ಶಿರಹಟ್ಟಿ ತಾಲೂಕಿನ ಮಾಗಡಿ ಗ್ರಾಮದಲ್ಲಿ ಏರ್ಪಡಿಸಿದ್ದ ಧಾರವಾಡದ ಕೃಷಿ ವಿವಿ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳ ಕೃಷಿ ಕಾರ್ಯಾನುಭವ ಶಿಬಿರದಲ್ಲಿ ಕೃಷಿ ತಜ್ಞ, ಪ್ರಗತಿಪರ ಕೃಷಿಕ ಮಲ್ಲೇಶಪ್ಪ ಬಿಸಿರೊಟ್ಟಿ ಮಾತನಾಡಿದರು. ವಿ.ಪಿ. ಪಾಟೀಲ, ಡಾ. ಶಿವಾನಂದ ಕಮ್ಮಾರ, ಮಾಗಡಿ ಗ್ರಾಪಂ ಅಧ್ಯಕ್ಷ ವೀರಯ್ಯ ಪ್ರಭಯ್ಯ ಮಠಪತಿ, ಶೇಖರಪ್ಪ, ಡಾ. ಸಿ.ಎಂ. ರಫಿ, ಇತರರಿದ್ದರು.
- ನೈಸರ್ಗಿಕ ಕೃಷಿ ತಜ್ಞ ಮಲ್ಲೇಶಪ್ಪ ಬಿಸಿರೊಟ್ಟಿ ಅನಿಸಿಕೆ
- ಒಕ್ಕಲುತನ ಕಾರ್ಯಾನುಭವ ಶಿಬಿರ ಸಮಾರೋಪ
ಶಿರಹಟ್ಟಿ: ದೇಶದ ಕೃಷಿ ಪದ್ಧತಿಯಲ್ಲಿ ಹಸುವಿನ ಸೆಗಣಿ ಬಳಕೆ ಅತ್ಯಂತ ದೊಡ್ಡ ಸಂಪತ್ತಾಗಿದೆ ಎಂದು ನೈಸರ್ಗಿಕ ಕೃಷಿ ತಜ್ಞ ಮಲ್ಲೇಶಪ್ಪ ಬಿಸಿರೊಟ್ಟಿ ಹೇಳಿದರು. ತಾಲೂಕಿನ ಮಾಗಡಿ ಗ್ರಾಮದಲ್ಲಿ ಏರ್ಪಡಿಸಿದ್ದ ಧಾರವಾಡದ ಕೃಷಿ ವಿಶ್ವವಿದ್ಯಾಲಯ ಕೃಷಿ ಮಹಾವಿದ್ಯಾಲಯದ ಅಂತಿಮ ವರ್ಷದ ಕೃಷಿ ವಿದ್ಯಾರ್ಥಿಗಳ ಎರಡು ತಿಂಗಳ ಅವಧಿಯ ಕೃಷಿ ಕಾರ್ಯಾನುಭವ ಶಿಬಿರದಲ್ಲಿ ಅವರು ಮಾತನಾಡಿದರು.
ನಾನು ಕಳೆದ 20 ವರ್ಷಗಳಿಂದ ಹಸುವಿನ ಸೆಗಣಿ ಗೊಬ್ಬರವನ್ನು ಬಳಸುತ್ತಿದ್ದು, ಉತ್ತಮ ಇಳುವರಿ ಪಡೆಯುತ್ತಿದ್ದೇನೆ. ಸೆಗಣಿ ಗೊಬ್ಬರ, ಘನ ಜೀವಾಮೃತ ಬಳಕೆಯಿಂದ ಭೂಮಿಯ ಫಲವತ್ತತೆ ವೃದ್ಧಿಸುತ್ತದೆ. ಕಡಿಮೆ ಮಳೆಯಾದರೆ ಭೂಮಿಯಲ್ಲಿ ತೇವಾಂಶ ಕಾಪಾಡುತ್ತದೆ. ಹೆಚ್ಚು ಮಳೆಯಾದರೆ ಭೂಮಿಯಲ್ಲಿ ನೀರನ್ನು 6 ಅಡಿ ಇಂಗಿಸಿಕೊಂಡು ಬೆಳೆಗೆ ಎಷ್ಟು ತೇವಾಂಶ ಬೇಕೋ ಅಷ್ಟನ್ನು ಮಾತ್ರ ನೀಡುತ್ತದೆ ಎಂದರು.
ಅಲ್ಲದೆ, ಬೆಳೆಗಳಿಗೆ ಯಾವುದೇ ಗೊಬ್ಬರ ಮತ್ತು ಕೀಟನಾಶಕ ಬಳಸುತ್ತಿಲ್ಲ. ರಾಸಾಯನಿಕ ಮುಕ್ತ ಆಹಾರ ಪದಾರ್ಥ ತಯಾರಿಸುವ ಮೂಲಕ ಜನರಿಗೆ ವಿಷಮುಕ್ತ ಧವಸಧಾನ್ಯಗಳನ್ನು ಬೆಳೆದು ಕೊಡುತ್ತಿರುವ ತೃಪ್ತ ಭಾವವಿದೆ. ಕೃಷಿ ಚಟುವಟಿಕೆಗೆ ಅತಿ ಕಡಿಮೆ ಖರ್ಚು ಮಾಡುತ್ತಿದ್ದೇನೆ ಎಂದರು.
