ರೋಣದ ರಾಜೀವ ಗಾಂಧಿ ಆಯುರ್ವೇದ ಮೆಡಿಕಲ್ ಕಾಲೇಜ್‌ನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮಾತೋಶ್ರೀ ಬಸಮ್ಮನವರ 22ನೇ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮದ ಮಹಿಳಾ ಗೋಷ್ಠಿಯನ್ನು ಡಾ. ನಾಗಲಕ್ಮೀ ಚೌಧರಿ ಉದ್ಘಾಟಿಸಿದರು. ಶ್ರೀ ಶಿವಶಾಂತವೀರ ಶರಣರು, ಅಧ್ಯಕ್ಷೆ ಸುಧಾ ಹುಚ್ಚಣ್ಣವರ, ಶಶಿಕಲಾ ಬಾಣಿ, ಶಶಿಕಲಾ ಪಾಟೀಲ, ಮಿಥುನ್ ಜಿ. ಪಾಟೀಲ ಇದ್ದರು. 
ಗದಗ

ಮಹಿಳೆಯನ್ನು ಪೂಜಿಸುವ ಮನೆ ನಂದಗೋಕುಲ womens session

ಪ್ರಮುಖ ಮುಖ್ಯಾಂಶಗಳು

  • ರೋಣ ಮಹಿಳಾ ಗೋಷ್ಠಿ

ರೋಣ: ಮಹಿಳೆಯನ್ನು ಪೂಜಿಸುವ ಮನೆ ನಂದಗೋಕುಲವಾಗುತ್ತದೆ. ಹೀಗಾಗಿ, ಪ್ರತಿಯೊಬ್ಬರೂ ಮನೆಯಲ್ಲಿ ಹೆಣ್ಣನ್ನು ಪೂಜನೀಯ ಭಾವದಿಂದ ಕಾಣಬೇಕು ಎಂದು ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಹೇಳಿದರು.

ಪಟ್ಟಣದ ರಾಜೀವ ಗಾಂಧಿ ಆಯುರ್ವೇದ ಮೆಡಿಕಲ್ ಕಾಲೇಜ್‌ನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮಾತೋಶ್ರೀ ಬಸಮ್ಮನವರ ಪುಣ್ಯ ಸ್ಮರಣೋತ್ಸವದ ಮಹಿಳಾ ಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.
ಪಾಲಕರು ಹೆಣ್ಣು ಹಾಗೂ ಗಂಡು ಮಕ್ಕಳನ್ನು ಪ್ರೀತಿಯಿಂದ ಕಾಣಬೇಕು. ಮಕ್ಕಳನ್ನು ಗೆಳೆಯರಂತೆ ಕಂಡಾಗ ಅವರೂ ನಮ್ಮನ್ನು ಆತ್ಮೀಯತೆಯಿಂದ ಕಾಣುತ್ತಾರೆ. ಇಲ್ಲದಿದ್ದರೆ, ನಮ್ಮ ಬಳಿ ಸುಳ್ಳು ಹೇಳುತ್ತಾರೆ ಎಂದರು.
ಓದುವ ವಯಸ್ಸಿನಲ್ಲಿ ಪ್ರೀತಿ ಬೇಡ: ಓದುವ ವಯಸ್ಸಿನಲ್ಲಿ ಪ್ರೀತಿ ಮಾಡಬಾರದು. ಓದಿ ವಿದ್ಯಾವಂತರಾಗಿ ಗುರಿ ಸಾಧಿಸಿದ ನಂತರ ಪ್ರೀತಿ ಮಾಡಿ. ಮನೆಯಲ್ಲಿ ತಂದೆ-ತಾಯಿಯನ್ನು ಒಪ್ಪಿಸಿ ಮದುವೆಯಾಗಿ ಸಂತಸದಿಂದ ಬಾಳಿ ಎಂದು ಹೆಣ್ಣು ಮಕ್ಕಳಿಗೆ ಸಲಹೆ ನೀಡಿದರು.
112, 181 ಸಂಖ್ಯೆ ನೆನಪಿರಲಿ: 
ಹೆಣ್ಣು ಮಕ್ಕಳು ಯಾವುದೇ ತೊಂದರೆಗೆ ಒಳಗಾದರೂ ಮೊದಲು 112 ಅಥವಾ 181 ಸಂಖ್ಯೆಗೆ ಕರೆ ಮಾಡಬೇಕು. ಇದರಿಂದ ತೊಂದರೆಗೊಳಗಾಗುವದನ್ನು ತಪ್ಪಿಸಬಹುದು. ಹೆಣ್ಣು ಮಕ್ಕಳು ಯಾವಾಗಲೂ 112, 181 ಸಂಖ್ಯೆಯನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು ಎಂದರು. ಬಳಗಾನೂರ ಚಿಕೇನಕೊಪ್ಪದ ಶ್ರೀ ಶಿವಶಾಂತವೀರ ಶರಣರು ಆಶೀರ್ವಚನ ನೀಡಿದರು. ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಸುಧಾ ಹುಚ್ಚಣ್ಣವರ, ಶಶಿಕಲಾ ಬಾಣಿ, ಶಶಿಕಲಾ ಪಾಟೀಲ, ಮಿಥುನ್ ಜಿ. ಪಾಟೀಲ, ಐ.ಬಿ. ಕೊಟ್ಟೂರಶೆಟ್ಟಿ ಇತರರು ಇದ್ದರು.

ರೋಗಿಗಳಿಗೆ ಚಿಕಿತ್ಸೆ  ನಿರಾಕರಿಸಬೇಡಿ

ರೋಣ: ಪಟ್ಟಣದ ಭೀಮಸೇನೆ ಜೋಶಿ ತಾಲೂಕು ಆಸ್ಪತ್ರೆಗೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಭೇಟಿ ನೀಡಿ ಪರಿಶೀಲಿಸಿದರು. ಮಹಿಳಾ ವಾರ್ಡ್‌ಗಳಿಗೆ ಭೇಟಿ ನೀಡಿದ ಅವರು, ರೋಗಿಗಳೊಂದಿಗೆ ಆಸ್ಪತ್ರೆಯಲ್ಲಿ ಸೌಲಭ್ಯಗಳ ಕುರಿತು ಸಮಾಲೋಚನೆ ನಡೆಸಿದರು. ನಂತರ ಊಟ, ಚಿಕಿತ್ಸೆ ನೀಡುವ ಬಗ್ಗೆ ರೋಗಿಗಳಿಂದ ಮಾಹಿತಿ ಪಡೆದರು. ನಂತರ ವೈದ್ಯರೊಂದಿಗೆ ಸಮಾಲೋಚನೆ ನಡೆಸಿದ ಅವರು, ರೋಗಿಗಳಿಗೆ ಯಾವುದೇ ಕಾರಣಕ್ಕೂ ಚಿಕಿತ್ಸೆ ನಿರಾಕರಿಸಬಾರದು. ರೋಗಿಗಳನ್ನು ಅಲೆದಾಡಿಸಬಾರದು ಎಂದು ಸೂಚಿಸಿದರು.