್ಯಮದಲ್ಲಿ ಗಣನೀಯ ಸಾಧನೆಗೈದ ಮಂಜುನಾಥ ಅರೆಪಲ್ಲಿ ಹಾಗೂ*ಅಷರ್ದಲಿ ಖಾಜಿ ಅವರಿಗೆ ‘ವಾರ್ಷಿಕ ಪ್ರಶಸ್ತಿ’ ಪ್ರದಾನ ಮಾಡಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಘದ ಜಿಲ್ಲಾಧ್ಯಕ್ಷ ರಾಜು ಹೆಬ್ಬಳ್ಳಿ, ಪ್ರಧಾನ ಕಾರ್ಯದರ್ಶಿ ಶರಣು ದೊಡ್ಡೂರ, ಸಿಪಿಐ ಬಿ.ವಿ. ನ್ಯಾಮಗೌಡ, ಚಂದ್ರು ಕುಸ್ಪಾಪೂರ, ಜಿ.ಬಿ. ಹೆಸರೂರ, ಸೇರಿದಂತೆ ಹಿರಿಯ ಪತ್ರಕರ್ತರು ಹಾಗೂ ಗಣ್ಯರು ಉಪಸ್ಥಿತರಿದ್ದರು.