ನರಗುಂದ ಸಮೃದ್ಧಿ ಭವನದಲ್ಲಿ ಹಮ್ಮಿಕೊಂಡಿದ್ದ (SEVE) ಶೌರ್ಯ ವಿಪತ್ತು ನಿರ್ವಹಣೆ ಸ್ವಯಂ ಸೇವಕರ ಸಭೆಯನ್ನು ವಿವೇಕ ಪಾಯಸ್ ಶನಿವಾರ ಉದ್ಘಾಟಿಸಿದರು. ನಾಗೇಶ ವೈ, ಮಾಲತಿ ದಿನೇಶ, ಕೇಶವ ದೇವಾಂಗ್, ಇತರರಿದ್ದರು. 
ಗದಗ

SEVE: ಶೌರ್ಯ ವಿಪತ್ತು ನಿರ್ವಹಣಾ ಸಮಿತಿಯಿಂದ ವಿಶಿಷ್ಟ ಸೇವೆ

ನರಗುಂದ: ಸಮಾಜದಲ್ಲಿ (SEVE) ಯಾವುದೇ ರೀತಿಯ ಪ್ರವಾಹ, ಅಗ್ನಿ, ಅಪಘಾತ, ಪ್ರಾಕೃತಿಕ ವಿಕೋಪಗಳು ಸಂಭವಿಸಿದರೆ ಶೌರ್ಯ ವಿಪತ್ತು ನಿರ್ವಹಣಾ ಸೇವಾ ಸಮಿತಿ ಸದಸ್ಯರು ತಕ್ಷಣವೇ ನೆರವಿಗೆ ಧಾವಿಸುವ ಮೂಲಕ ಜನ-ಜಾನುವಾರುಗಳ ರಕ್ಷಣೆಗೆ ಮುಂದಾಗಬೇಕು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜನಜಾಗೃತಿ ವೇದಿಕೆ ಬೆಳ್ತಂಗಡಿ ಪ್ರಾದೇಶಿಕ ನಿರ್ದೇಶಕ ವಿವೇಕ ಪಾಯಸ್ ಹೇಳಿದರು.
ಪಟ್ಟಣದ ಸಮೃದ್ಧಿ ಭವನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಶನಿವಾರ ಹಮ್ಮಿಕೊಂಡಿದ್ದ ನರಗುಂದ, ರೋಣ, ನವಲಗುಂದ ತಾಲೂಕಿನ ಶೌರ್ಯ ವಿಪತ್ತು ನಿರ್ವಹಣಾ ಸ್ವಯಂ ಸೇವಕರ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.
ಉತ್ತರ ಕರ್ನಾಟಕದಲ್ಲಿ ಧಾರಾಕಾರ ಮಳೆ ಸುರಿದರೆ ಮಲಪ್ರಭಾ, ಬೆಣ್ಣಿಹಳ್ಳ, ತುಪ್ಪರಿ ಹಳ್ಳಗಳು ಉಕ್ಕಿ ಹರಿಯುತ್ತವೆ. ಈ ವೇಳೆ ಸ್ಥಳೀಯವಾಗಿ ಸೇವಾ ಮನೋಭಾವನೆ ಹೊಂದಿರುವ ಯುವಕ, ಯುವತಿಯರ ತಂಡ ಜನ, ಜಾನುವಾರುಗಳ ಸಂರಕ್ಷಣೆಗೆ ಶ್ರಮಿಸಬೇಕೆಂಬ ಸದುದ್ದೇಶದಿಂದ ಡಾ. ವೀರೇಂದ್ರ ಹೆಗ್ಗಡೆ, ಹೇಮಾವತಿ ಹೆಗ್ಗಡೆ ಅವರು ಶೌರ್ಯ ವಿಪತ್ತು ನಿರ್ವಹಣಾ ಘಟಕ ಸ್ಥಾಪಿಸಿದ್ದಾರೆ. ರಾಜ್ಯದ 91 ತಾಲೂಕುಗಳಲ್ಲಿ 490 ತಂಡದ 10 ಸಾವಿರಕ್ಕೂ ಅಧಿಕ ವಿಪತ್ತು ನಿರ್ವಹಣೆ ತಂಡದ ಸದಸ್ಯರು ಯೋಧರಂತೆ ನಿರಂತರ ಸೇವಾ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರಸಕ್ತ ವರ್ಷ ರಾಜ್ಯದಲ್ಲಿ ಸಂಭವಿಸಿದ ವಿವಿಧ ದುರ್ಘಟನೆಗಳಲ್ಲಿ 82 ಜನರನ್ನು ರಕ್ಷಿಸಲಾಗಿದೆ ಎಂದರು.
ನಾಗೇಶ ವೈ, ಕೇಶವ ದೇವಾಂಗ, ಮಾಲತಿ ದಿನೇಶ ಮಾತನಾಡಿದರು. ರಾಜೇಸಾಬ ತಹಸೀಲ್ದಾರ, ಯಮನೂರಪ್ಪ, ಆನಂದ, ಮೌನೇಶ, ಬ್ರಹ್ಮಾನಂದ, ಸಚೀನ ಇತರರಿದ್ದರು.