ಸೇವಾ ಸಿಂಧು ಪೋರ್ಟಲ್‌ನಲ್ಲಿ ಬಸ್ ಪಾಸ್‌ಗೆ ಅರ್ಜಿ ಸಲ್ಲಿಸಲು ಸಾಧ್ಯವಾಗದೇ ಇರುವುದು.
- ಶಾಲಾ ಕಾಲೇಜು ಪ್ರಾರಂಭವಾಗಿ 15 ದಿನ
- ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳು ಹರಸಾಹಸ
- ಸರ್ಕಾರದ ಸೌಲಭ್ಯ ಘೋಷಣೆಗಷ್ಟೇ ಸೀಮಿತ!
ಪ್ರಭುಸ್ವಾಮಿ ಅರವಟಗಿಮಠ ನರೇಗಲ್ಲ
ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಮತ್ತು ಪದವಿ ಪೂರ್ವ ಕಾಲೇಜುಗಳು ಪ್ರಾರಂಭವಾಗಿ 15 ದಿನಗಳು ಕಳೆಯುತ್ತ ಬಂದರೂ ವಿದ್ಯಾರ್ಥಿಗಳಿಗೆ ಬಸ್ ಪಾಸ್ (BUS PASS) ಪಡೆಯಲು ಸಾಧ್ಯವಾಗುತ್ತಿಲ್ಲ. ಪರಿಣಾಮ ನಿತ್ಯವೂ ದುಡ್ಡು ಕೊಟ್ಟು ಪ್ರಯಾಣಿಸುವ ಅನಿವಾರ್ಯತೆ ಎದುರಾಗಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವಿದ್ಯಾರ್ಥಿ ಬಸ್ ಪಾಸ್ ಪಡೆಯಲು ವಿದ್ಯಾರ್ಥಿಗಳು ಸೇವಾಸಿಂಧು ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಆದರೆ, ಅರ್ಜಿ ಸಲ್ಲಿಸಲು ಸೇವಾ ಸಿಂಧು ಸರ್ವರ್ ಸಮಸ್ಯೆ ಎದುರಾಗಿದ್ದು, ಕಾದು ಕಾದು ಸುಸ್ತಾಗಬೇಕು. ಇದರಿಂದ ಬಸ್ ಮೂಲಕ ಪ್ರಯಾಣಿಸುವ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ.
ಪ್ರತಿ ವರ್ಷದ ಶಾಲಾ ಕಾಲೇಜುಗಳು ಪ್ರಾರಂಭವಾದಾಗ ಸರ್ವರ್ ಸಮಸ್ಯೆ ಸರ್ವೇ ಸಾಮಾನ್ಯ ಎನ್ನುವಂತಾಗಿದೆ. ಈ ಬಗ್ಗೆ ಮೊದಲೇ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾದ ಸಾರಿಗೆ ಇಲಾಖೆ ಮತ್ತು ಸೇವಾ ಸಿಂಧು ನಿರ್ವಹಣೆ ಮಾಡುವ ಅಧಿಕಾರಿಗಳು ದಿವ್ಯ ನಿರ್ಲಕ್ಷೃ ವಹಿಸಿದ ಪರಿಣಾಮ ಸಮಸ್ಯೆ ತಲೆದೋರಿದೆ ಎನ್ನುತ್ತಾರೆ ವಿದ್ಯಾರ್ಥಿಗಳು.