ಬೆಳವಟಗಿ ಕೃಷಿ ಸಂಶೋಧನಾ ಕೇಂದ್ರದ ಕೀಟಶಾಸ್ತ್ರಜ್ಞ ಡಾ. ಸಿ.ಎಂ. ರಫಿ ಮಾತನಾಡಿ, ಶಿರಹಟ್ಟಿ ತಾಲೂಕಿನ ಪ್ರಮುಖ ಬೆಳೆಗಳು ಹಾಗೂ ಅವುಗಳಲ್ಲಿ ಕಂಡುಬರುವ ಪ್ರಮುಖ ಕೀಟಗಳ ಕುರಿತು ರೈತರಿಗೆ ಉಪಯುಕ್ತ ಮಾಹಿತಿ ನೀಡಿದರು. ಶೇಂಗಾ ಬೆಳೆಯಲ್ಲಿ ಕಂಡುಬರುವ ಸುರುಳಿ ಪೂಚಿ, ಮೆಕ್ಕೆಜೋಳದಲ್ಲಿ ಕಂಡುಬರುವ ಲದ್ದಿ ಹುಳು, ಶೇಂಗಾದಲ್ಲಿ ಕಂಡುಬರುವ ಗೊಣ್ಣೆ ಹುಳು ಸೇರಿದಂತೆ ವಿವಿಧ ಕೀಟಗಳ ಹಾನಿ, ಗುರುತಿಸುವಿಕೆ ಹಾಗೂ ಸಮಗ್ರ ಕೀಟ ನಿರ್ವಹಣಾ ಕ್ರಮಗಳ ಕುರಿತು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ. ಪಿ.ವಿ. ಪಾಟೀಲ ಮಾತನಾಡಿ, ರೈತ ಮತ್ತು ಕೃಷಿ ವಿದ್ಯಾರ್ಥಿಗಳ ನಡುವಿನ ಜ್ಞಾನ ವಿನಿಮಯ ಕೃಷಿ ಅಭಿವೃದ್ಧಿಗೆ ಬಹಳ ಮುಖ್ಯ. ರೈತರ ಅನುಭವ ಮತ್ತು ವಿದ್ಯಾರ್ಥಿಗಳ ವೈಜ್ಞಾನಿಕ ಜ್ಞಾನ ಒಟ್ಟಾಗಿ ಬಂದಾಗ ಕೃಷಿಯಲ್ಲಿ ಉತ್ತಮ ಬದಲಾವಣೆ ತರಲು ಸಾಧ್ಯ ಎಂದರು.
ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ಸಂಯೋಜಕ ಡಾ. ಶಿವಾನಂದ ಕಮ್ಮಾರ ಮಾತನಾಡಿ, ವಿದ್ಯಾರ್ಥಿಗಳು ಎರಡು ತಿಂಗಳ ಅವಧಿಯಲ್ಲಿ ರೈತರೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಂಡು ವಿವಿಧ ಕೃಷಿ ತಂತ್ರಜ್ಞಾನಗಳನ್ನು ತಲುಪಿಸಿದರು ಎಂದರು.
ಎರಡು ತಿಂಗಳ ಕಾಲ ರೈತರ ಹೊಲಗಳಿಗೆ ನಿಯಮಿತವಾಗಿ ಭೇಟಿ ನೀಡಿ ಬೆಳೆಗಳ ಬೆಳವಣಿಗೆ, ಕೀಟ ಮತ್ತು ರೋಗಗಳ ಹಾವಳಿ, ಕಳೆ ನಿರ್ವಹಣೆ, ನೀರಾವರಿ, ಮಣ್ಣಿನ ಫಲವತ್ತತೆ ಹಾಗೂ ಬೆಳೆ ಉತ್ಪಾದನೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಗುರುತಿಸಿ, ರೈತರಿಗೆ ಸೂಕ್ತ ಪರಿಹಾರ ಕ್ರಮ ಸೂಚಿಸಿರುವುದಾಗಿ ವಿದ್ಯಾರ್ಥಿಗಳು ಮಾಹಿತಿ ಹಂಚಿಕೊಂಡರು.
ಮಾಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ವೀರಯ್ಯ ಪ್ರಭಯ್ಯ ಮಠಪತಿ, ರೈತ ಸಂಘದ ಮುಖಂಡ ಶೇಖರಪ್ಪ, ಕೃಷಿ ಸಖಿ
ಗೀತಾ ಹೂಗಾರ, ಕೃಷಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ, ಶಿಬಿರದ ಸಂಯೋಜಕ ಡಾ. ಶಿವಾನಂದ ಕಮ್ಮಾರ, ಡಾ. ಬಸವರಾಜ ಗಾಳಿ ಇತರರು ಇದ್ದರು.