ಜೇನು ಹುಳುಗಳನ್ನು ಓಡಿಸಲು ರಸ್ತೆ ಪಕ್ಕ ಬೆಂಕಿ ಹಚ್ಚಿರುವ ಜನರು.
ರೋಣ: ಹುಣಸೆಕಾಯಿ ಕೀಳಲು ಮರ ಏರಿದ್ದವನ ಮೇಲೆ ಹೆಜ್ಜೇನು ದಾಳಿ ನಡೆಸಿದ ಪರಿಣಾಮ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಶುಕ್ರವಾರ ನಡೆದಿದೆ.
ತಾಲೂಕಿನ ಚಿಕ್ಕಮಣ್ಣೂರ ಗ್ರಾಮದ ಚಂದ್ರು ಮೇಟಿ ಗಾಯಗೊಂಡವರು. ರೋಣ- ಹುಬ್ಬಳ್ಳಿ ಮುಖ್ಯರಸ್ತೆಯಲ್ಲಿ ಸಾಕಷ್ಟು ಹುಣಸೆ ಮರಗಳಿವೆ. ಪ್ರತಿ ವರ್ಷದಂತೆ ಈ ವರ್ಷವೂ ಹುಣಸೆಕಾಯಿ ಕೀಳಲು ಮರ ಏರಿದ್ದಾನೆ. ಆದರೆ, ಮರದಲ್ಲಿನ ಹೆಜ್ಜೇನು ಹುಳುಗಳು ಆತನ ಮೇಲೆ ಏಕಾಏಕಿ ದಾಳಿ ನಡೆಸಿವೆ. ಕಂಗೆಟ್ಟು ಮರದಿಂದ ಕೆಳಗೆ ಕುಸಿದು ಬಿದ್ದಿದ್ದಾನೆ. ಕೆಳಗೆ ಬಿದ್ದರೂ ಆತನನ್ನು ಬಿಡದೇ ಕಚ್ಚಿ ಗಾಯಗೊಳಿಸಿವೆ. ಸ್ಥಳಕ್ಕೆ ಬಂದ ಚಿಕ್ಕಮಣ್ಣೂರ ಗ್ರಾಮಸ್ಥರು ರಸ್ತೆಯ ಅಕ್ಕಪಕ್ಕ ಬೆಂಕಿ ಹಚ್ಚಿ ಜೇನು ಹುಳುಗಳನ್ನು ಓಡಿಸಿದ್ದಾರೆ. ಆದರೆ, ಹೆಜ್ಜೇನು ದಾಳಿಯಿಂದ ಗಂಭೀರ ಗಾಯಗೊಂಡ ಚಂದ್ರು ಪ್ರಜ್ಞೆ ತಪ್ಪಿದ್ದಾರೆ.