ಸೇವಾಸಿಂಧು ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಲು ಆಧಾರ್ ಕಾರ್ಡ್‌ಗೆ ಲಿಂಕ್ ಆಗಿರುವ ಮೊಬೈಲ್‌ಗೆ 2 ಒಟಿಪಿ ಕಡ್ಡಾಯಗೊಳಿಸಲಾಗಿದೆ. ಆದರೆ, ಸೇವಾ ಸಿಂಧುನಲ್ಲಿ ಒಂದು ಒಟಿಪಿ ಮಾತ್ರ ಬರುತ್ತಿದ್ದು ಇನ್ನೊಂದು ಬರುತ್ತಿಲ್ಲ. ಒಮ್ಮೊಮ್ಮೆ ಬಂದರೂ ಮಾರ್ಗ ಬದಲಾವಣೆ ಸ್ಥಳ, ಎಲ್ಲಿಂದ ಎಲ್ಲಿಗೆ ಹೋಗುವ ಸ್ಥಳ ಎಂಬ ಕಾಲಂ ಬರುತ್ತಿಲ್ಲ. ಇದರಿಂದಾಗಿ, ಬಸ್ ಪಾಸ್‌ಗಾಗಿ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ ಎಂದು ವಿದ್ಯಾರ್ಥಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಅದೂ ಇಲ್ಲ, ಇದೂ ಇಲ್ಲ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಜೂನ್ 3ರಂದು ರಾಜ್ಯದ ಎಲ್ಲ ವಿದ್ಯಾರ್ಥಿಗಳ ಬಸ್ ಪಾಸ್ ಉಚಿತ ಎಂದು ಘೋಷಣೆ ಮಾಡಿದ್ದರು. ಆದರೆ, ಬಸ್‌ಪಾಸ್ ವಿತರಣೆಯ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲದ ಕಾರಣ ವಿತರಣೆಯನ್ನು ಸ್ಥಗಿತಗೊಳಿಸಲಾಗಿತ್ತು. ಜೂನ್ 10ರಂದು ಸರ್ಕಾರದ ಅಧಿಕೃತ ಆದೇಶ ಹೊರಬಿದ್ದರೂ, ಸರ್ವರ್ ಸಮಸ್ಯೆಯಿಂದ ಬಸ್‌ಪಾಸ್ ಅರ್ಜಿ ಸಲ್ಲಿಕೆ ಸಾಧ್ಯವಾಗುತ್ತಿಲ್ಲ.
ರಿಯಾಯಿತಿ ದರದ ಹಣಕ್ಕಿಂತಲೂ ಹೆಚ್ಚಿನ ಹಣ ಈಗಾಗಲೇ ಖರ್ಚಾಗಿದೆ. ಇತ್ತ ಉಚಿತವೂ ಇಲ್ಲ, ರಿಯಾಯಿತಿಯೂ ಇಲ್ಲದೆ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ಪ್ರತಿದಿನ ಮಕ್ಕಳಿಗೆ ಬಸ್ಸಿಗಾಗಿ ಹಣ ಕೊಟ್ಟು ಕಳುಹಿಸುವುದು ಅನೇಕ ಪಾಲಕರಿಗೆ ಕಷ್ಟವಾಗುತ್ತಿದೆ.
ಶಾಲಾ ಕಾಲೇಜುಗಳು ಪ್ರಾರಂಭವಾಗುವ ಮುಂಚೆಯೇ ಸಾರಿಗೆ ಸಂಸ್ಥೆ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಿತ್ತು. ಸೇವಾ ಸಿಂಧು ಪೋರ್ಟಲ್‌ನಲ್ಲಿ ಬಸ್ ಪಾಸ್ ಸೇವೆಯನ್ನು ಪ್ರಾರಂಭ ಮಾಡಿಕೊಳ್ಳಬೇಕಿತ್ತು. ಶಾಲಾ-ಕಾಲೇಜುಗಳು ಪ್ರಾರಂಭವಾಗಿ ಹದಿನೈದು ದಿನ ಕಳೆದರೂ ಬಸ್ ಪಾಸ್‌ಗೆ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ಇಲಾಖೆ ಹೇಳುವುದು ಒಂದು ಮಾಡುವುದು ಇನ್ನೊಂದು ಎಂಬಂತಾಗಿದೆ. ಅನಿವಾರ್ಯವಾಗಿ ಹಣ ನೀಡಿ ಶಾಲಾ-ಕಾಲೇಜುಗಳಿಗೆ ಪ್ರಯಾಣಿಸುತ್ತಿದ್ದೇವೆ.
— ವೀರೇಶ ಜಗ್ಗಲ, ಕೋಟುಮಚಗಿ ವಿದ್ಯಾರ್ಥಿ
ವಿದ್ಯಾರ್ಥಿ ಉಚಿತ ಬಸ್‌ಪಾಸ್ ಅರ್ಜಿ ಸಲ್ಲಿಸುವಲ್ಲಿ ಆಗುತ್ತಿರುವ ತಾಂತ್ರಿಕ ತೊಂದರೆ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಅದನ್ನು ಸರಿಪಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.
— ಪಿ.ವಿ. ಮೇತ್ರಿ, ಜಿಲ್ಲಾದಿಕಾರಿ, ಕೆಎಸ್‌ಆರ್‌ಟಿಸಿ ಗದಗ